ಚಾಮರಾಜನಗರ: ಚಾಮರಾಜನಗರ ವಿಶ್ವ ವಿದ್ಯಾಲಯವನ್ನು ಮುಚ್ಚಿ, ಮೈಸೂರು ವಿಶ್ವವಿದ್ಯಾಲಯಕ್ಕೆ ವಿಲೀನಗೊಳಿಸುವ ವಿಚಾರಕ್ಕೆ ಜನವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ. ರಾಜಕೀಯ ವಲಯದಿಂದ ಪರ-ವಿರೋಧ ಟೀಕೆಗಳು ನಡೆಯುತ್ತಿವೆ.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯ ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. 2023-24 ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತಲೂ ವಿಭಿನ್ನವಾಗಿ ತಂತ್ರಜ್ಞಾನ, ಉಪಗ್ರಹ ಆಧಾರಿತ ಶಿಕ್ಷಣ ನೀಡುವಂತೆ ಆದೇಶಿಸಿ ಚಾಮರಾಜನಗರ ವಿಶ್ವ ವಿದ್ಯಾಲಯವನ್ನು ಘೋಷಣೆ ಮಾಡಿತು. ಆದರೆ ಮೂಲಸೌಕರ್ಯಗಳು, ಅಗತ್ಯ ಅನುದಾನ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರವೂ ವಿವಿಯ ಕೈಹಿಡಿಯಲಿಲ್ಲ. ಹೀಗಾಗಿ ಕೊರತೆಗಳ ನಡುವೆಯೇ ವಿವಿ ನಡೆದು ಬರುತ್ತಿದೆ. ಸದ್ಯ ವಿಶ್ವ ವಿದ್ಯಾಲಯದ ವ್ಯಾಪ್ತಿಯ 20 ಪದವಿ ಕಾಲೇಜುಗಳಲ್ಲಿ ಒಟ್ಟು 5000 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 800 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ವಿವಿ ಮುಚ್ಚಿ, ಮೈಸೂರು ವಿವಿಯೊಂದಿಗೆ ವಿಲೀನಗೊಳಿಸುವ ವಿಚಾರದ ಕುರಿತು ಈ ವಾರದ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ಸಿಎಂಗೆ ಮನವಿ ಮಾಡುತ್ತೇವೆ
ನಂಜುಂಡಪ್ಪ ವರದಿ ಅನುಸಾರ ಹಿಂದುಳಿದಿರುವ ಚಾಮರಾಜನಗರದಲ್ಲಿ ವಿಶ್ವ ವಿದ್ಯಾಲಯ ನಿರ್ಮಾಣ ಮಾಡಿರುವುದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಈಗ ವಿಶ್ವ ವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಸಂಪೂರ್ಣ ವಿರೋಧಿಸುತ್ತೇವೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ. ಅಗತ್ಯವಾದರೇ ಜಿಲ್ಲೆಯಾದ್ಯಂತ ಬಹುದೊಡ್ಡ ಹೋರಾಟ ರೂಪಿಸುತ್ತೇವೆ.
ವೆಂಕಟರಮಣಸ್ವಾಮಿ (ಪಾಪು), ಹಿರಿಯ ದಲಿತ ಹೋರಾಟಗಾರ, ಚಾ.ನಗರ
*ಸರ್ಕಾರದ ನಿರ್ಧಾರಕ್ಕೆ ಖಂಡನೆ
ಗಡಿಜಿಲ್ಲೆ ಚಾಮರಾಜನಗರದಲ್ಲಿ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯವನ್ನು ಮುಚ್ಚಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರದ ನಿರ್ಧಾರವನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ. ಇದನ್ನು ಮುಚ್ಚುವ ತೀರ್ಮಾನ ಮಾಡದೇ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅನುದಾನವನ್ನು ನೀಡಿ ಪುನಶ್ಚೇತನಗೊಳಿಸಬೇಕು. ಈಗಾಗಲೇ ಹೋರಾಟ ಪ್ರಾರಂಭಿಸಿದ್ದು, ನಿರಂತರವಾಗಿ ಹೋರಾಟ ಮಾಡುತ್ತೇವೆ.
