ಚರಂಡಿ, ಕಸ ಹೊರತುಪಡಿಸಿ ಇಲ್ಲ ಸಮಸ್ಯೆ

ಡಿ.ಟಿ. ತಿಲಕ್​ರಾಜ್ ಚನ್ನಪಟ್ಟಣ

ರಸ್ತೆ ವಿಚಾರದಲ್ಲಿ ಪಟ್ಟಣದ 26ನೇ ವಾರ್ಡ್ ಸಾಕಷ್ಟು ಅಭಿವೃದ್ಧಿ ಕಂಡಿದ್ದರೂ, ಚರಂಡಿ, ಕಸ ವಿಚಾರದಲ್ಲಿ ಹಿಂದುಳಿದಿದೆ. ಸಮಸ್ಯೆಗಳ ನಡುವೆಯೇ ನಿವಾಸಿಗಳು ಬದುಕು ಸಾಗಿಸುತ್ತಿದ್ದಾರೆ.

ವಾರ್ಡ್ ವ್ಯಾಪ್ತಿಯ ಮದೀನಾ ರಸ್ತೆ ಎಡಭಾಗದಲ್ಲಿ ಕಸದ ರಾಶಿ ಸಾಮಾನ್ಯವಾಗಿದೆ. ವಿಲೇವಾರಿ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಕಸದ ರಾಶಿ ಮತ್ತೆ ಸೃಷ್ಟಿಯಾಗುತ್ತದೆ. ಹಾಗಾಗಿ ಸ್ಥಳೀಯರು ಕಸದ ದುರ್ವಾಸನೆಗೆ ಒಗ್ಗಿಕೊಂಡಿದ್ದಾರೆ. ರಸ್ತೆಬದಿ ಚರಂಡಿ ಸ್ಥಿತಿಯಂತೂ ಕೇಳುವಂತಿಲ್ಲ. ತ್ಯಾಜ್ಯ ತುಂಬಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ರಸ್ತೆಯಲ್ಲಿರುವ ಕಸದ ಜತೆ ಬೆರೆತು ದುರ್ನಾತ ಬೀರುತ್ತಿದೆ.

ಎಣ್ಣೆ ಬಾವಸ್ ಮಿಯಾ ರಸ್ತೆ ಡಾಂಬರೀಕರಣವಾಗಿದ್ದರೂ ಕಳಪೆ ಕಾಮಗಾರಿಯಿಂದಾಗಿ ಗುಂಡಿಬಿದ್ದಿದೆ. ಎರಡೂ ಬದಿ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಕೋರ್ಟ್ ರಸ್ತೆ ಸಮೀಪದಲ್ಲಿರುವ ಚರಂಡಿ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇನ್ನು ಈ ರಸ್ತೆಯ ಬದಿಯಲ್ಲಿಯೇ ಇರುವ ಎಚ್.ಎಂ.ಮೊಹಲ್ಲಾದಲ್ಲಿ ಕಾಂಕ್ರೀಟ್ ರಸ್ತೆ ನಿರ್ವಿುಸಿದ್ದು, ಎರಡು ಮಣ್ಣಿನ ರಸ್ತೆಗಳಿದ್ದು, ಅಭಿವೃದ್ಧಿಪಡಿಸಬೇಕಾಗಿದೆ.

ನ್ಯಾಯಾಲಯ ಕಟ್ಟಡದ ಎದುರಿನ ಅಡ್ಡರಸ್ತೆಗಳು ಡಾಂಬರೀಕರಣವಾಗಿದ್ದರೂ ಅವುಗಳ ಆಯಸ್ಸು ಮುಗಿದಿದ್ದು ಅಭಿವೃದ್ಧಿಗೆ ಕಾಯುತ್ತಿವೆ. ಇನ್ನು ಫರ್ಹಾ ರಸ್ತೆ ಬಲಭಾಗದಲ್ಲಿರುವ ಖಿನಾತ್ ಮೊಹಲ್ಲಾದ ರಸ್ತೆಗಳು ಡಾಂಬರೀಕರಣವಾಗಿವೆ. ಎಣ್ಣೆ ಬಾವಸ್ ಮಿಯಾ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗಿದ್ದು, ಮಳೆ ನೀರಿನಿಂದ ಒಳಚರಂಡಿ ತುಂಬಿ ಮ್ಯಾನ್​ಹೋಲ್​ನಿಂದ ನೀರು ಉಕ್ಕಿ ರಸ್ತೆಗೆ ಹರಿಯುತ್ತದೆ. ಇದರಿಂದಾಗಿ ರಸ್ತೆ ಹಾಳಾಗಿದೆ ಎಂಬುದು ಸ್ಥಳೀಯರ ದೂರಾಗಿದೆ.

