ಚಿರತೆ ಪ್ರತ್ಯಕ್ಷ, ನೌಕರರ ಆತಂಕ

ಕಾರವಾರ:  ಇಲ್ಲಿನ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ನೌಕರರು ಆತಂಕಗೊಂಡಿದ್ದಾರೆ.  ಸಂಕ್ರುಬಾಗ ಗೇಟ್​ನ ಸಮೀಪ ಅಂದಾಜು 4 ರಿಂದ 5 ವರ್ಷದ ಚಿರತೆ ಮಂಗಳವಾರ ರಾತ್ರಿ ಕುಳಿತಿರುವುದನ್ನು ನೌಕರರು ಗಮನಿಸಿದ್ದಾರೆ. ಚಿರತೆ ಸುಮಾರು 2 ತಾಸಿಗೂ ಹೆಚ್ಚು ಕಾಲ ಕುಳಿತು ನಂತರ ವಾಪಸಾಗಿದೆ.

ನೌಕಾನೆಲೆ ವ್ಯಾಪ್ತಿಯಲ್ಲಿ ಈ ಹಿಂದೆಯೂ ಚಿರತೆ ಕಾಣಿಸಿಕೊಂಡಿತ್ತು. ಈಗ ನೌಕಾನೆಲೆಯ ಕಾಂಪೌಂಡ್ ಹೊರ ಭಾಗದಲ್ಲಿ ಚುತಷ್ಪಥಕ್ಕಾಗಿ ಗುಡ್ಡವನ್ನು ಕೊರೆಯಲಾಗುತ್ತಿದೆ. ಒಳಗೆ ನೌಕಾನೆಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳು ನಡೆದಿವೆ. ಇದರಿಂದ ಚಿರತೆಯ ಸುಗಮ ಓಡಾಟಕ್ಕೆ ತೊಂದರೆ ಉಂಟಾದಂತಿದ್ದು, ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ. ‘ನೌಕಾನೆಲೆ ವ್ಯಾಪ್ತಿಯ ಒಳಗೆ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ. ಅಲ್ಲದೆ, ಅದು ಚಿರತೆಗಳ ನೈಸರ್ಗಿಕ ಆವಾಸ ಸ್ಥಾನ ಕೂಡ. ಆಗಾಗ ಚಿರತೆ ಕಂಡುಬರುತ್ತದೆ ಎಂಬ ಮಾಹಿತಿಯನ್ನು ನೌಕಾ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಅದು ಯಾರಿಗೂ ತೊಂದರೆ ಕೊಟ್ಟ ಉದಾಹರಣೆ ಇಲ್ಲ. ಇದರಿಂದ ಸುಮ್ಮನೆ ಅದನ್ನು ಹಿಡಿಯುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಎಸಿಎಫ್ ಮಂಜುನಾಥ ನಾವಿ ಪ್ರತಿಕ್ರಿಯಿಸಿದರು.