ಚರಂಡಿಗೆ ಇಳಿದ ಶಾಲಾ ವಾಹನ

ಆಲೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಶಾಲೆಯ ವಾಹನ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಆದರೆ, ಅದೃಷ್ಟವಶಾತ್ ವಾಹನದಲ್ಲಿದ್ದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಭೈರಾಪುರ ಗ್ರಾಮದ ಬೆಥೇಸ್ಥ ಆಂಗ್ಲ ಮಾಧ್ಯಮ ಶಾಲೆಯ ವಾಹನ ಪಾಳ್ಯ ಗ್ರಾಮದಿಂದ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ಇದೇ ವೇಳೆ ಸಿಂಗಾಪುರದ ಮುಖ್ಯರಸ್ತೆಯಲ್ಲಿರುವ ಶ್ರೀ ಶನೈಶ್ಚರ ದೇವಸ್ಥಾನದ ಮುಂಭಾಗ ಪೂಜೆಗೆಂದು ನಿಲ್ಲಿಸಿದ್ದ ಲಾರಿಯನ್ನು ಚಾಲಕ ರಿವರ್ಸ್ ತೆಗೆಯುತ್ತಿದ್ದ. ಆಗ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಚಾಲಕ ಶಾಲಾ ವಾಹನವನ್ನು ರಸ್ತೆ ಪಕ್ಕದ ಚರಂಡಿಗೆ ಇಳಿಸಿದ್ದಾನೆ. ಇದರಿಂದ ವಾಹನದಲ್ಲಿದ್ದ 9 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.