ಚರಂಡಿ, ಕಸದ ಸಮಸ್ಯೆ ಹೊರತುಪಡಿಸಿದರೆ ವಾರ್ಡ್ ಅಭಿವೃದ್ಧಿ ಕಂಡಿದ್ದು, ಉಳಿದಿರುವ ಎರಡು ರಸ್ತೆಗಳನ್ನು ಡಾಂಬರೀಕರಣಗೊಳಿಸಿದರೆ ರಸ್ತೆ ಸಮಸ್ಯೆ ಸಂಪೂರ್ಣ ಪರಿಹಾರವಾಗಲಿದೆ. ಪಟ್ಟಣದಾದ್ಯಂತ ಕಸ ಸಮಸ್ಯೆ ಇದೆ. ಶಾಶ್ವತ ಪರಿಹಾರ ಸಿಗುವವರೆಗೂ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ.

ವಾರ್ಡ್​ನಲ್ಲಿನ ಎರಡು ರಸ್ತೆಗಳನ್ನು ಹೊರತುಪಡಿಸಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಎಣ್ಣೆ ಬಾವಸ್ ಮಿಯಾ ರಸ್ತೆ ಡಾಂಬರೀಕರಣ ಕಂಡಿದ್ದರೂ ಹದಗೆಟ್ಟಿದೆ. ಹೊಸದಾಗಿ ಡಾಂಬರು ಹಾಕಲು ಕ್ರಮ ವಹಿಸಲಾಗುವುದು. ಒಳಚರಂಡಿ ಸಂಪರ್ಕ ಇಲ್ಲದಿದ್ದರೂ ಮ್ಯಾನ್​ಹೋಲ್​ನಿಂದ ನೀರು ಉಕ್ಕುತ್ತಿದೆ. ಇದರಿಂದ ರಸ್ತೆ ಹಾಳಾಗುತ್ತಿದೆ. ವಾರ್ಡ್​ನಲ್ಲಿ ನೀರಿನ ಸಮಸ್ಯೆ ಇಲ್ಲ. ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. ಕಸ ಸಮಸ್ಯೆಗೆ ಜಿಲ್ಲಾಡಳಿತವೇ ಪರಿಹಾರ ನೀಡಬೇಕಿದೆ.

| ಸೈಯದ್ ಆಶೀಂ, ವಾರ್ಡ್ ಸದಸ್ಯ

ಮದೀನಾ ರಸ್ತೆಯಲ್ಲಿನ ಚರಂಡಿ ಸಂಪೂರ್ಣ ಮುಚ್ಚಿಹೋಗಿದೆ. ಮಳೆನೀರು ರಸ್ತೆಗೆ ಹರಿಯುತ್ತಿದೆ, ರಸ್ತೆ ಎಡಭಾಗದಲ್ಲಿ ಕಸ ಸುರಿಯಲಾಗುತ್ತಿದ್ದು, ಇದು ಅಕ್ಕಪಕ್ಕದ 3 ವಾರ್ಡ್​ಗಳಲ್ಲಿ ಎದುರಾಗಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಕಸ ತಂದು ಹಾಕುವವರ ವಿರುದ್ಧ ನಗರಸಭೆ ಅಧಿಕಾರಿಗಳು ಕ್ರಮ ಜರುಗಿಸಬೇಕು. ಜನ ಕಸ ಸಂಗ್ರಹಣೆ ವಾಹನಗಳಿಗೆ ಕಸ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ.

| ರಾಜು, ವಾರ್ಡ್ ನಿವಾಸಿ

ವಾರ್ಡ್ ವ್ಯಾಪ್ತಿಯಲ್ಲಿ ಡಾಂಬರು ರಸ್ತೆ ನಿರ್ಮಾಣ ಮಾಡಿರುವುದರಿಂದ ಅಷ್ಟು ಸಮಸ್ಯೆ ಇಲ್ಲ. ಚರಂಡಿ ಸಮಸ್ಯೆ ಸಾಕಷ್ಟಿವೆ. ಇರುವ ಎರಡು ಮಣ್ಣಿನ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಬಾವಸ್ ಮಿಯಾ ರಸ್ತೆ ಆರಂಭದಲ್ಲಿಯೇ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ಈ ಸಮಸ್ಯೆ ಪರಿಹರಿಸಲು ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಗಮನಹರಿಸಬೇಕು.

| ಪರ್ವೀಜ್ ಅಹಮ್ಮದ್, ಸ್ಥಳೀಯರು