ಸಿನಿಮಾ

ಚನ್ನರಾಯಪಟ್ಟಣದಲ್ಲಿ ಬಿಜೆಪಿಯಿಂದ ಬೈಕ್ ರ‌್ಯಾಲಿ

ಚನ್ನರಾಯಪಟ್ಟಣ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಆರ್.ಚಿದಾನಂದ ಭಾನುವಾರ ಭರ್ಜರಿ ಪ್ರಚಾರ ನಡೆಸಿದರು.

ಪಟ್ಟಣದಲ್ಲಿ ಚಿದನಂದ್ ನೇತೃತ್ವದಲ್ಲಿ ಭರ್ಜರಿ ಬೈಕ್ ರ‌್ಯಾಲಿ ನಡೆದಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಯಿತು. ಪಟ್ಟಣದ ಮಖಾನ್‌ನಿಂದ ಆರಂಭವಾದ ರ‌್ಯಾಲಿ ಹೊಸ ಬಸ್ ನಿಲ್ದಾಣ, ನವೋದಯ ಸರ್ಕಲ್, ಕೃಷ್ಣರಾಜೇಂದ್ರ ಒಡೆಯರ್ ಸರ್ಕಲ್ ಮುಖಾಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರ‌್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಬಿಜೆಪಿ ಭಾವುಟಗಳು ರಾರಾಜಿಸಿದವು. ಈ ವೇಳೆ ಚಿದಾನಂದ್ ಮತದಾರರಲ್ಲಿ ಮತಯಾಚಿಸಿದರು.

ಕಾಂಗ್ರೆಸ್‌ಗೆ ಮತ ನೀಡಿದರೆ ಅವರು ಜೆಡಿಎಸ್‌ನವರನ್ನು ಮುಖ್ಯಮಂತ್ರಿಯಾಗಿಸುತ್ತಾರೆ. ಅಂತೆಯೆ ಜೆಡಿಎಸ್‌ಗೆ ಮತ ನೀಡಿದರೆ ಅವರು ಕಾಂಗ್ರೆಸ್‌ನವರೊಂದಿಗೆ ಕೈಜೋಡಿಸುತ್ತಾರೆ. ಈ ಎರಡೂ ಪಕ್ಷಗಳು ಬೆಳಗ್ಗೆ ಮಾತ್ರ ದೂರ ದೂರ. ಹಾಗಾಗಿ ಈ ಬಾರಿ ಬಿಜೆಪಿ ಬೆಂಬಲಿಸಬೇಕು ಎಂದು ಚಿದಾನಂದ್ ಮನವಿ ಮಾಡಿದರು.

ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವ ಶಕ್ತಿ ಇದೆ. ತಾಲೂಕಿನಲ್ಲಿ 20 ವರ್ಷಗಳಿಂದ ಒಂದೇ ಪಕ್ಷಕ್ಕೆ ಮತ ಹಾಕುತ್ತಿರುವುದರಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇದರಿಂದ ಹೊರ ಬರಬೇಕಾದರೆ ಒಂದು ಬಾರಿ ಯುವಕನಿಗೆ ಅವಕಾಶ ನೀಡಬೇಕು. ಆ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಯೋಜನೆ ತಲುಪುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ತಾಲೂಕಿನಿಂದ ಒಬ್ಬ ಬಿಜೆಪಿ ಶಾಸಕರಿದ್ದರೆ ಹೆಚ್ಚಿನ ಅನುದಾನ ಎಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು. ಅಲ್ಲದೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಬದಲಾವಣೆ ತರಬೇಕಿದೆ. ಆ ಮೂಲಕ ಶ್ರವಣಬೆಳಗೊಳ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬೇಕಿದೆ ಎಂದರು.

ಶ್ರವಣಬೆಳಗೊಳ ಮಂಡಲ ಅಧ್ಯಕ್ಷ ರವಿ, ಕಾರ್ಯಕರ್ತರಾದ ಪ್ರಶಾಂತ್, ಧರಣೇಶ್, ಜಗದೀಶ್ ಇತರರಿದ್ದರು.

.

Latest Posts

ಲೈಫ್‌ಸ್ಟೈಲ್