ಚಿನ್ನ ಗೆದ್ದ ಕರುನಾಡ ಕುವರಿ

ಇದೇ ಮೇ 3. ಮಲೇಷ್ಯಾದ ಬೃಹತ್ ವೇದಿಕೆಯೊಂದು ಕರಾಟೆ ಪಟುಗಳಿಂದ ತುಂಬಿ ಹೋಗಿತ್ತು. 20 ದೇಶಗಳ 200ಕ್ಕೂ ಅಧಿಕ ಘಟಾನುಘಟಿ ಕರಾಟೆ ಪಟುಗಳು ಅಲ್ಲಿದ್ದರು. ಎಲ್ಲರ ಕಣ್ಣಿನಲ್ಲೂ ಚಿನ್ನದ ಕನಸು.

ಅವರಲ್ಲೊಬ್ಬರು ಭಾರತವನ್ನು ಪ್ರತಿನಿಧಿಸಿದ್ದ ಕರುನಾಡ ಯುವತಿ ರುಮಾನಾ ಕೌಸರ್. ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಆಗತಾನೇ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದರು ರುಮಾನಾ ಅದರ ನಡುವೆಯೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಸ್ಪರ್ಧೆಯ ಎಲ್ಲಾ ಹಂತಗಳು ಮುಗಿಯುವವರೆಗೂ ಚಿನ್ನ ಯಾರ ಕೊರಳಿಗೆ ಬೀಳುತ್ತದೆ ಎಂಬ ಕಾತರದಲ್ಲಿದ್ದರು ಕ್ರೀಡಾಸಕ್ತರು. ಕೊನೆಗೆ ಅದು ದಕ್ಕಿದ್ದು ರುಮಾನಾ ಕೌಸರ್ ಅವರಿಗೆ. 20 ದೇಶಗಳ ಎಲ್ಲಾ ಸ್ಪರ್ಧಾಳುಗಳನ್ನು ಹಿಂದಿಕ್ಕಿ, ಚಿನ್ನದ ಪದಕವನ್ನು ಕೊರಳಿಗೆ ಏರಿಸಿಕೊಂಡೇ ಬಿಟ್ಟ ರುಮಾನಾ, ಜತೆಗೆ ಎರಡು ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ಪಡೆದುಕೊಂಡರು.

ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ರುಮಾನಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನವರು. ತಂದೆ ರಷೀದ್ ಅಹಮ್ಮದ್ ಆಟೋ ಡ್ರೖೆವರ್. ತಾಯಿ ಶಬಾನಾ. ತಂದೆ ಆಟೋ ಓಡಿಸಿದರಷ್ಟೇ ಮನೆಗೆ ಆರ್ಥಿಕ ನೆರವು. ಚಿಕ್ಕ ವಯಸ್ಸಿನಿಂದಲೇ ರುಮಾನಾಗೆ ಕರಾಟೆ ಎಂದರೆ ಬಹು ಪ್ರೀತಿ. ಆದ್ದರಿಂದ ಮನೆಯಲ್ಲಿ ತೀರಾ ಬಡತನವಿದ್ದರೂ ಮಗಳ ಕರಾಟೆಯ ಉತ್ಸಾಹಕ್ಕೆ ನೀರೆರೆದು ಪೋಷಿಸುತ್ತಲೇ ಬಂದವರು ಪಾಲಕರು.

ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ನೂರಾರು ಪದಕಗಳನ್ನು ಗಳಿಸಿರುವ ರುಮಾನಾ ಅವರಿಗೆ ಮಲೇಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸುವ ಅವಕಾಶ ಕೂಡಿ ಬಂದಿತ್ತು. ಮಲೇಷ್ಯಾಕ್ಕೆ ತೆರಳುವ ಮುನ್ನ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ನಡೆದ ಅರ್ಹತಾ ಸ್ಪರ್ಧೆಯಲ್ಲೂ ಜಯಶೀಲರಾಗಿದ್ದರು. ಆದರೆ ತೀವ್ರ ಹಣಕಾಸಿನ ಮುಗ್ಗಟ್ಟು. ಮಲೇಷ್ಯಾಕ್ಕೆ ಹೋಗಲು ದುಡ್ಡು ಹೊಂದಿಸಿಕೊಳ್ಳುವುದು ಕಷ್ಟವಾಯಿತು. ಅಷ್ಟರಲ್ಲಿಯೇ ಅವರಿಗೆ ಕಿಡ್ನಿ ಕಲ್ಲಿನ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಮಧ್ಯೆಯೇ, ರುಮಾನಾ ಅವರಿಗೆ ಹಲವು ದಾನಿಗಳು ಧನಸಹಾಯ ಮಾಡಿದರು.

ದಾನಿಗಳ ಹಣದ ನೆರವಿನ ಮೂಲಕ ಮಲೇಷ್ಯಾ ತಲುಪಿದ ರುಮಾನಾ ಅಲ್ಲಿ ಭಾರತದ ಕೀರ್ತಿಪತಾಕೆ ಹಾರಿಸಿದ್ದಾರೆ. ಇಂಥ ಪ್ರತಿಭೆಗಳಿಗೆ ಸರ್ಕಾರಗಳು, ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ ಎನ್ನುವುದು ಕ್ರೀಡಾಸಕ್ತರ ಮಾತು.

Leave a Reply

Your email address will not be published. Required fields are marked *