ಚಳಿಗಾಲದಲ್ಲಿ ರೋಗ ಕಡಿಮೆಯೇ?

ಅಬ್ಬಬ್ಬಾ, ಏನು ಚಳಿ! ಯಾಕೀ ಚಳಿಗಾಲ ಬಂತೋ ಎಂದು ಪರಿತಪಿಸುವವರು ಬೇಸಿಗೆ ಬಂದಾಗಲೂ, ಮಳೆಗಾಲ ಪ್ರಾರಂಭವಾದಾಗಲೂ ಸುಮ್ಮನಿರುವುದಿಲ್ಲ. ಇದೇ ರೀತಿಯ ಉದ್ಗಾರ ತೆಗೆಯುತ್ತಾರೆ! ಜನರ ಸ್ವಭಾವವೇ ಹಾಗೆ. ಆರೋಗ್ಯದ ದೃಷ್ಟಿಯಿಂದ ಚಳಿಗಾಲವೆಂದರೆ ಆರೋಗ್ಯಪೂರ್ಣ ಕಾಲ! ಮಂಡಿನೋವು ಹೆಚ್ಚಾಗುತ್ತದೆ, ಶೀತ, ಕೆಮ್ಮು, ಅಲರ್ಜಿಗಳು ಕಾಡುತ್ತದೆ, ಕಿವಿನೋವು ಬಾಧಿಸುತ್ತದೆ, ಉಸಿರಾಟ ಸಮಸ್ಯೆ ಉಲ್ಬಣಿಸುತ್ತದೆ. ಎಷ್ಟೊಂದು ರೋಗಗಳು ಈ ಚಳಿಗಾಲದಲ್ಲಿ ಎಂಬ ಭೀತಿ ಮನಸ್ಸನ್ನು ಕಾಡಬಹುದು. ಆದರೆ ವಾಸ್ತವಾಂಶ ಬೇರೆಯೇ ಇದೆ. ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ವರ್ಷದಲ್ಲೇ ಅತ್ಯಂತ ಕಡಿಮೆ ರೋಗಿಗಳಿರುವ ಕಾಲವಿದು! ಜೀವನಪೂರ್ತಿ ಔಷಧ ಸೇವಿಸಬೇಕಾದಂತಹ ಕಾಯಿಲೆಗಳು ಚಳಿಗಾಲದಲ್ಲಿ ಇದ್ದೇ ಇರುತ್ತವೆ. ಆದರೆ ಸ್ವಲ್ಪ ಕಾಲ ತೊಂದರೆ ನೀಡುವ ವ್ಯಾಧಿಗಳು ಈ ಸಮಯದಲ್ಲಿ ಕಾಣಿಸಿಕೊಳ್ಳುವುದೇ ಕಡಿಮೆ. ಏಕೆ ಹೀಗೆಂಬುದನ್ನು ವಿಮಶಿಸಿದರೆ ಕುತೂಹಲಕಾರೀ ಅಂಶಗಳು ಹೊರಬರುತ್ತವೆ.

ವರ್ಷದಲ್ಲಿ ಆಹಾರವಸ್ತುಗಳಿಗೆ, ಧವಸಧಾನ್ಯಗಳಿಗೆ, ದಿನಸಿವಸ್ತುಗಳಿಗೆ, ಹಣ್ಣು-ತರಕಾರಿಗಳಿಗೆ ಅತಿಹೆಚ್ಚು ಹಣ ವ್ಯಯವಾಗುವ ತಿಂಗಳುಗಳೆಂದರೆ ನವಂಬರ್, ಡಿಸೆಂಬರ್ ಹಾಗೂ ಜನವರಿಗಳು! ಅದೇ ಚಳಿಗಾಲ. ಚಳಿಗಾಲದಲ್ಲಿ ಜನರು ಅತಿಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೆ. ಅಂದರೆ ಹೆಚ್ಚು ತಿಂದಾಗ ರೋಗ ಕಡಿಮೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಜವಾದ ಕಾರಣ ಇದಲ್ಲ. ವರ್ಷದಲ್ಲಿ ಜೀರ್ಣಶಕ್ತಿ ಅತ್ಯಂತ ಪ್ರಬಲವಾಗಿರುವುದು ಚಳಿಗಾಲದಲ್ಲಿ. ಸೂರ್ಯ ಭೂಮಿಯಿಂದ ಅತಿ ದೂರದಲ್ಲಿರುವ ಹೇಮಂತ, ಶಿಶಿರ ಋತುಗಳಿವು. ಪ್ರಕೃತಿಯಲ್ಲಿ, ಜನರಲ್ಲಿ, ತರಕಾರಿಗಳಲ್ಲಿ, ಧಾನ್ಯಗಳಲ್ಲಿ ಅತಿಹೆಚ್ಚಿನ ಬಲವಿರುತ್ತದೆ. ಈ ಬಲದಿಂದಾಗಿಯೂ ರೋಗಗಳು ಬರುವುದು ಕಡಿಮೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪಚನಶಕ್ತಿ ಹೆಚ್ಚಿರುವುದರಿಂದಲೇ ಕಾಯಿಲೆಗಳು ಕಡಿಮೆಯಿರುತ್ತವೆ!

