ಕೊಟ್ಟೂರು: ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು. ಸಾಮಾಜಿಕ ಬದಲಾವಣೆಗಾಗಿ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಪಟ್ಟಣದ ಚಾನುಕೋಟಿ ಮಠದ ಆಶ್ರಮದಲ್ಲಿ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವ ಉದ್ಘಾಟಿಸಿ ಗುರುವಾರ ಮಾತನಾಡಿದರು. ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳ 60 ವರ್ಷದ ಜೀವನ ಸಾರ್ಥಕವಾದದ್ದು. ಶ್ರೀಗಳು ಸಮಾಜಕ್ಕಾಗಿ ಬದುಕನ್ನು ಗಂಧದಂತೆ ಸವೆಸಿದ್ದಾರೆ ಎಂದು ಹೇಳಿದರು.
ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಜೀವನ ಚರಿತ್ರೆಯ ವಿಡಿಯೋವನ್ನು ಪತ್ರಕರ್ತ ಭೀಮಣ್ಣ ಗಜಾಪುರ ಬಿಡುಗಡೆ ಮಾಡಿದರು. ಶ್ರೀಶೈಲ ಜಗದ್ಗುರುಗಳಾದ ಶ್ರೀ ಚನ್ನಮಲ್ಲ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ನೇಮಿರಾಜ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿಶ್ವಪ್ರಭು ಶಿವಾಚಾರ್ಯ ಸ್ವಾಮಿಗಳು, ಹಿರಿಯೂರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ, ಜಿ.ಪಂ. ಮಾಜಿ ಸದಸ್ಯ ಹರ್ಷವರ್ಧನ, ಚಾಪಿ ಚಂದ್ರಪ್ಪ, ದಾರುಕೇಶ ಇತರರಿದ್ದರು.