ಚಿನ್ನದ ಹುಡುಗಿ ಸಂಭ್ರಮಕ್ಕೆ ಪಾಲಕರ ಸಾಕ್ಷಿ

ಶಿವಮೊಗ್ಗ: ಕುವೆಂಪು ವಿವಿಯ 29ನೇ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದ ಚಿನ್ನದ ಹುಡುಗಿ ಚಿಕ್ಕಮಗಳೂರು ಐಡಿಎಸ್​ಜಿ ಕಾಲೇಜಿನ ವಿದ್ಯಾರ್ಥಿನಿ ಕೆ.ಎಂ. ನೇತ್ರಾವತಿ ಸಂಭ್ರಮಕ್ಕೆ ಅವರ ಪಾಲಕರು ಸಾಕ್ಷಿಯಾದರು.ಮಗಳ ಸಾಧನೆ ಬಗ್ಗೆ ಪಾಲಕರು ಹೆಮ್ಮೆಯ ಭಾವ ಪ್ರಕಟಿಸಿದರು. ಸಹೋದರರು ಬೆನ್ನು ತಟ್ಟಿ ಇನ್ನಷ್ಟು ಪ್ರೋತ್ಸಾಹಿಸಿದರು. ಮನೆಯವರ ಬೆಂಬಲಕ್ಕೆ ನೇತ್ರಾವತಿ ಧನ್ಯವಾದ ಸಲ್ಲಿಸಿದರು.

ಚಿನ್ನದ ಹುಡುಗನಿಗೆ ಸಂಶೋಧನೆಯ ಗುರಿ: ಭದ್ರಾವತಿಯ ಸೀಗೆಬಾಗಿ ಹುಡುಗ ಎನ್.ಅಲಿ ಅಹಮ್ಮದ್, ಎಂಎಸ್ಸಿ ರಾಸಾಯನ ಶಾಸ್ತ್ರದಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಐದು ಸ್ವರ್ಣ ಪದಕ ತನ್ನದಾಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಬಯೋಕಾನ್​ನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಮುಂದೆ ಸಂಶೋಧನೆಯಲ್ಲಿ ತೊಡಗುವ ಬಯಕೆಯಿದೆ. ಸೀಗೆಬಾಗಿಯಲ್ಲಿ ತಂದೆ ದಿನಸಿ ಅಂಗಡಿ ನಡೆಸುತ್ತಿದ್ದ ಸಂದರ್ಭದಲ್ಲಿ ತಂದೆಗೆ ನೆರವಾಗುತ್ತಲೇ ವ್ಯಾಸಂಗದಲ್ಲಿ ತೊಡಗಿದ್ದೆ. ಈಗ ಉತ್ತಮ ಅಂಕ ಬಂದಿರುವುದು, ಎಲ್ಲರೂ ಗುರುತಿಸುವ ಸಾಧನೆ ಮಾಡಿರುವುದು ಹೆಮ್ಮೆ ಮೂಡಿಸಿದೆ ಎಂದು ಅಲಿ ಅಹಮದ್ ಹರ್ಷ ವ್ಯಕ್ತಪಡಿಸಿದರು.

ಬೇರೆಯವರ ಬಗ್ಗೆ ಗಮನಬೇಡ: ಬೇರೆಯವರು ನಿಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬ ಚಿಂತೆ ಬಿಡಿ. ನಿಮ್ಮ ಸಾಧನೆಯ ಹಾದಿಯಲ್ಲಿ ಮುಂದೆ ಸಾಗಿ ಇವು ಎಂಬಿಎ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ರಂಗೇನಹಳ್ಳಿಯ ಟಿ.ಪ್ರಿಯಾಂಕ ಮಾತುಗಳು.

