ಚಪಾತಿಯಿಂದ ವಿವಿಧ ಖಾದ್ಯಗಳು

ಅಡುಗೆ ಮಾಡುವಾಗ ಎಷ್ಟೇ ಲೆಕ್ಕಾಚಾರ ಹಾಕಿ ಮಾಡಿದ್ರೂ ಒಮ್ಮೊಮ್ಮೆ ಮಾಡಿದ ಅಡುಗೆ ಉಳಿದುಬಿಡುತ್ತದೆ. ಹೀಗೆ ಚಪಾತಿ ಮಿಕ್ಕಿದರೆ ಅದಕ್ಕೆ ಮತ್ತದೇ ಪಲ್ಯವನ್ನೋ, ಚಟ್ನಿಯನ್ನೋ ಮಾಡಿ ತಿನ್ನಲು ಬೇಜಾರಾಗುತ್ತದೆ. ಅದರ ಬದಲಾಗಿ, ಚಪಾತಿಯನ್ನೇ ಪರಿವರ್ತಿಸಿ ನಾನಾ ಬಗೆಯ ಹೊಸ ಖಾದ್ಯಗಳನ್ನಾಗಿ ಮಾಡಬಹುದು.

ಶಿಲ್ಪಾ ಕುಲಕರ್ಣಿ

ಚಪಾತಿ ಉಪ್ಪಿಟ್ಟು

ಸಾಮಗ್ರಿ: ಈರುಳ್ಳಿ, ಟೊಮ್ಯಾಟೊ, ಹಸಿಮೆಣಸಿನಕಾಯಿ, ಕರಿಬೇವು, ಕೊತಂಬರಿ ಸೊಪ್ಪು, ಕಡಲೆಬೀಜ, ಹುರಿಗಡಲೆ, ಉದ್ದಿನಬೇಳೆ.

ಚಪಾತಿಯನ್ನು ಸಣ್ಣಗೆ ತುಂಡರಿಸಿ ಅದಕ್ಕೆ ಉಪ್ಪು, ಸಕ್ಕರೆ, ಕಡಲೆಬೀಜದ ಪುಡಿಯನ್ನು ಬೆರೆಸಿಟ್ಟುಕೊಳ್ಳಬೇಕು. ಎಣ್ಣೆಗೆ ಸಾಸಿವೆ, ಜಿರೀಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೀಜ, ಹುರಿಗಡಲೆ ಹಾಕಿ ಸ್ವಲ್ಪ ಫ್ರೖೆ ಮಾಡಬೇಕು. ನಂತರ ಹಸಿಮೆಣಸಿನಕಾಯಿ, ತುಂಡರಿಸಿದ ಈರುಳ್ಳಿ, ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯುವವರೆಗೆ ಫ್ರೖೆ ಮಾಡಬೇಕು. ಸಿದ್ಧಪಡಿಸಿದ ಚಪಾತಿಯ ಮಿಶ್ರಣವನ್ನು ಒಗ್ಗರಣೆಗೆ ಹಾಕಬೇಕು. ಸ್ವಲ್ಪ ಹೊತ್ತು ಚೆನ್ನಾಗಿ ಫ್ರೖೆ ಮಾಡಿ, ಕೊತ್ತಂಬರಿ ಸೊಪ್ಪನ್ನು ಬೆರೆಸಿ. ಈಗ ಚಪಾತಿ ಉಪ್ಪಿಟ್ಟು ಸವಿಯಲು ಸಿದ್ಧ.

ಚಪಾತಿ ಮಾಲೆದಿ

ಸಾಮಗ್ರಿ : ಒಣ ಕೊಬ್ಬರಿ, ಗಸಗಸೆ, ಕಡಲೆಬೀಜದ ಪುಡಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ಬೆಲ್ಲ. ಚಪಾತಿ ಮತ್ತು ಬೆಲ್ಲವನ್ನು ಹಾಕಿ ಮಿಕ್ಸರ್​ನಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಹೀಗೆ ಸಿದ್ಧಪಡಿಸಿದ ಮಿಶ್ರಣಕ್ಕೆ ಒಣಕೊಬ್ಬರಿ, ಗಸಗಸೆ, ಕಡಲೆಬೀಜ, ಹುರಿಗಡಲೆ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಬೇಕು. ಹೀಗೆ ಸಿದ್ಧಪಡಿಸಿದ ಮಿಶ್ರಣವನ್ನು ಬೇಕಾದರೆ ಉಂಡೆಗಳಾಗಿಯೂ ಮಾಡಿಕೊಳ್ಳಬಹುದು. ಇದನ್ನು ತುಪ್ಪದೊಂದಿಗೆ ತಿಂದರೆ ಸ್ವಾದ ಹೆಚ್ಚು.

ಚಪಾತಿ ವೆಜ್ ರೋಲ್

ಸಾಮಗ್ರಿ : ಆಲೂಗಡ್ಡೆ, ಕ್ಯಾರಟ್, ದಪ್ಪಮೆಣಸಿನಕಾಯಿ, ಟೊಮ್ಯಾಟೊ, ಪನ್ನೀರ್ ಚೂರುಗಳು, ಈರುಳ್ಳಿ, ಬೆಳ್ಳುಳ್ಳಿ, ಗರಂ ಮಸಾಲಾ.

ಚಪಾತಿಯನ್ನು ಪ್ಯಾನ್​ನಲ್ಲಿ ಬಿಸಿಮಾಡಿಕೊಳ್ಳಬೇಕು. ಮೇಲೆ ನಮೂದಿಸಿದ ಸಾಮಗ್ರಿಗಳಿಂದ ಅಥವಾ ಅವರವರ ಅಗತ್ಯಕ್ಕನುಗುಣವಾಗಿ ವಿವಿಧ ತರಕಾರಿಗಳಿಂದ ಪಲ್ಯ ಮಾಡಿಕೊಂಡು ಗರಂ ಮಸಾಲಾ ಹಾಕಿ ಫ್ರೖೆ ಮಾಡಿಕೊಳ್ಳಬೇಕು. ಬಿಸಿಮಾಡಿದ ಚಪಾತಿಗೆ ತುಪ್ಪ ಸವರಿ, ಚಟ್ನಿ ಪುಡಿ ಉದುರಿಸಿ, ಸಿದ್ಧಪಡಿಸಿದ ಪಲ್ಯವನ್ನು ಚಪಾತಿಯ ಎಲ್ಲ ಬದಿಗೂ ತುಂಬಿ, ಟೊಮ್ಯಾಟೊ ಮತ್ತು ಮಯೋನೀಸ್ ಸಾಸ್ ಹಾಕಿ ಸುರುಳಿ ಸುತ್ತಬೇಕು. ಹೀಗೆ ಸಿದ್ಧಪಡಿಸಿದ ರೋಲ್ ಅನ್ನು ಟೊಮ್ಯಾಟೊ ಕೆಚಪ್​ನೊಂದಿಗೆ ಸವಿಯಬಹುದು.

Leave a Reply

Your email address will not be published. Required fields are marked *