ಚಳ್ಳಕೆರೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ಚಳ್ಳಕೆರೆ: ನಗರದ ಪಾವಗಡ ರಸ್ತೆಯ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಬೇಕೆಂದು ಗುರುವಾರ ರಾಜ್ಯ ರೈತ ಸಂಘಟನೆ ಮುಖಂಡರು ರಸ್ತೆ ತಡೆ ನಡೆಸಿದರು.

ರೈತ ಮುಖಂಡ ಕೆ.ಪಿ. ಭೂತಯ್ಯ ಮಾತನಾಡಿ, ಚಳ್ಳಕೆರೆ-ಪಾವಗಡ ಮಾರ್ಗದಲ್ಲಿ ಸರ್ಕಾರಿ ಐಟಿಐ ಕಾಲೇಜು, ಆದರ್ಶ ಶಾಲೆ, ಕಿತ್ತೂರು ರಾಣಿ ಚನ್ನಮ್ಮ, ಮುರಾರ್ಜಿ ವಸತಿ ಶಾಲೆ ನಿರ್ಮಾಣವಾಗಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ವಾಹನಗಳ ಓಡಾಟ ಹೆಚ್ಚಾಗಿದೆ. ಈ ಭಾಗದಲ್ಲಿ ಗೂಡ್ಸ್, ಪ್ಯಾಸೆಂಜರ್ ರೈಲು ನಿರಂತರ ಓಡಾಡುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸುವಂತೆ ಅನೇಕಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೃಹತ್ ರೈಲು ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈಲ್ವೆ ಇಲಾಖೆ ಅಧಿಕಾರಿ ಡಿ. ಶಿವಮೂರ್ತಿ ಪ್ರತಿಕ್ರಿಯಿಸಿ, ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು. ಫೆಬ್ರುವರಿ ತಿಂಗಳಲ್ಲಿ ರೈಲ್ವೆ ಬಜೆಟ್ ಇರುವ ಕಾರಣ ತಮ್ಮ ಬೇಡಿಕೆಗೆ ಪರಿಹಾರ ಸಿಗುವ ಭರವಸೆ ಇದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರರಾದ ಎಚ್.ಎಸ್. ಸೈಯದ್, ಆರ್. ಪ್ರಸನ್ನಕುಮಾರ್, ಆರ್.ಎ. ದಯಾನಂದ ಮೂರ್ತಿ, ನೇತಾಜಿ ಪ್ರಸನ್ನ, ಓ. ತಿಪ್ಪೇಸ್ವಾಮಿ ಮತ್ತಿತರರಿದ್ದರು.