ಪ್ರಸ್ತುತ ಬೆಂಗಳೂರಿನ ಸಹಾರಾ ಲೇಬಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈಕೆ ಆರನೇ ತರಗತಿಯಿಂದಲೇ ತಂದೆ, ತಾಯಿ ಕುಟುಂಬದಿಂದ ದೂರವುಳಿದು ವಾಸಂಗ ಮಾಡಿದಾಕೆ. ರಜೆಯಲ್ಲಷ್ಟೇ ಮನೆ. ಉಳಿದೆಲ್ಲಾ ಸಮಯ ಕೇವಲ ಓದಿಗೆ ಸೀಮಿತ.

ಆರನೇ ತರಗತಿಗೆ ಜವಾಹರ್ ನವೋದಯದಲ್ಲಿ ಪ್ರವೇಶ ಪಡೆದ ಇವರು, 10ನೇ ತರಗತಿವರೆಗೆ ಬಾಳೆಹೊನ್ನೂರಿನ ಜವಾಹರ್ ನವೋದಯದಲ್ಲಿ ವ್ಯಾಸಂಗ ಮಾಡಿದರು. 9ನೇ ತರಗತಿಗೆ ಒಂದು ವರ್ಷ ಮಧ್ಯಪ್ರವೇಶದಲ್ಲಿ ಓದುವ ಅವಕಾಶವೂ ಸಿಕ್ಕಿತ್ತು. ಪದವಿಪೂರ್ವ ಶಿಕ್ಷಣ ಮಡಿಕೇರಿಯ ಜವಾಹರ್ ನವೋದಯಲ್ಲಿ. ಅದಾದ ಬಳಿಕ ಮನೆಯಲ್ಲೇ ಇದ್ದು ವ್ಯಾಸಂಗ ಮುಂದುವರೆಸಿದ್ದರು.

ಗಂಡನ ಸಹಕಾರದಿಂದ ಸಿಕ್ಕ ಸ್ವರ್ಣ: ಪತಿ ಹಿತೇಂದ್ರ ಬೆಂಗಳೂರಿನಲ್ಲಿ ಸರ್ಕಾರಿ ಇಲಾಖೆಯೊಂದರಲ್ಲಿ ಇಂಜನಿಯರ್. ಪತ್ನಿ ಚಿತ್ರದುರ್ಗದ ವಿಮೋಚನ ಅವರಿಗೆ ಸಂಪೂರ್ಣ ಬೆಂಬಲ ನೀಡಿದ ಹಿತೇಂದ್ರ ಆಕೆಯ ಸಾಧನೆಯ ಹಾದಿಗೆ ಪ್ರೇರಕರಾದರು. ಇದರ ಪರಿಣಾಮ ವಿಮೋಚನಗೆ ಸಮಾಜಶಾಸ್ತ್ರ ಸ್ನಾತಕೋತ್ತರದಲ್ಲಿ ನಾಲ್ಕು ಸ್ವರ್ಣ ಪದಕ ಲಭಿಸಿದೆ.

ವಿಮೋಚನ ಮೊದಲ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವೇಳೆ ಕೊಟ್ಟೂರಿನ ಹಿತೇಂದ್ರ ಅವರೊಂದಿಗೆ ವಿವಾಹವಾಯಿತು. ಆದರೆ ಪತ್ನಿಯ ಓದಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅವರನ್ನು ವಿವಿಯ ಹಾಸ್ಟೆಲ್​ನಲ್ಲಿ ಇರುವಂತೆ ನೋಡಿಕೊಂಡರು. ಇಬ್ಬರ ಭೇಟಿ ತಿಂಗಳಿಗೊಮ್ಮೆ. ಹೆಚ್ಚೆಂದರೆ ಎರಡು ಬಾರಿ. ನನ್ನ ಈ ಸಾಧನೆಗೆ ಒತ್ತಾಸೆಯಾಗಿ ನಿಂತವರು ನನ್ನ ಪತಿ ಎಂದು ವಿಮೋಚನ ಹೆಮ್ಮೆಯಿಂದ ಹೇಳಿಕೊಂಡರು. ಗರ್ಭಿಣಿ ಪತ್ನಿಯೊಂದಿಗೆ ಘಟಿಕೋತ್ಸವಕ್ಕೆ ಆಗಮಿಸಿದ್ದ ಹಿತೇಂದ್ರ ಮೊಗದಲ್ಲಿ ಸಾರ್ಥಕ ಭಾವ ಎದ್ದು ಕಾಣುತ್ತಿತ್ತು.

