ಚಾಮರಾಜನಗರ: ತರಕಾರಿ ವ್ಯಾಪಾರಿಯೊಬ್ಬನ ಮೇಲೆ ಏಕಾಏಕಿ ತಲ್ವಾರ್ ಬೀಸಿ ಕೊಲೆ ಪ್ರಯತ್ನ ಮಾಡಿರುವ ಸಂಬಂಧ ಗುರುವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮೇಗಲಪುರ ಬೀದಿಯ ನಿವಾಸಿ ಕೃಷ್ಣಮೂರ್ತಿ ದೊಡ್ಡಂಗಡಿ ಬೀದಿಯ ಪುಟ್ ಪಾತ್ ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಸಮೀಪದಲ್ಲೇ ಗಿರೀಶ್ ಎಂಬುವವರು ತರಕಾರಿ ವ್ಯಾಪಾರ ಮಾಡುತ್ತಿದ್ದರು. ಬುಧವಾರ ರಾತ್ರಿಯ ವೇಳೆಯಲ್ಲಿ ಗಿರೀಶ್ ಪರಿಚಯಸ್ಥನಾದ ದೀಪು ಎಂಬುವವನು ದ್ವಿಚಕ್ರ ವಾಹನದಲ್ಲಿ ವ್ಯಾಪಾರ ಮಾಡುವ ಸ್ಥಳಕ್ಕೆ ಬಂದು ಹಣದ ವಿಚಾರವಾಗಿ ಗಿರೀಶನೊಂದಿಗೆ ಕೂಗಾಟ ನಡೆಸುತ್ತಿದ್ದನು. ಈ ವೇಳೆ ದೀಪು ಅವರನ್ನು ಪ್ರಶ್ನಿಸಲು ಹೋದಾಗ ಕೃಷ್ಣಮೂರ್ತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ದೀಪು ಅವರನ್ನು ಗಿರೀಶನೇ ಸಮಾಧಾನ ಮಾಡಿ ಕಳುಹಿಸಿದ್ದನು.
ಸ್ವಲ್ಪ ಸಮಯದ ಬಳಿಕ ಅದೇ ಸ್ಥಳಕ್ಕೆ ಬಂದ ದೀಪು ಎಂಬುವವರು ಕೃಷ್ಣಮೂರ್ತಿ ಮೇಲೆ ತಲ್ವಾರ್ ನಿಂದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದರೂ ಕೃಷ್ಣಮೂರ್ತಿ ಅವರ ಎರಡು ಬೆರಳಿಗೆ ತೀವ್ರವಾದ ಪೆಟ್ಟಾಗಿದೆ. ಅಷ್ಟಕ್ಕೆ ಸಮೀಪದಲ್ಲೇ ಇದ್ದ ವ್ಯಾಪಾರಿಯೊಬ್ಬರು ಗಲಾಟೆಯನ್ನು ತಪ್ಪಿಸಿದ್ದಾರೆ. ಈ ಸಂಬಂಧ ಕೃಷ್ಣಮೂರ್ತಿ ಅವರು ದೀಪು ಅವರ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.