ಸಿಬ್ಬಂದಿಗೆ ಹೆಚ್ಚಿದ ಕೆಲಸದ ಒತ್ತಡ, ಕಡತದಲ್ಲೇ ಉಳಿದ ರೈತರ ಅರ್ಜಿಗಳು
ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
ಇ-&ಆಫೀಸ್, ಡಿಜಿಟಲೀಕರಣ, ಪೇಪರ್ಲೆಸ್ ಕಚೇರಿಗಳು ಸೇರಿ ಅನೇಕ ಯೋಜನೆಗಳನ್ನು ಸರ್ಕಾರ ರೈತರಿಗಾಗಿ ಕಂದಾಯ ಇಲಾಖೆಯಲ್ಲಿ ಜಾರಿ ಮಾಡುತ್ತಿದೆ. ಆದರೆ, ಈ ಕೆಲಸ ಮಾಡುವಂತಹ ಅರ್ಹರನ್ನು ನೇಮಕ ಮಾಡಿಕೊಳ್ಳದೆ ಲಭ್ಯ ನೌಕರರಿಂದ ಕೆಲಸ ಮಾಡಿಸುತ್ತಿರುವುದರಿಂದ ಆಡಳಿತ ಯಂತ್ರ ಕುಸಿಯುತ್ತಿದೆ.
ತಾಲೂಕಿನ ಎಲ್ಲ ಇಲಾಖೆಗಳ ಮಾತೃ ಇಲಾಖೆಯಾಗಿರುವ ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದೆ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಅಧಿಕಾರಿಗಳನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿದೆ. ಮೇಲಧಿಕಾರಿಗಳು ಮತ್ತು ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವುದರಿಂದ ಕೆಳಹಂತದ ಅಧಿಕಾರಿಗಳು ಸಮಸ್ಯೆ ಹೇಳಿಕೊಳ್ಳಲಾಗದೆ ಒತ್ತಡದಲ್ಲೇ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೆಲಸದ ಅವಧಿಯಲ್ಲಿ, ನಂತರದಲ್ಲಿ ಸಭೆ ನಡೆಸುವುದು, ಅದರಲ್ಲೂ ಗೂಗಲ್ ಮೀಟ್, ವಿಡಿಯೋ ಕಾನ್ಫರೆನ್ಸ್ ರೀತಿಯಲ್ಲಿ ನೌಕರರ ವೈಯಕ್ತಿಕ ಬದುಕಿಗೂ ತೊಂದರೆ ಮಾಡುತ್ತಿರುವುದರಿಂದ ನೌಕರರು ಕೆಲಸದ ಒತ್ತಡಕ್ಕೆ ಸಿಲುಕಿ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಮಸ್ಯೆ ತಪ್ಪಿಸಲು ಸರ್ಕಾರ ಇಲಾಖೆಯ ಹೊಸ ಹೊಸ ಯೋಜನೆಗಳಿಗೆ ಅರ್ಹ ನೌಕರರನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿ ಯೋಜನೆಗಳ ಯಶಸ್ಸಿಗೆ ಕಾರ್ಯರೂಪಿಸಬೇಕಾಗಿದೆ.
ಹುದ್ದೆಗಳ ವಿವರ: ತಹಸೀಲ್ದಾರ್, ಗ್ರೇಡ್&2 ತಹಸೀಲ್ದಾರ್, ಮೂರು ಜನ ಶಿರಸ್ತೇದಾರ್ಗಳ ಹುದ್ದೆ ಭರ್ತಿಯಾಗಿದೆ. 4 ಉಪತಹಸೀಲ್ದಾರ್ ಹುದ್ದೆಯಲ್ಲಿ 3 ಭರ್ತಿಯಾಗಿದ್ದು, ಒಂದು ಖಾಲಿ ಇದೆ. ಪ್ರಥಮ ದರ್ಜೆ ಸಹಾಯಕರ 7 ಹುದ್ದೆಯಲ್ಲಿ 2 ಖಾಲಿ ಇದೆ, 13 ದ್ವೀತಿಯ ದರ್ಜೆ ಸಹಾಯಕರ ಸ್ಥಾನವಿದ್ದು, 3 ಹುದ್ದೆ ಖಾಲಿ ಇವೆ. ಬೆರಳಚ್ಚುಗಾರರ 3 ಹುದ್ದೆ, ವಾಹನ ಚಾಲಕರ 1 ಹುದ್ದೆ ಖಾಲಿ ಇದೆ. ಡಿ ದರ್ಜೆ ನೌಕರರ ಒಟ್ಟು 15 ಹುದ್ದೆಗಳಲ್ಲಿ 11 ಖಾಲಿ ಇವೆ. ಆರ್ಆರ್ಟಿ ಅಟೆಂಡರ್ ಖಾಲಿ ಇದೆ. ಗ್ರಾಮಲೆಕ್ಕಿಗರ ಒಟ್ಟು 50 ಹುದ್ದೆಗಳಲ್ಲಿ 