ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಕರ್ನಾಟಕ ಗ್ರಾಮೀಣ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂತು.
ರಾಜ್ಯ ಮಟ್ಟದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರೂ ಸ್ಥಳೀಯವಾಗಿ ಹೋರಾಟಗಾರರು ಬಂದ್ ನಡೆಸುವಂತೆ ಜನರಲ್ಲಿ ಮನವಿ ಮಾಡಿದ್ದರು. ವಿವಿಧ ಸಂಘಟನೆಗಳ ಮುಖಂಡರ ಚುರುಕಿನ ಸಂಚಾರದಿಂದ ಪ್ರಾರಂಭದಲ್ಲಿ ಹೋರಾಟ ತೀವ್ರಗೊಳ್ಳುವ ಲಕ್ಷಣ ಕಂಡು ಬಂತು. ಆದರೆ, ಬಿಸಿಲಿನ ತಾಪ ಏರುತ್ತಿದ್ದಂತೆ ನಿಧಾನವಾಗಿ ಬಂದ್ ಕಳೆ ಮಾಯವಾಯಿತು. ಎಂದಿನಂತೆ ಅಂಗಡಿ, ಹೋಟೆಲ್, ಶಾಲಾ ಕಾಲೇಜು, ಪೆಟ್ರೋಲ್ ಬಂಕ್, ಸಿನಿಮಾ ಮಂದಿರ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ವಾಹನ ಸಂಚಾರದಲ್ಲೂ ವ್ಯತ್ಯಯ ಕಂಡು ಬರಲಿಲ್ಲ. ಎಂದಿನಂತೆ ಎಲ್ಲೆಡೆ ವ್ಯಾಪಾರ ಮತ್ತು ಸೇವೆ ಇದ್ದರೂ ಗ್ರಾಹಕರ ಬರ ಕಾಡಿತು. ಬಹುತೇಕರು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳತ್ತ ಬರಲಿಲ್ಲ.
ಎಲ್ಲೆಡೆ ಬಿಗಿ ಭದ್ರತೆ : ಮುಂಜಾಗ್ರತಾ ಕ್ರಮವಾಗಿ ಪ್ರಮುಖ ವೃತ್ತಗಳಲ್ಲಿ ಎಸ್‌ಐ ಮತ್ತು ಎಎಸ್‌ಐ ನೇತೃತ್ವದ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರಿಗೆ ಬಲವಂತವಾಗಿ ಬಾಗಿಲು ಮುಚ್ಚಿಸಲು ಹಾಗೂ ವಾಹನ ಸಂಚಾರ ತಡೆಯಲು ಬಿಡಲಿಲ್ಲ. ಯಾವುದೇ ರ‌್ಯಾಲಿಗಳಿಗೂ ಅವಕಾಶ ನೀಡಲಿಲ್ಲ. ಅಲ್ಲಲ್ಲಿ ಮಾತಿನ ಚಕಮಕಿ ಹೊರತುಪಡಿಸಿದರೆ ಹೋರಾಟ ಶಾಂತಿಯುತವಾಗಿ ಮುಕ್ತಾಯ ಕಂಡಿತು.
ಹೋರಾಟಗಾರರ ಬಂಧನ : ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಮತ್ತು ಪ್ರತಿಭಟನಾ ರ‌್ಯಾಲಿ ನಡೆಸಲು ಯತ್ನಿಸಿದ ಹೋರಾಟಗಾರರನ್ನು ಜಿಲ್ಲಾ ಕೇಂದ್ರದ ಶಿಡ್ಲಘಟ್ಟ ವೃತ್ತದಲ್ಲಿ ಪೊಲೀಸರು ಬಂಧಿಸಿದರು.
ಪೊಲೀಸ್ ಚೌಕಿ ಮುಂಭಾಗದ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಪ್ರತಿಭಟನಾಕಾರರನ್ನು ತಡೆಯಲಾಯಿತು. ಇದರ ನಡುವೆ ಕೆಲ ಕಾಲ ಧರಣಿ ಕುಳಿತು ಧಿಕ್ಕಾರ ಕೂಗಿದವರನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಬಿಡುಗಡೆ ಮಾಡಿದರು.
ಪ್ರತಿಭಟನಾಕಾರರ ಆಕ್ರೋಶ : ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ದೇಶವು ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಸಿಪಿಎಂ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಅನೇಕ ಉದ್ಯಮಗಳು ನಷ್ಟಕ್ಕೆ ಗುರಿಯಾಗಿ, ಬಾಗಿಲು ಮುಚ್ಚುತ್ತಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸಲು ಪರದಾಡುವಂತಾಗಿದೆ ಎಂದರು.
ಸರ್ಕಾರವು ಅನಪೇಕ್ಷಿತ ವಿಚಾರಗಳ ಮೂಲಕ ಜನರ ದಿಕ್ಕು ತಪ್ಪಿಸುವುದರ ಬದಲು ದೇಶದ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಅಕ್ಷರ ದಾಸೋಹ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಮಂಜುಳಾ, ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು.