ಚಿಕಿತ್ಸೆ ದೊರಕದೆ ಪರದಾಡಿದ ಯೋಧ

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

ವಿಜಯವಾಣಿ ಸುದ್ದಿಜಾಲ ಹೊಳೆನರಸೀಪುರ
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯ, ಅಗತ್ಯ ಸಿಬ್ಬಂದಿ ಹಾಗೂ ತಜ್ಞ ವೈದ್ಯರಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದರ ಬಿಸಿ ಅನಾರೋಗ್ಯಕ್ಕೀಡಾದ ಯೋಧನಿಗೂ ತಟ್ಟಿದೆ.
ತಾಲೂಕಿನ ಬೆಟ್ಟಸಾತೇನಹಳ್ಳಿ ಗ್ರಾಮದ ನಿವಾಸಿ ಹಾಗೂ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಮಲ್ಲಿಕಾರ್ಜುನ್ ಕಳೆದ 20 ದಿನಗಳ ಹಿಂದೆ ಊರಿಗೆ ಬಂದಿದ್ದು, ಮತ್ತೆ ಕರ್ತವ್ಯಕ್ಕೆ ಹಿಂದಿರುಗುವ ವೇಳೆ ತಂದೆ ಮಂಜುನಾಥ್ ಅನಾರೋಗ್ಯಕ್ಕೀಡಾಗಿದ್ದರು. ಕೂಡಲೇ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ತಂದೆ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಚಿಂತೆಗೀಡಾದ ಯೋಧ ಮಲ್ಲಿಕಾರ್ಜುನ್ ಸಹ ಇದ್ದಕ್ಕಿದ್ದ ಹಾಗೆ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ತೆರಳಿದ್ದರು.
ವಾಂತಿ ಕಾಣಿಸಿಕೊಂಡ ಮಗನನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದ ತಾಯಿ ಒಂದು ಗಂಟೆಯಾದರೂ ವೈದ್ಯರು ಬಾರದ ಹಿನ್ನೆಲೆಯಲ್ಲಿ ಮಗನ ಸ್ಥಿತಿ ಕಂಡು ರೋಧಿಸುತ್ತಿದ್ದರು. ವೈದ್ಯರನ್ನು ಕೇಳಿದರೆ ರಾತ್ರಿ ಪಾಳಿ ಮುಗಿಸಿ ಹೋಗಿದ್ದಾರೆ. ಇನ್ನೊಬ್ಬ ವೈದ್ಯ ಬರುವವರೆಗೆ ಕಾಯಬೇಕು ಎಂದು ತಿಳಿಸಿದ್ದಾರೆ. ಇದರಿಂದ ದಿಕ್ಕು ತೋಚದೆ ಯೋಧನ ತಾಯಿ ಕಂಗಾಲಾಗಿದ್ದರು. ಬಳಿಕ ಬಂದ ವೈದ್ಯರು ಯೋಧ ಮಲ್ಲಿಕಾರ್ಜುನ್‌ಗೆ ಚಿಕಿತ್ಸೆ ನೀಡಿ ಕಳುಹಿಸಿದರು. ಸೂಕ್ತ ಸಮಯದಲ್ಲಿ ವೈದ್ಯರ ಚಿಕಿತ್ಸೆ ದೊರೆಯದೆ ಅನುಭವಿಸಿದ ಯಾತನೆಗೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. 250 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ವೈದ್ಯರಿದ್ದು ಸರ್ಕಾರ ಕೂಡಲೇ ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.