ಚಿಕಿತ್ಸೆ ಫಲಿಸದೆ ತಿಂಗಳ ಬಳಿಕ ಶಿಕ್ಷಕ ಸಾವು

ರಿಪ್ಪನ್​ಪೇಟೆ: ಸಮೀಪದ ಸುಡೂರು ಮುಖ್ಯರಸ್ತೆಯಲ್ಲಿ ಜು.19ರಂದು ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಹೊಸನಗರ ಸಮೀಪದ ಬಾಣಿಗ ಸರ್ಕಾರಿ ಪ್ರಾರ್ಥಮಿಕ ಶಾಲಾ ಶಿಕ್ಷಕ ರಾಮಪ್ಪ ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಮಪ್ಪ ತಮ್ಮ 2 ವರ್ಷದ ಪುತ್ರ ಸ್ಕಂದನಿಗೆ ಚಿಕಿತ್ಸೆ ಕೊಡಿಸಲು ಹೊಸನಗರದಿಂದ ಶಿವಮೊಗ್ಗಕ್ಕೆ ತೆರಳುವಾಗ ಅಪಘಾತ ಸಂಭವಿಸಿತ್ತು. ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ರಾಮಪ್ಪ, ಪತ್ನಿ ಶಾಂತಕುಮಾರಿ ಗಂಭೀರವಾಗಿ ಗಾಯಗೊಂಡಿದ್ದರು.</p><p>ರಾಮಪ್ಪ ಬಾಣಿಗ ಶಾಲೆಯಲ್ಲಿ, ಶಾಂತಕುಮಾರಿ ಚಿಕ್ಕಜೇನಿ ಬಳಿಯ ಭೀಮನಕೆರೆ ಶಾಲೆಯಲ್ಲಿ ಶಿಕ್ಷಕರಾಗಿದ್ದು ಹೊಸನಗರದಲ್ಲಿ ಮನೆ ಮಾಡಿಕೊಂಡಿದ್ದರು. ಇಬ್ಬರೂ ಸಾಗರ ತಾಲೂಕಿನ ಗಾಳಿಪುರದವರು. ಅಪಘಾತದ ಬಳಿಕ ರಾಮಪ್ಪ ಹಾಗೂ ಶಾಂತಕುಮಾರಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಮಪ್ಪ ಸ್ಥಿತಿ ಗಂಭೀರ ಆದ ಹಿನ್ನೆಲೆಯಲ್ಲಿ 10 ದಿನದ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆ ಉಸಿರೆಳೆದರು. ಶಾಂತಕುಮಾರಿ ಅವರಿಗೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು ಅವರು ಚೇತರಿಸಿಕೊಂಡಿದ್ದಾರೆ.

ಅಂತ್ಯಕ್ರಿಯೆ ಬಳಿಕ ಮತ್ತೆ ಆಸ್ಪತ್ರೆಗೆ: ರಾಮಪ್ಪ ಅವರ ಅಂತ್ಯಕ್ರಿಯೆಗೆ ಶಾಂತಕುಮಾರಿ ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಯಿಂದಲೇ ಕರೆದುಕೊಂಡು ಹೋಗಿ ಬಳಿಕ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲೇ ಮಗನನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಶಾಂತಕುಮಾರಿ ಈಗ ಪತಿಯನ್ನೂ ಕಳೆದುಕೊಂಡು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಸಹದ್ಯೋಗಿ ಶಿಕ್ಷಕರು ತಿಳಿಸಿದರು. ಶಿಕ್ಷಕ ದಂಪತಿ ಕುಟುಂಬದ ದಾರುಣ ಸ್ಥಿತಿಗೆ ಕುಟುಂಬಸ್ಥರು, ಸಹದ್ಯೋಗಿಗಳು ಮಮ್ಮಲ ಮರುಗುತ್ತಿದ್ದಾರೆ.</p><p>2005ರಿಂದ 2008ರವರೆಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದ ರಾಮಪ್ಪ 2008ರಲ್ಲಿ ಕೊಪ್ಪಳದ ಕುಷ್ಟಗಿಯಲ್ಲಿ ಶಿಕ್ಷಕರಾಗಿ ನೇಮಕಗೊಂಡರು. ಅದೇ ವರ್ಷ ಶಾಂತಕುಮಾರಿಯನ್ನು ವಿವಾಹ ಆಗಿದ್ದರು. ಬಳಿಕ 2014ರಲ್ಲಿ ಹೊಸನಗರ ತಾಲೂಕಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ದಂಪತಿಗೆ 10 ವರ್ಷದ ಶಮಾ ಎಂಬ ಮಗಳೂ ಇದ್ದಾಳೆ.</p>

Leave a Reply

Your email address will not be published. Required fields are marked *