ಶುಲ್ಕ ಕಡಿಮೆ ಅಂತ ಗಣಿತ ತಗೊಂಡೆ: ಎಂಎಸ್ಸಿ ಗಣಿತಶಾಸ್ತ್ರದಲ್ಲಿ ಮೂರು ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದ ಭದ್ರಾವತಿ ಜನ್ನಾಪುರದ ವಿಮಲಾ ಅವರ ಆತ್ಮವಿಶ್ವಾಸ ನುಡಿ ಇವು. ನನಗೆ ಗಣಿತದಲ್ಲಿ ಆಸಕ್ತಿಯಿತ್ತು. ಮನೆಯಲ್ಲಿ ಬಡತನವೂ ಇತ್ತು. ಎಂಎಸ್ಸಿಯಲ್ಲಿ ಯಾವ ಕೋರ್ಸ್​ಗೆ ಕಡಿಮೆ ಶುಲ್ಕ ಎಂದು ನೋಡಿದಾಗ ಕಾಣಿಸಿದ್ದೇ ಗಣಿತ. ಅದನ್ನೇ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಿದೆ. ಶೇ 90 ಅಂಕ ಪಡೆದಿರುವುದು ಖುಷಿ ತಂದಿದೆ. ಐಎಎಸ್ ಮಾಡಬೇಕು ಎಂಬುದು ಪಾಲಕರ ಬಯಕೆ. ನಾನು ಐಎಎಸ್ ಪಾಸ್ ಮಾಡೇ ಮಾಡ್ತೀನಿ ಎಂದು ವಿಮಲಾ ಹೇಳಿದರು.

ಐದು ವರ್ಷದ ಹಿಂದೆಯೇ ತಂದೆ ರಾಯಲ್ ಸಿಂಗ್ ತೀರಿಕೊಂಡರು. ತಾಯಿ ಲೂಯಿಸ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ತಂಗಿ ಶೀಲಾ ಬಿಕಾಂಗೆ ವ್ಯಾಸಂಗ ನಿಲ್ಲಿಸುವ ಮೂಲಕ ನನಗಾಗಿ ತ್ಯಾಗ ಮಾಡಿದ್ದಾಳೆ. ಪ್ರಸ್ತುತ ಅಂಚೆ ಇಲಾಖೆಯಲ್ಲಿ ನೌಕರಿಯೂ ಸಿಕ್ಕಿದೆ. ವೃತ್ತಿಯಲ್ಲಿ ಇನ್ನೂ ಉತ್ತಮ ಸ್ಥಾನಕ್ಕೆ ತಲುಪುವ ಬಯಕೆಯಿದೆ. ಅದನ್ನು ಈಡೇರಿಸಿಕೊಳ್ಳುತ್ತೇನೆ ಎಂದರು.

ಗೌರವ ಡಾಕ್ಟರೇಟ್ ಪ್ರದಾನ: ಘಟಿಕೋತ್ಸವದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 10,981 ಪುರುಷರು ಹಾಗೂ 16,466 ಮಹಿಳೆಯರು ಸೇರಿದಂತೆ ಒಟ್ಟು 27,447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 150 ಪುರುಷರು, 55 ಮಹಿಳೆಯರು ಸೇರಿದಂತೆ 205 ಅಭ್ಯರ್ಥಿಗಳು ಪಿಎಚ್​ಡಿ ಪದವಿ ಸ್ವೀಕರಿಸಿದರು.