38 ಹುದ್ದೆಗಳು ಭರ್ತಿಯಾಗಿದ್ದು, 12 ಖಾಲಿ ಇವೆ. ಇದರೊಂದಿಗೆ ಎಸ್ಎಸ್ವೈ ಆಪರೇಟರ್ ಸಹ ಖಾಲಿ ಇದೆ. ಒಟ್ಟು 107 ಹುದ್ದೆಗಳಲ್ಲಿ 69 ಹುದ್ದೆಗಳು ಭರ್ತಿಯಾಗಿದ್ದು, 38 ಹುದ್ದೆಗಳು ಖಾಲಿ ಇವೆ. ಇದರಿಂದ ಇರುವಂತಹ ನೌಕರರ ಮೇಲೆ ಅಧಿಕ ಒತ್ತಡವಿದೆ. ಇರುವಂತಹ ಅಧಿಕಾರಿಗಳಲ್ಲಿ ಕೆಲವರು ಆರೋಗ್ಯ ನಿಮಿತ್ತ, ಇತರ ಕ್ಷೇತ್ರಗಳಲ್ಲಿ ಒಒಡಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅರ್ಜಿಗಳು ಕಡತದಲ್ಲೇ ಉಳಿಯುತ್ತಿವೆ. ರೈತರು ಕೆಲಸ ಕಾರ್ಯ ಬಿಟ್ಟು ದಿನನಿತ್ಯ ಕಚೇರಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಬರಿದಾದ ಕೊಠಡಿಗಳು : ಈ ಹಿಂದಿನ ಅವಧಿಯಲ್ಲಿ ಇದ್ದ ಕಾರ್ಯಕ್ಷೇತ್ರಕ್ಕೆ ತಕ್ಕಂತೆ ಮಂಜೂರಾದ ಹುದ್ದೆಗಳೇ ಖಾಲಿ ಇದ್ದರೂ ನೇಮಕ ಮಾಡಿಕೊಳ್ಳದೆ ಇರುವ ನೌಕರರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬುದಕ್ಕೆ ತಾಲೂಕು ಆಡಳಿತದ ಸಿಬ್ಬಂದಿ ವಿವರವೇ ನಿದರ್ಶನವಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಒಟ್ಟು 5 ಹೋಬಳಿಗಳಿದ್ದು, 42 ಗ್ರಾಮ ಲೆಕ್ಕಾಧಿಕಾರಿಗಳ ವೃತ್ತಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ನೌಕರರು ಇಲ್ಲ. ತಾಲೂಕಿನ ಆಡಳಿತ ಸೌಧ ದೊಡ್ಡ ಕಟ್ಟಡ ಇದೆ. ಆದರೆ ಎಲ್ಲ ಇಲಾಖೆಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದೆ ಕಚೇರಿಯ ಕೊಠಡಿಗಳು ಖಾಲಿಖಾಲಿಯಾಗಿವೆ.
ಇರುವ ಆಡಳಿತದ ವ್ಯವಸ್ಥೆಯಲ್ಲೇ ಉತ್ತಮವಾಗಿ ಕೆಲಸ ಮಾಡಬೇಕಾಗಿದೆ. ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸುವುದು ಪ್ರತಿ ನೌಕರರ ಜವಾಬ್ದಾರಿ. ಖಾಲಿ ಇರುವ ಹುದ್ದೆ ನೇಮಕ ಮಾಡುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಅವರ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ.
| ಕೆ.ಪುರಂದರ ತಹಸೀಲ್ದಾರ್
ಕೆಲಸದ ಒತ್ತಡದಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ರಜಾ ದಿನಗಳಲ್ಲೂ ಕೆಲಸ ಮಾಡುವಂತಾಗಿದೆ. ಆದರೂ ಕೆಲಸ ಮುಗಿಸಲಾಗದೆ ಅಸಹಾಯಕರಾಗಿದ್ದೇವೆ. ಒಬ್ಬರು ಹಲವು ವಿಭಾಗಗಳಲ್ಲಿ ಕೆಲಸ ಮಾಡಬೇಕಾಗಿರುವುದರಿಂದ ಯಾವ ಸಮಸ್ಯೆ ಏನು ಎಂಬುದೆ ತಿಳಿಯದಂತಾಗಿದೆ.
| ಹೆಸರು ಹೇಳಲು ಇಚ್ಛಿಸದ ಅಧಿಕಾರಿ