ಚಿಕ್ಕ ಮನೆಯಾದರೆ ಏನಂತೆ…

| ಲಕ್ಷ್ಮೀ ರೆಬ್ಬನ್ನವರ

ಮನೆ ಚೆನ್ನಾಗಿದ್ದರೆ ಮನಸ್ಸು ಚೆನ್ನಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮನೆ ಕಟ್ಟಿಸಿ ನೋಡು ಮದುವೆ ಮಾಡಿ ನೋಡು ಎಂಬ ಮಾತು ಸುಮ್ಮನೆ ಹೇಳಲ್ಲ. ಸೈಟ್ ಖರೀದಿಸಿ ಮನೆ ಕಟ್ಟುವುದು ಅಷ್ಟು ಸುಲಭವಲ್ಲ. ಸಾಲ ಮಾಡಿ ದೊಡ್ಡ ಮನೆ ಕಟ್ಟಬೇಕೆಂಬ ಆಸೆಯನ್ನು ಬಿಟ್ಟು ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಲೇಸು ಎನ್ನುವಂತೆ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಚಿಕ್ಕ ಮನೆ ಕಟ್ಟಿಸಿ ಅದನ್ನು ನೋಡಿದವರ ಬಾಯಲ್ಲಿ ವ್ಹಾವ್ ಎನಿಸಿಕೊಳ್ಳುವುದು ಜಾಣತನ. ಚಿಕ್ಕ ಮನೆಯನ್ನು ಚೊಕ್ಕವಾಗಿರಿಸಿಕೊಳ್ಳುವುದು ಹೇಗೆ ಎಂಬುದಕ್ಕೆ ಟಿಪ್ಸ್ ಇಲ್ಲಿವೆ ನೋಡಿ.

ಮೂಲೆಮೂಲೆಗೂ ಬೆಳಕು ಬೀಳಲಿ

ಗೋಡೆಗಳಿಗೆ ಗಾಢ ಬಣ್ಣ ಬಳಸುವುದಕ್ಕಿಂತ ತಿಳಿ ಬಣ್ಣಗಳನ್ನು ಬಳಸಬೇಕು. ಗೋಡೆಗೆ ಬಿಳಿ ಬಣ್ಣವನ್ನು ಪೇಯಿಂಟ್ ಮಾಡಿದರೆ ಕೊಠಡಿಯಲ್ಲಿ ಬೆಳಕು ಹೆಚ್ಚಾಗುವುದರ ಜತೆ ಕೊಠಡಿಯ ಮೂಲೆಮೂಲೆಗೂ ಬೆಳಕು ಬೀಳುತ್ತದೆ. ಇದರಿಂದ ಕೃತಕ ಬೆಳಕಿನ ಅವಶ್ಯಕತೆ ಕಡಿಮೆಯಾಗುತ್ತದೆ. ಕೊಠಡಿಯಲ್ಲಿ ಕಿಟಕಿಗಳನ್ನು ತೆರೆದಿಟ್ಟರೆ ತಂಪಾದ ಗಾಳಿ ಬೀಸುವುದರ ವಾತಾವರಣ ಆಹ್ಲಾದಕರವಾಗಿರುತ್ತದೆ.

ಟಿವಿ ಪಕ್ಕದಲ್ಲೇ ರಿಮೋಟ್, ಡಿವಿಡಿ ಇರಲಿ

ಹೆಚ್ಚು ಜಾಗವನ್ನು ಆಕ್ರಮಿಸುತ್ತಿದ್ದ ಹಳೆಯ ಟಿವಿಗಳೆಲ್ಲ ಹೋಗಿ ಗೋಡೆಗೆ ಹಾಕುವ ಹೊಸ ಟಿವಿಗಳು ಬಂದಿವೆ. ಟಿವಿಗೆ ಸಂಬಂಧಪಟ್ಟ ಸಾಮಗ್ರಿಗಳು ಅಂದ್ರೆ ರಿಮೋಟ್ , ಡಿವಿಡಿ ಇವುಗಳನ್ನು ಇಡುವುದಕ್ಕೆ ಒಂದು ಪ್ರತ್ಯೇಕ ಟೇಬಲ್ ಬೇಕಾಗುತ್ತದೆ. ಅದರ ಬದಲು ಗೋಡೆಗೆ ಹಾಕಿರುವ ಟಿವಿಯ ಜತೆಗೆ ಇವುಗಳನ್ನು ಈಡಲು ಸ್ಥಳ ಮಾಡಿಕೊಳ್ಳಿ. ಇದರಿಂದ ಹೆಚ್ಚು ಜಾಗದ ಅವಶ್ಯಕತೆ ಬೀಳುವುದಿಲ್ಲ. ಮನೆಯು ದೊಡ್ಡದಾಗಿ ಕಾಣಿಸುತ್ತದೆ.

ಪೀಠೋಪಕರಣ ಮನೆಗೆ ಒಪ್ಪಲಿ

ಪೀಠೋಪಕರಣಗಳು ಕೊಂಚ ಹಗುರವಾಗಿದ್ದರೆ ಚಿಕ್ಕ ಕೋಣೆ ಇರುವವರಿಗೆ ಅನುಕೂಲವಾಗುತ್ತದೆ. ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮ ಅಥವಾ ಅತಿಥಿಗಳು ಬಂದಾಗ ಅವುಗಳನ್ನು ತಳ್ಳಲು ಸುಲಭವಾಗುತ್ತದೆ. ಪೀಠೋಪಕರಣಗಳು ಹಗುರವಾಗಿದ್ದರೂ ಮನೆಗೆ ಒಪು್ಪವ ರೀತಿಯಲ್ಲಿರಬೇಕು. ಬೆಡ್ , ಕಬೋರ್ಡ್ ಇತ್ಯಾದಿಗಳ ಆಯ್ಕೆಯ ಮೇಲೆ ಗಮನ ಹರಿಸಬೇಕು.

ಮೇಜಿನ ಬಳಕೆ ಹೆಚ್ಚಿರಲಿ

ಲ್ಯಾಪ್ ಟಾಪ್ ಮತ್ತು ಇತರ ಅಗತ್ಯ ವಸ್ತುಗಳನ್ನು ಇಡಲು ‘ಸಿ’ ಶೇಪಿನ ಮೇಜು ಬಳಸಿ. ಮೇಜಿನ ಕೆಳ ಭಾಗ ‘ಸಿ’ ಶೇಪ್ ಇದ್ದರೆ, ಅದರೊಳಗೆ ಹಾಸಿಗೆಯನ್ನೂ ಸೇರಿಸಿ ಇಡಬಹುದು ಅಥವಾ ಉಪಯೋಗ ಇಲ್ಲದಿರುವಾಗ ಲ್ಯಾಪ್ ಟಾಪ್ ಅನ್ನು ಕೆಳಗೆ ಇಡಬಹುದು. ಇದರಿಂದ ಸ್ಥಳದ ಅಭಾವ ಕಡಿಮೆಯಾಗುತ್ತದೆ. ಅಲ್ಲದೆ ‘ಸಿ’ಶೇಪ್​ನ ಟೇಬಲ್ ಅನ್ನು ಬೆಳಗಿನ ಉಪಾಹಾರ ಮಾಡಲು ಅಥವಾ ಟೀ ಟೇಬಲ್ ಆಗಿಯೂ ಬಳಸಬಹುದು.

ವಾಲ್ ಹ್ಯಾಂಗಿಂಗ್ಸ್ ಬದಲು ಕುರ್ಚಿ ಓಕೆ

ವಾಲ್ ಹ್ಯಾಂಗಿಂಗ್ಸ್ ಅಥವಾ ಇನ್ನಾವು ದಾದರೂ ವಸ್ತುಗಳನ್ನು ಒಂದೇ ಬದಿಯ ಗೋಡೆಯಲ್ಲಿ ತೂಗು ಹಾಕಬೇಡಿ. ಒಂದೇ ಕಡೆ ನೇತು ಹಾಕುವುದರಿಂದ ಇಕ್ಕಟ್ಟಾಗಿ ಕಾಣಿಸುತ್ತದೆ. ನೋಡಲೂ ಅಂದವಾಗಿರುವುದಿಲ್ಲ. ಜಾಗ ಉಳಿಸುವ ಸಲುವಾಗಿ ರೌಂಡ್ ಟೇಬಲ್ ಮತ್ತು ಬಾಗಿದ ಕುರ್ಚಿಗಳನ್ನು ಉಪಯೋಗಿಸಿ.

ಕನ್ನಡಿಯಲ್ಲಿ ಪ್ರತಿಫಲನ ಮೂಡಲಿ

ಬಚ್ಚಲು ಮನೆಯ ಎದುರುಗಡೆ ಇರುವ ವಾಷ್ ಬೇಸಿನ್​ನ ಮೇಲೆ ದೊಡ್ಡ ಕನ್ನಡಿ ಅಳವಡಿಸಿ. ಕೋಣೆಯಲ್ಲಿ ಹಾಕಿದ ಲೈಟ್ ಇದರಲ್ಲಿ ಪ್ರತಿಫಲನ ಮೂಡುತ್ತದೆ. ಅಲ್ಲಲ್ಲಿ ಸಣ್ಣ ಸಣ್ಣ ಕನ್ನಡಿ ಹಾಕುವುದಕ್ಕಿಂತ ಒಂದೇ ಕನ್ನಡಿ ಹಾಕಬಹುದು. ಇದರ ಜತೆ ಡ್ರೆಸ್ಸಿಂಗ್ ಟೇಬಲ್ ಮೇಲೂ ಒಂದು ಕನ್ನಡಿ ಇದ್ದರೆ ಸಾಕು.

ಗೋಡೆಯಲ್ಲೇ ಕಪಾಟು

ಪುಸ್ತಕಗಳನ್ನು ಓದಿ ಅಲ್ಲಲ್ಲೆ ಎಸೆಯುವುದಕ್ಕಿಂತ ಪುಸ್ತಕಗಳಿಗಾಗಿ ಗೋಡೆಯಲ್ಲೆ ಒಂದು ಕಪಾಟು ಮಾಡಿ ಪುಸ್ತಕಗಳನ್ನು ಜೋಡಿಸಿಡಿ. ಇದರಿಂದ ಜಾಗವು ಉಳಿಯುತ್ತದೆ ಮತ್ತು ಬೇಕಾದ ಪುಸ್ತಕಗಳು ಬೇಗ ಸಿಗುತ್ತವೆ.

ಚಪ್ಪಲಿ ಸ್ಟ್ಯಾಂಡ್​

ಚಪ್ಪಲಿಗೆ ಪ್ರತ್ಯೇಕ ಸ್ಟ್ಯಾಂಡ್​ ಮಾಡುವುದಕ್ಕಿಂತ ಮನೆಯ ಎದುರಿನ ಬಾಗಿಲಿನ ಹಿಂಭಾಗದ ಗೋಡೆಗೆ ಚಪ್ಪಲಿ ಸ್ಟ್ಯಾಂಡ್​ ಅಳವಡಿಸಿದರೆ ಯಾರಿಗೂ ಕಾಣಿಸುವುದಿಲ್ಲ. ಜಾಗವೂ ಕಡಿಮೆ ಸಾಕು.

Leave a Reply

Your email address will not be published. Required fields are marked *