ಚಾರಣಕ್ಕೆ ಹೊರಟ ವಿಜಯ್

ಉತ್ಸಾಹಿ ಯುವಕರ ಪಡೆಯೊಂದು ಚಾರಣಕ್ಕೆ ಹೊರಡುವ ಕಥೆ ಸಿನಿಮಾದಲ್ಲಿ ಇದೆ ಎಂದರೆ ಅಲ್ಲೊಂದು ಥ್ರಿಲ್ ಎದುರಾಗುತ್ತದೆ ಎಂಬುದೇ ಅರ್ಥ. ಈ ಬಗೆಯ ಹಲವು ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಬಂದಿವೆ. ಆದರೂ ಈ ಜಾನರ್​ನ ಬಗ್ಗೆ ಗಾಂಧಿನಗರದ ಮಂದಿಗೆ ಅಪಾರ ವಿಶ್ವಾಸ. ಪರಿಣಾಮ, ‘6ನೇ ಮೈಲಿ’ ಚಿತ್ರ ಸೆಟ್ಟೇರಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ‘ಸಂಚಾರಿ ವಿಜಯ್’ ಈ ಚಿತ್ರದ ನಾಯಕ. ಗೆಳೆಯರೊಂದಿಗೆ ಚಾರಣಕ್ಕೆ ಹೊರಡುವ ನಾಯಕನಿಗೆ ಏನೆಲ್ಲ ಘಟನೆಗಳು ಎದುರಾಗುತ್ತದೆ ಎಂಬುದೇ ಚಿತ್ರದ ಸಾರಾಂಶವಂತೆ. ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿರುವ ವಿಜಯ್ ಈ ಥ್ರಿಲ್ಲರ್ ಕಥೆಯನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಜತೆಯಾಗಿ ರೇಡಿಯೋ ನಿರೂಪಕರಾದ ನೇತ್ರಾ, ರುದ್ರೇಶ್, ಐಟಿ ಉದ್ಯಮಿ ಶಾಂತಲಾ ಕೂಡ ಚಾರಣಿಗರಾಗಿ ನಟಿಸಲಿದ್ದಾರೆ. ಎರಡು ಪ್ರತ್ಯೇಕ ಅನುಭವ ಕಥನಗಳನ್ನು ಆಧರಿಸಿ ಈ ಚಿತ್ರಕ್ಕೆ ಸ್ಕ್ರೀನ್​ಪ್ಲೇ ಬರೆದಿದ್ದಾರಂತೆ ಶ್ರೀನಿವಾಸ ಗೌಡ. ಹಾಗಾದರೆ ಇದು ನೈಜ ಘಟನೆ ಆಧರಿತ ಚಿತ್ರವೇ? ಅದನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ. ‘ಇದೊಂದು ಕಾಲ್ಪನಿಕ ಕಥೆ. ಜತೆಗೆ ಅನುಭವಗಳ ಮಿಶ್ರಣವೂ ಇರಲಿದೆ. ಪಶ್ಚಿಮ ಘಟ್ಟದಲ್ಲಿ ಚಾರಣಕ್ಕೆಂದು ಹೊರಡುವ ಯುವ ಗುಂಪಿನ ಕೆಲವು ಸದಸ್ಯರು ಕಣ್ಮರೆ ಆಗುವುದು ಮುಖ್ಯ ಟ್ವಿಸ್ಟ್. ಆ ಚಾರಣಿಗರು ಯಾರು, ಅವರು ಎಲ್ಲಿಗೆ ಚಾರಣಕ್ಕೆ ಹೊರಟಿದ್ದಾರೆ, ಮುಂದೆ ಏನಾದರು, ಹಿಂತಿರುಗಿ ಬರುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಚಿತ್ರದಲ್ಲಿ ಹಂತಹಂತವಾಗಿ ಉತ್ತರ ದೊರೆಯಲಿದೆ’ ಎನ್ನುತ್ತಾರೆ ಅವರು. ನಿರೂಪಣಾ ಶೈಲಿಯಲ್ಲಿ ಮೊದಲಾರ್ಧ ಮತ್ತು ದ್ವಿತೀಯಾರ್ಧ ಸಖತ್ ಭಿನ್ನವಾಗಿರಲಿದೆಯಂತೆ. ಪಶ್ಚಿಮ ಘಟ್ಟದ ಹಚ್ಚ ಹಸಿರಿನ ಪ್ರದೇಶಗಳಾದ ಶಿರಸಿ, ಯಲ್ಲಾಪುರ ಮತ್ತು ಕೇರಳದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡದ್ದು. ಕೆಲವು ದೃಶ್ಯಗಳನ್ನು ಬೆಂಗಳೂರಿನಲ್ಲೂ ಸೆರೆಹಿಡಿಯಲಾಗುತ್ತಂತೆ. ಪರಮೇಶ್ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ ಚಿತ್ರಕ್ಕಿರಲಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಬಿ.ಎಸ್. ಶೈಲೇಶ್ ಕೊಂಚ ಬಿಡುವು ಮಾಡಿಕೊಂಡು ಸಿನಿಮಾ ನಿರ್ವಣಕ್ಕೆ ಕೈ ಹಾಕಿದ್ದಾರೆ. ಉತ್ತಮ ನಿರೂಪಣೆ ಮತ್ತು ವಿಭಿನ್ನವಾದ ಕ್ಲೈಮ್ಯಾಕ್ಸ್​ನ ಕಾರಣಕ್ಕಾಗಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲು ಒಪ್ಪಿಕೊಂಡರಂತೆ. ಇಡೀ ಕಥೆಯಲ್ಲಿ ಅನೇಕ ಆಸಕ್ತಿಕರ ಟ್ವಿಸ್ಟ್​ಗಳಿದ್ದು, ಪ್ರೇಕ್ಷಕನ ಗಮನ ಒಂದರೆಕ್ಷಣವೂ ಬೇರೆಡೆಗೆ ಹರಿಯುವುದಿಲ್ಲ ಎಂಬ ವಿಶ್ವಾಸ ಅವರದ್ದು.

Leave a Reply

Your email address will not be published. Required fields are marked *