ಹನಗೋಡು: ಹೋಬಳಿಯ ಕೆ.ಜಿ.ಹೆಬ್ಬನಕುಪ್ಪೆ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿವೆ.
ಗ್ರಾಮದ ಟಿ.ಎಂ.ಚಂದ್ರಶೇಖರ್ ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ ಜರ್ಸಿ ತಳಿಯ ಎರಡು ಹೆಣ್ಣು ಕರುಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕುದೆ. ಚಿರತೆ ಕಂಡು ನಾಯಿಗಳು ಬೊಗಳಲು ಆರಂಭಿಸಿದರಿಂದ ಗಾಬರಿಗೊಂಡ ಮನೆಯವರು ಕೊಟ್ಟಿಗೆ ಬಳಿ ತೆರಳಿ ನೋಡಿದಾಗ ಗಾಬರಿಗೊಂಡ ಚಿರತೆ ಕರುವನ್ನು ಬಿಟ್ಟು ಓಡಿ ಹೋಗಿದೆ.
ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಸ್ಥಳಕ್ಕೆ ನೀಡಿ ಮಹಜರು ನಡೆಸಿ ಹೆಜ್ಜೆ ಜಾಡು ಹಿಡಿದು ಚಿರತೆ ಕಾಡಿಗೆ ತೆರಳಿರುವ ಬಗ್ಗೆ ಖಾತರಿಪಡಿಸಿದ್ದಾರೆ. ರಾತ್ರಿ ವೇಳೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಬೇಕೆಂದು ಡಿಆರ್‌ಎಫ್‌ಒ ಸಿದ್ದರಾಜು ಮನವಿ ಮಾಡಿದ್ದಾರೆ.
ಒತ್ತಾಯ: ಕಾಡಂಚಿನ ಗ್ರಾಮಗಳಲ್ಲಿ ಹುಲಿ-ಚಿರತೆಗಳು ಆಗಿಂದಾಗ್ಗೆ ಗ್ರಾಮಗಳಿಗೆ ಲಗ್ಗೆಯಿಟ್ಟು ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿವೆ. ಕೂಡಲೇ ಅರಣ್ಯ ಇಲಾಖೆಯವರು ಅರಣ್ಯದಂಚಿನಲ್ಲಿ ಬೋನಿಟ್ಟು ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮದ ಯುವ ಮುಖಂಡ ಜಾನ್ಸನ್ ಒತ್ತಾಯಿಸಿದ್ದಾರೆ.