ಚಮಕ್ ಈಗ ಗೀತಾ ಚಲೋ!

ಬೆಂಗಳೂರು: 2017ರ ಅಂತ್ಯದಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿದ್ದ ‘ಗೋಲ್ಡನ್ ಸ್ಟಾರ್’ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಚಮಕ್’ ಚಿತ್ರ ಈಗ ಮತ್ತೆ ಸದ್ದು ಮಾಡುತ್ತಿದೆ. ಅದು ಕರ್ನಾಟಕದಲ್ಲಿ ಅಲ್ಲ. ಬದಲಿಗೆ, ಟಾಲಿವುಡ್​ನಲ್ಲಿ! ಹೌದು, ಈ ಸಿನಿಮಾ ತೆಲುಗಿಗೆ ‘ಗೀತಾ ಚಲೋ’ ಹೆಸರಿನಲ್ಲಿ ಡಬ್ ಆಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಏ.26ರಂದು ಚಿತ್ರ ತೆರೆಕಾಣಲಿದ್ದು, ಅದಕ್ಕೂ ಮೊದಲು ಏ.17ರಂದು ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ರಶ್ಮಿಕಾಗೆ ಟಾಲಿವುಡ್​ನಲ್ಲಿ ಜನಪ್ರಿಯತೆ ಸೃಷ್ಟಿಯಾಗಿದೆ. ಅದರ ಲಾಭ ಪಡೆಯುವ ಉದ್ದೇಶದಿಂದ ಅವರ ಅಭಿನಯದ ಸಿನಿಮಾಗಳ ಶೀರ್ಷಿಕೆಯನ್ನು ಬಳಸಿ, ‘ಚಮಕ್’ ಡಬ್ಬಿಂಗ್​ಗೆ ‘ಗೀತಾ ಚಲೋ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ‘ಚಮಕ್’ ಚಿತ್ರಕ್ಕೆ ‘ಸಿಂಪಲ್’ ಸುನಿ ನಿರ್ದೇಶನ ಮಾಡಿದ್ದು, ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡಿದ್ದರು. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಾಡುಗಳು ಕೇಳುಗರ ಮನಸೂರೆಗೊಂಡಿದ್ದವು. ಏ. 26ಕ್ಕೆ ಗಣೇಶ್ ಅಭಿನಯದ ’99’ ಚಿತ್ರ ತೆರೆಕಾಣಲು ಸಜ್ಜಾಗಿದೆ. ಅದೇ ದಿನ ತೆಲುಗಿನಲ್ಲಿ ‘ಗೀತಾ ಚಲೋ’ ಶೀರ್ಷಿಕೆ ಹೊತ್ತು ಅವರ ‘ಚಮಕ್’ ಸಿನಿಮಾ ಸಹ ಬಿಡುಗಡೆಯಾಗುತ್ತಿರುವುದು ವಿಶೇಷವೇ ಸರಿ.