ಚಳಿಗಾಲದಲ್ಲಿ ಲವಂಗದ ಬಳಕೆ

ಭಾರತವು ಸಾಂಬಾರಪದಾರ್ಥಗಳಿಗೇ ಪ್ರಖ್ಯಾತವಾದ ದೇಶ. ಇಲ್ಲಿ ಸಾಂಬಾರಪದಾರ್ಥಗಳಿಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಅಲ್ಲದೇ ಪುರಾತನ ಕಾಲದಿಂದಲೂ ಇಲ್ಲಿನ ವೈದ್ಯಕೀಯ ಪದ್ಧತಿಗಳಲ್ಲಿ ಸಾಂಬಾರಪದಾರ್ಥಗಳನ್ನು ಬಳಸಲಾಗುತ್ತಿದೆ. ಇಂತಹ ಪದಾರ್ಥಗಳಲ್ಲಿ ಲವಂಗ ಕೂಡ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ಚಳಿಗಾಲದಲ್ಲಿ ಲವಂಗದ ಹೆಚ್ಚಿನ ಬಳಕೆಯು ಹೆಚ್ಚು ಪ್ರಶಸ್ತವಾದುದು. ಹಲ್ಲು ಹಾಗೂ ವಸಡಿಗೆ ಸಂಬಂಧಿಸಿದ ತೊಂದರೆಗಳನ್ನು ಹತೋಟಿ ಮಾಡಲು ಹಾಗೂ ಸಮಸ್ಯೆಗಳಿದ್ದಲ್ಲಿ ಕಡಿಮೆ ಮಾಡಲು ಲವಂಗ ಬಹಳ ಸಹಕಾರಿ. ಆಂಟಿ ಆಕ್ಸಿಡೆಂಟ್​ಗಳಿಂದ ಭರಿತವಾದಂತಹ ಲವಂಗವು ಆಂಟಿ ವೈರಲ್, ಆಂಟಿ

ಇನ್​ಫ್ಲಮೇಟರಿ ಗುಣಗಳನ್ನು ಸಹ ಹೊಂದಿದೆ. ಚಳಿಗಾಲದಲ್ಲಿ ಲವಂಗವನ್ನು ಬಳಸಿದರೆ ಈ ಎಲ್ಲ ಗುಣಗಳಿಂದ ಸಂದುಗಳಿಗೆ ಗಟ್ಟಿತನ ದೊರೆಯುತ್ತದೆ. ಶೀತ, ಜ್ವರ, ಕಫದಿಂದ ದೂರವಿರಲು ಸಹಾಯ ಮಾಡುತ್ತದೆ.

ಲವಂಗವನ್ನು ಬಾಯಿಯಲ್ಲಿಟ್ಟು ನಿಧಾನವಾಗಿ ಅದರ ರಸ ನುಂಗುತ್ತ ಹೋಗುವುದರಿಂದ ಗಂಟಲು ನೋವು, ಇನ್​ಫೆಕ್ಷನ್ ಕಡಿಮೆ ಆಗುತ್ತದೆ. ಅದರಲ್ಲಿಯೂ ಲವಂಗವು ಎಕ್ಸೆ್ಪಕ್ಟೋರೆಂಟ್ ಎನ್ನುವುದಾಗಿಯೇ ಸಾಬೀತಾಗಿರುವಂತಹದ್ದು. ಅಂದರೆ ಇದು ಕಟ್ಟಿಕೊಂಡಿರುವ ಕಫವನ್ನು ಸಡಿಲಗೊಳಿಸಿ ಹೊರಹಾಕಲು ಸಹಾಯ ಮಾಡುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಸೋಂಕುಗಳಿಂದ ರಕ್ಷಿಸಲು, ಒತ್ತಡವನ್ನು ಕಡಿಮೆ ಮಾಡಲು, ಚರ್ಮದ ಆರೋಗ್ಯಕ್ಕೆ, ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಲವಂಗದ ಬಳಕೆಯು ಸಹಕಾರಿ. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಲವಂಗವನ್ನು ಹಾಕಿ ಬಿಸಿ ಮಾಡಿ ಅದರ ಸಂಪೂರ್ಣ ಸಾರ ಹೊರಬರುವಂತೆ ಮಾಡಿ ಎಣ್ಣೆ ತಯಾರಿಸಬೇಕು. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನೋವು, ಬಾವು ಕಡಿಮೆಯಾಗಲು ಸಾಧ್ಯವಾಗುತ್ತದೆ. ಚಳಿಗಾಲದಲ್ಲಿ ಲವಂಗದ ಹೆಚ್ಚಿನ ಬಳಕೆಯು ಉಪಯುಕ್ತ.