ಪಚನಶಕ್ತಿ ದುರ್ಬಲವಾಗಿರುವ ಬೇಸಿಗೆಯನ್ನು ನೆನಪಿಸಿಕೊಳ್ಳಿ. ವಾಂತಿ, ಭೇದಿಗಳು ಸರ್ವೆಸಾಮಾನ್ಯ. ಶರೀರದ ಶಕ್ತಿಯೂ ಕಡಿಮೆಯಿರುತ್ತದೆ. ಹೆಚ್ಚು ತಿನ್ನಲೂ ಸಾಧ್ಯವಾಗುವುದಿಲ್ಲ. ಚಿಕಿತ್ಸಾಲಯಗಳು ರೋಗಿಗಳಿಂದ ತುಂಬಿತುಳುಕುತ್ತಿರುತ್ತವೆ. ಆಯುರ್ವೆದ ಹೇಳಿದ ‘ಸರ್ವೆ ರೋಗಾಪಿ ಮಂದಾಗ್ನೌ’ ಎಂಬ ಸೂತ್ರ ಇಲ್ಲಿ ಇಲ್ಲಿ ನಮಗೆ ಮನದಟ್ಟಾಗುತ್ತದೆ. ಯಾವಾಗ ಜೀರ್ಣಾಗ್ನಿ ಮಂದವಾಗಿರುತ್ತದೋ, ಆವಾಗ ತಿಂದು ಜೀರ್ಣಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಇದರಿಂದ ರೋಗಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದುದರಿಂದ ಜರಣ ಶಕ್ತಿಯನ್ನು ಸದಾ ಸಂರಕ್ಷಿಸಿಕೊಳ್ಳಬೇಕು. ಜರಣ ಸರಿಯಿದ್ದರೆ ರೋಗ ಅವತರಣ ಆಗದು ಎಂಬುದು ಮಾರ್ವಿುಕವಾದ ಸಿದ್ಧಾಂತ. ಅದಕ್ಕಾಗಿ ಸ್ವಸ್ಥ ವ್ಯಕ್ತಿಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ‘ಸಮಾಗ್ನಿಶ್ಚ’ ಎಂಬುದಾಗಿ ಆಯುರ್ವೆದ ಉಲ್ಲೇಖಿಸಿದೆ. ಉಳಿದೆಲ್ಲ ಅಂಶಗಳೊಂದಿಗೆ ಪಾಚಕಾಗ್ನಿಯು ಸಮನಾಗಿದ್ದರೆ ಮಾತ್ರ ವ್ಯಕ್ತಿಯನ್ನು ಸ್ವಸ್ಥ ಎಂದು ಹೇಳಬಹುದು. ಜೀರ್ಣಶಕ್ತಿಗೆ ಅಷ್ಟೊಂದು ಮಹತ್ವವಿದೆ.

ತಾತ್ಪರ್ಯ ಬಹಳ ಸ್ಪಷ್ಟವಿದೆ. ಆಹಾರ ವಸ್ತುಗಳು ಅಧಿಕ ಬಲ ಹೊಂದಿರುವ, ರಾತ್ರಿಕಾಲ ದೀರ್ಘವಾಗಿದ್ದು

ಸೊಂಪಾದ ನಿದ್ರೆ ಬರುವ, ಏನನ್ನು ತಿಂದರೂ ದಕ್ಕಿಸಿಕೊಳ್ಳುವಷ್ಟು ಪ್ರಬಲವಾದ ಜೀರ್ಣಶಕ್ತಿಯನ್ನು ಹೊಂದಿರುವ ಚಳಿಗಾಲವು ಆರೋಗ್ಯಮಯ ಎಂಬುದು ಪರಾಂಬರಿಸಿ ನೋಡಲಾಗಿರುವ ವಾಸ್ತವ.

ಪಂಚಸೂತ್ರಗಳು

  • ಶಂಖಪುಷ್ಪಿ ಎಲೆ: ಯಕೃತ್ ಕಾರ್ಯ ವರ್ಧಕ.
  • ಲಿಂಬೆಹಣ್ಣು: ಚರ್ಮದ ಕಜ್ಜಿ ಗುಣಕಾರಿ.
  • ತೊಂಡೆಕಾಯಿ: ಗಾಯ ಗುಣವಾಗಲು ಸಹಕಾರಿ.
  • ಕೆಸುವಿನ ಎಲೆ: ರಕ್ತಸ್ರಾವ ನಿಲ್ಲಿಸುವುದು.
  • ದಾಲ್ಚಿನ್ನಿ: ಮುಖದ ಬಣ್ಣ ಉತ್ತಮಗೊಳಿಸುವುದು.

Leave a Reply

Your email address will not be published. Required fields are marked *