ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

ಗಂಡನ ಮನೆಯವರ ಕಿರುಕುಳ ಆರೋಪ

ಭೇರ್ಯ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೆ.ಆರ್.ನಗರ ತಾಲೂಕಿನ ನಾಟನಹಳ್ಳಿ ಗ್ರಾಮದ ನಿವಾಸಿ ಸಂತೋಷ್ ಪತ್ನಿ ಕಾವ್ಯಾರಾಣಿ(26) ಮೃತ ದುರ್ದೈವಿ. ನಾಟನಹಳ್ಳಿ ಗ್ರಾಮದ ತುಕರಾಂ ಅವರ ಮಗ ಸಂತೋಷನಿಗೆ ಮಿರ್ಲೆ ಗ್ರಾಮದ ಲೇ. ಶ್ರೀನಿವಾಸ್ ಪುತ್ರಿ ಕಾವ್ಯಾರಾಣಿಯನ್ನು ಕೊಟ್ಟು 2017 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಪತಿ ಸಂತೋಷ್ ಹೈದ್ರಾಬಾದ್‌ನ ಕಂಪನಿಯೊಂದಲ್ಲಿ ಕೆಲಸ ಮಾಡಿಕೊಂಡಿದ್ದ. ಮದುವೆಯಾದಾಗಿನಿಂದ ಪತಿ ಸಂತೋಷ್ ಸೇರಿದಂತೆ ಅತ್ತೆಯ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.

ಮೃತಳ ಹೇಳಿಕೆ: ನನ್ನ ಗಂಡ ಸಂತೋಷ್ ವರದಕ್ಷ್ಷಿಣೆ ಹಣದ ಆಸೆಗಾಗಿ ನನಗೆ ಕಿರುಕುಳ ನೀಡುತ್ತಿದ್ದು, ಅತ್ತೆ ಶಾರದಮ್ಮ, ನಾದಿನಿ ಸೌಮ್ಯಾ, ಈಕೆಯ ಗಂಡ ಚಂದ್ರಶೇಖರ್ ಸೇರಿ ಡಿ.27 ಗುರುವಾರ ರಾತ್ರಿ ನನ್ನ ಮೇಲೆ ಹಲ್ಲೆ ನಡೆಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ಆಸ್ಪತ್ರೆಗೆ ದಾಖಲಾದ ದಿನ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಈ ಸಂಬಂಧ ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.