ಚಳಿಗಾಲದಲ್ಲಿ ಅರಿಶಿಣ ಬಳಕೆ

ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುವಂತಹ ಆಹಾರಪದಾರ್ಥಗಳಲ್ಲಿ ಅರಿಶಿಣ ಸಹ ಒಂದು. ಅರಿಶಿಣದ ಆರೋಗ್ಯ ಸಹಕಾರಿ ಗುಣಗಳ ಬಗ್ಗೆ ಹಿಂದಿನ ಅಂಕಣವೊಂದರಲ್ಲಿ ತಿಳಿದುಕೊಂಡಿದ್ದೆವು. ಭಾರತೀಯ ಪರಂಪರೆಯ ವೈದ್ಯಕೀಯ ಪದ್ಧತಿಗಳಲ್ಲಿ ಅರಿಶಿಣಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಆಂಟಿ ಆಕ್ಸಿಡೆಂಟ್​ಗಳ ಆಗರವೇ ಇದರಲ್ಲಿದ್ದು, ಆರೋಗ್ಯರಕ್ಷಣೆಗೆ ಕಾರಣವಾಗಬಲ್ಲಂತಹ ವಿಶಿಷ್ಟ ಪದಾರ್ಥ ಇದು.

ದೇಹದಲ್ಲಿನ ಹೆಚ್ಚಿನ ಶೀತಕ್ಕೆ ಕಾರಣವಾಗಬಹುದಾದ ತೇವಾಂಶವನ್ನು ಹೀರಿಕೊಂಡು ದೇಹದ ಉಷ್ಣತೆಗೆ ಇದು ಕಾರಣವಾಗುತ್ತದೆ. ಅಂಗಾಂಶಗಳು ಸಡಿಲವಾಗದೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಅರಿಶಿಣವು ಮಾಡುತ್ತದೆ. ಅದಕ್ಕಾಗಿ ಅರಿಶಿಣದ ಹಾಲನ್ನು ಚಳಿಗಾಲದಲ್ಲಿ ಕುಡಿಯುವ ಅಭ್ಯಾಸ ಅನೇಕ ಮನೆಗಳಲ್ಲಿ ಬೆಳೆದುಬಂದಿದೆ.

ಅಲ್ಲದೆ ಅರಿಶಿಣದ ಹಾಲನ್ನು ಗೋಲ್ಡನ್ ಮಿಲ್ಕ್ ಎಂದು ಪರಿಗಣಿಸಲಾಗಿದ್ದು; ಶೀತ, ನೆಗಡಿ ಹಾಗೂ ಇನ್ನಿತರ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಅರಿಶಿಣದ ಹಾಲು ಪರಿಣಾಮಕಾರಿ. ಇದರಲ್ಲಿನ ಆಂಟಿಸೆಪ್ಟಿಕ್ ಹಾಗೂ ಆಂಟಿ ಇನ್​ಫ್ಲಮೇಟರಿ ಗುಣವು ತೊಂದರೆಗಳನ್ನು ಕಡಿಮೆ ಮಾಡಲು ಕಾರಣ. ಅಲ್ಲದೆ ನೋವು ನಿವಾರಣಾ ಅಂಶಗಳೂ ಇರುವುದರಿಂದ ಚಳಿಗಾಲದಲ್ಲಿ ಕಾಡುವ ಈ ಎಲ್ಲ ತೊಂದರೆಗಳಿಂದ ದೂರವಿರಲು ಅರಿಶಿಣದ ಸೇವನೆಯು ಅನುವು ಮಾಡಿಕೊಡುತ್ತದೆ. ನೋವಿನಿಂದ ಕೂಡಿರುವ ಕಫ ಸಹ ಕಡಿಮೆಯಾಗಲು ಸಾಧ್ಯವಾಗುತ್ತದೆ. ಅರಿಶಿಣದಲ್ಲಿನ ಕರ್ಕ್ಯೂಮಿನ್ ಇದರ ಔಷಧೀಯ ಗುಣಗಳಿಗೆ ಕಾರಣ. ಇತ್ತೀಚಿನ ದಿನಗಳಲ್ಲಿ ರಫ್ತು ಮಾಡುವ ಸಲುವಾಗಿ ಕೇವಲ ಕರ್ಕ್ಯೂಮಿನ್ ಅಂಶವನ್ನು ತೆಗೆದು ಅರಿಶಿಣವನ್ನು ಮಾರಲಾಗುತ್ತಿದೆ. ಆದ್ದರಿಂದ ಇದರ ಔಷಧೀಯ ಗುಣವು ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಅರಿಶಿಣದ ಕೊಂಬನ್ನು ತಂದು ಮನೆಯಲ್ಲಿಯೇ ಪುಡಿ ಮಾಡಿ ಬಳಸುವ ಆಯ್ಕೆ ಉತ್ತಮ.

Leave a Reply

Your email address will not be published. Required fields are marked *