ಲೋಕೇಶ್ ಸುರತ್ಕಲ್
ಐದು ದಶಕದಿಂದ ಭರವಸೆಯಾಗಿಯೇ ಉಳಿದಿರುವ ಚಿತ್ರಾಪುರ ಮೀನುಗಾರಿಕಾ ಜೆಟ್ಟಿ ಯೋಜನೆಗೆ ಮರು ಟೆಂಡರ್ ಕರೆಯುವ ಪ್ರಸ್ತಾಪ ನ.25ರಂದು ನಡೆದ ಎನ್ಎಂಪಿಟಿ ಬೋರ್ಡ್ ಮೀಟಿಂಗ್ನಲ್ಲಿ ಮಂಡಿಸಲ್ಪಟ್ಟಿದೆ. ಈ ಬಗ್ಗೆ ನಿರ್ಣಯ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಬಂದರು ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.
ಈ ಹಿಂದೆ ಯೋಜನೆಯ ಮೊದಲ ಹಂತಕ್ಕೆ 44.13 ಕೋಟಿ ರೂ.ನ ಬ್ರೇಕ್ ವಾಟರ್ ಯೋಜನೆಗೆ ಡಿಸೆಂಬರ್ ಸುಮಾರಿಗೆ ಟೆಂಡರ್ ಕರೆಯಲಾಗಿತ್ತು. ಬಿಡ್ ಸಲ್ಲಿಸಿದ್ದ ಒಟ್ಟು ಐವರು ಗುತ್ತಿಗೆದಾರರ ಪೈಕಿ ತಾಂತ್ರಿಕ ಬಿಡ್ನಲ್ಲಿ ತಿರಸ್ಕೃತಗೊಂಡಿದ್ದ ಇಬ್ಬರು ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದ ಕಾರಣ ಯೋಜನೆ ವಿಳಂಬಕ್ಕೆ ಕಾರಣವಾಗಿತ್ತು. ಈಗ ವಿವಾದ ಇತ್ಯರ್ಥವಾದ ಕಾರಣ ಮರು ಟೆಂಡರ್ ಪ್ರಸ್ತಾಪವನ್ನು ಬೋರ್ಡ್ ಮೀಟಿಂಗ್ ಎದುರು ಇರಿಸುವ ಹಾದಿ ಸುಗಮವಾಗಿದೆ.
ಯೋಜನೆಗೆ ಹಿಂದಿನ ಟೆಂಡರ್ ಹಂತದ ಅಂದಾಜು ವೆಚ್ಚ 196.51 ಕೋಟಿ ರೂ. ಆಗಿದ್ದು, ಈ ಪೈಕಿ ಕೇಂದ್ರ ಸರ್ಕಾರ ಸಾಗರ್ಮಾಲಾ ಯೋಜನೆ ಮೂಲಕ ಶೇ.50 (98.25 ಕೋಟಿ ರೂ.). ಎನ್ಎಂಪಿಟಿ ಶೇ.45 (88.43 ಕೋಟಿ ರೂ.) ರಾಜ್ಯ ಸರ್ಕಾರ ಶೇ.5(9.83 ಕೋಟಿ ರೂ.) ಭರಿಸಬೇಕಾಗಿತ್ತು. ಈಗ ಒಟ್ಟು ಯೋಜನೆ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಶಿಲಾನ್ಯಾಸಕ್ಕೆ ವರ್ಷ: ಯೋಜನೆಗೆ ಕಳೆದ ಮಾ.5ರಂದು ಚುನಾವಣೆಗೆ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಸದ ನಳಿನ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ ಮೊದಲಾದವರ ಸಮ್ಮುಖ ಶಿಲಾನ್ಯಾಸ ನಡೆಸಿದ್ದರು. ಈಗ ಟೆಂಡರ್ ಪ್ರಕಿಯೆಗೆ ಚಾಲನೆ ದೊರೆತರೂ ಮಾರ್ಚ್ಗೆ ಮೊದಲು ಕಾಮಗಾರಿ ಆರಂಭವಾಗುವ ಸಾಧ್ಯತೆ ಕಷ್ಟ ಎಂದು ಮೀನುಗಾರರು ಹೇಳುತ್ತಾರೆ.
ಶೀಘ್ರ ಕಾಮಗಾರಿಗೆ ಮೀನುಗಾರರ ಆಗ್ರಹ: ಅರ್ಧ ಶತಮಾನದಿಂದ ನನೆಗುದಿಗೆ ಬಿದ್ದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇನ್ನಷ್ಟು ವಿಳಂಬ ಮಾಡಬಾರದು. ಕಾಮಗಾರಿಗೆ ಎದುರಾಗಬಹುದಾದ ಅಡೆತಡೆ ನಿವಾರಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರೈಸುವುವುದಾಗಿ ಮೀನುಗಾರರಿಗೆ ನೀಡಿದ ಭರವಸೆ ಈಡೇರಿಸಬೇಕು ಎಂದು ನವಮಂಗಳೂರು ಬಂದರು ನಿರ್ವಸಿತ ಮೊಗವೀರ ನಾಲ್ಕುಪಟ್ಣ ಸಂಯುಕ್ತ ಸಭಾದ ಅಧ್ಯಕ್ಷ ಮೋಹನ್ ಕೋಡಿಕಲ್ ಹಾಗೂ ಇತರ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.