ಚಾ.ರಂ.ಶ್ರೀನಿವಾಸ್‌ಗೌಡ, ಕನ್ನಡಪರ ಹೋರಾಟಗಾರ, ಚಾ.ನಗರ
*ಸೂಕ್ತವಾದ ನಡೆಯಲ್ಲ
ಇತ್ತೀಚೆಗೆ ಜಿಲ್ಲೆ ಹಂತಹಂತವಾಗಿ ಅಭಿವೃದ್ಧಿ ಕಾಣುತ್ತಿದೆ. ಮುಂದುವರಿದ ಜಿಲ್ಲೆಯಾಗಲು ಶೈಕ್ಷಣಿಕ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿತ್ತು. ಇದನ್ನು ವಿಲೀನಗೊಳಿಸಲು ಮುಂದಾದರೇ ಈ ಭಾಗದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡುವುದು ಆಳುವ ವರ್ಗದ ಕರ್ತವ್ಯವಾಗಿದೆ. ಆಗಾಗಿ ಅನುದಾನದ ಕೊರತೆ ನೆಪ ಹೇಳಿಕೊಂಡು ವಿವಿ ಮುಚ್ಚುವುದು ಸೂಕ್ತವಾದ ನಡೆಯಲ್ಲ. ಯಾವುದೇ ಕಾರಣಕ್ಕೂ ವಿವಿ ವಿಲೀನಗೊಳಿಸಬಾರದು.
ಸಿ.ಎಸ್.ನಿರಂಜನ್‌ಕುಮಾರ್, ಮಾಜಿ ಶಾಸಕ, ಗುಂಡ್ಲುಪೇಟೆ
*ಕಾಲೇಜು ಮುಚ್ಚಿಸಿದ್ದರು
ಜಿಲ್ಲೆಯ ಹಿತದೃಷ್ಟಿಯಿಂದ ನಾನು ಕೂಡ ಚಾ.ನಗರ ವಿಶ್ವವಿದ್ಯಾಲಯ ಉಳಿಯಬೇಕು ಎಂದು ಆಶಿಸುತ್ತೇನೆ. ಆದರೆ ವಾಸ್ತವವಾಗಿ ಸಮಸ್ಯೆಗಳು ಅಷ್ಟೇ ಇವೆ. ವಿಶ್ವವಿದ್ಯಾಲಯವನ್ನು ಪ್ರಾರಂಭ ಮಾಡಿದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗುಂಡ್ಲುಪೇಟೆ ಶಾಸಕರು ತೆರಕಣಾಂಬಿಯ ಪದವಿ ಕಾಲೇಜನ್ನು ಮುಚ್ಚಿಸಿದ್ದರು. ಇಲ್ಲಿ ಕೌಶಲ್ಯಾಧಾರಿತ ತರಬೇತಿ ಕೇಂದ್ರ ಮಾಡುವುದಾಗಿ ಹೇಳಿದ ಉನ್ನತ ಶಿಕ್ಷಣ ಸಚಿವರಾಗಿದ್ದ ಸಿ.ಅಶ್ವತ್ಥ ನಾರಾಯಣ ಅದನ್ನೂ ಮಾಡಲಿಲ್ಲ. ರೈತ ಮುಖಂಡ ಶಾಂತಮಲ್ಲಪ್ಪ ಕಾಲೇಜು ಉಳಿಸಿಕೊಳ್ಳಲು ಮಾಡಿದ ಮನವಿಗೂ ಬೆಲೆ ಕೊಡಲಿಲ್ಲ. ಹೀಗಾಗಿ ಇವರಿಗೆ ವಿವಿ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ತೆರಕಣಾಂಬಿ ಕಾಲೇಜಿನ ಉಳಿವಿಗಾಗಿ ನಾವೀಗ ವಿದ್ಯಾರ್ಥಿಗಳನ್ನು ದಾಖಲು ಮಾಡಿಸಿದ್ದೇವೆ.
ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ, ಗುಂಡ್ಲುಪೇಟೆ
*ಹೆಣ್ಣು ಮಕ್ಕಳಿಗೆ ಸಮಸ್ಯೆ
ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ದೂರ ಕಳುಹಿಸಿ ವ್ಯಾಸಂಗ ಮಾಡಿಸಲು ಪಾಲಕರು ಒಪ್ಪಿಕೊಳ್ಳುವುದಿಲ್ಲ. ಮೈಸೂರು ಮತ್ತು ಇನ್ನಿತರೆ ಕಡೆಗಳಲ್ಲಿ ಓದಲು ತುಂಬಾ ಸಮಸ್ಯೆಯಾಗುತ್ತದೆ. ಈ ಭಾಗದ ವಿದ್ಯಾರ್ಥಿಗಳಿಗೆ ಅದಲ್ಲದೇ ಹೆಣ್ಣುಮಕ್ಕಳಿಗೆ ವಿವಿ ಇರುವುದು ತುಂಬಾ ಅನುಕೂಲವಾಗಿದೆ. ಪ್ರಸ್ತುತ ವಿವಿ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಇದನ್ನು ವಿಲೀನಗೊಳಿಸುವ ನಿರ್ಧಾರವನ್ನು ಕೈಬಿಡಬೇಕು. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ಎಂ.ಅನನ್ಯಾ, ವಿದ್ಯಾರ್ಥಿ, ದ್ವಿತೀಯ ಎಂಬಿಎ, ಚಾ.ನಗರ ವಿವಿ
*ವಿಲೀನ ನಿರ್ಧಾರ ಕೈಬಿಡಿ
ನಾನು ಮೈಸೂರಿನವನಾಗಿದ್ದು, ಚಾ.ನಗರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ರ‌್ಯಾಂಕಿಂಗ್ ಕಡಿಮೆ ಇದ್ದರೂ ಕೂಡ ಚಾ.ನಗರ ವಿವಿಯಲ್ಲಿ ಅವಕಾಶ ದೊರೆಯಿತು. ಇದು ಗ್ರಾಮೀಣ ಭಾಗದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಚಾ.ನಗರ ವಿಶ್ವವಿದ್ಯಾಲಯ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಈಗ ವಿಲೀನವಾದರೇ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಯಾವುದೇ ಕಾರಣಕ್ಕೂ ವಿವಿಯನ್ನು ವಿಲೀನಗೊಳಿಸಬಾರದು.
ಎಸ್.ಸುಶೀಲ್ ನಾಯ್ಡು, ವಿದ್ಯಾರ್ಥಿ, ದ್ವಿತೀಯ ಎಂಬಿಎ, ಚಾ.ನಗರ ವಿವಿ
*ಉನ್ನತ ಶಿಕ್ಷಣಕ್ಕೆ ವಿವಿ ಅಗತ್ಯ
ಹಿಂದುಳಿದ ಜಿಲ್ಲೆ ಎಂಬ ಕಾರಣಕ್ಕೆ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿತ್ತು. ಸದ್ಯ ವ್ಯಾಸಂಗ ಮಾಡುತ್ತಿರುವ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 600 ವಿದ್ಯಾರ್ಥಿಗಳು ಹೆಣ್ಣು ಮಕ್ಕಳೆ ಇದ್ದಾರೆ. ಇವರು ಬೇರೆ ಜಿಲ್ಲೆಗಳಿಗೆ ಹೋಗಿ ಕಲಿಯುವಂತವರಲ್ಲ. ಜಿಲ್ಲೆಯಲ್ಲಿ ಬಡ, ಮಧ್ಯಮ ಮತ್ತು ಹಿಂದುಳಿದ ವರ್ಗದವರೇ ಹೆಚ್ಚಾಗಿದ್ದು, ಇವರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ನಿಜವಾಗಿಯೂ ವಿವಿ ಅಗತ್ಯವಿದೆ. ಜಿಲ್ಲೆಯಲ್ಲಿ ಶೇ.10.9 ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದು, ನಿಜಕ್ಕೂ ವಂಚಿತ ಮಕ್ಕಳಿಗೆ ವಿವಿ ಸಹಕಾರಿಯಾಗಿದೆ.
ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ಚಾ.ನಗರ ವಿವಿ
*ಬಡ ವಿದ್ಯಾರ್ಥಿಗಳಿಗೆ ವಂಚನೆ
ಮೈಸೂರಿನಷ್ಟೇ ಚಾ.ನಗರವೂ ವಿಸ್ತೀರ್ಣವಾಗುತ್ತಾ ಹೋಗುತ್ತಿದೆ. ಗಡಿಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಡ, ಮಧ್ಯಮ ಮತ್ತು ಹಿಂದುಳಿದ ಜನರು ವಾಸಿಸುತ್ತಿದ್ದಾರೆ. ಹೆಚ್ಚಾಗಿ ಕೂಲಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತಹ ಮಕ್ಕಳ ಉನ್ನತ ಶಿಕ್ಷಣಕ್ಕೆ ಚಾ.ನಗರ ವಿವಿ ಸಹಕಾರಿಯಾಗಿದೆ. ಯಾವುದೇ ಕಾರಣಕ್ಕೂ ವಿವಿಯನ್ನು ವಿಲೀನಗೊಳಿಸಬಾರದು. ಇದಿರಿಂದ ಬಡ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತಾಗುತ್ತದೆ. ಈಗ ಇರುವ ವಿವಿಗೆ ವಿಶೇಷ ಅನುದಾನವನ್ನು ನೀಡಬೇಕು. ಚಾ.ನಗರ ವಿವಿಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬೇಕು.
ವೀರಭದ್ರಸ್ವಾಮಿ, ಅಧ್ಯಕ್ಷ, ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ, ಚಾ.ನಗರ