ಚನ್ನಪಟ್ಟಣ ಶಾಸಕರು ಯಾರು?

ಚನ್ನಪಟ್ಟಣ: ಕ್ಷೇತ್ರದಲ್ಲಿ ಶಾಸಕರು ಯಾರು? ಎಚ್.ಡಿ.ಕುಮಾರಸ್ವಾಮಿ ಅವರೋ, ಇಲ್ಲ ಅವರ ಹಿಂಬಾಲಕರೋ? ಇಂತಹದೊಂದು ಪ್ರಶ್ನೆ ಇದೀಗ ಚನ್ನಪಟ್ಟಣದಲ್ಲಿ ಕೇಳಿ ಬಂದಿದೆ. ಜೆಡಿಎಸ್​ನ ಘಟಕವೊಂದರ ಅಧ್ಯಕ್ಷರು ತಮ್ಮ ನಿವಾಸದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಸಭೆ ನಡೆಸದವರು ಯಾರು?: ಕಳೆದ ಎರಡು ದಿನಗಳಿಂದ ನಗರಸಭೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಪೌರಾಯುಕ್ತ ಪುಟ್ಟಸ್ವಾಮಿ, ತಹಸೀಲ್ದಾರ್ ಯೋಗಾನಂದ್, ಸಂಚಾರ ಠಾಣೆ ಪಿಎಸ್​ಐ ಶಿವಕುಮಾರ್ ಹಾಗೂ ಕೆಲ ಅಧಿಕಾರಿಗಳನ್ನು ಮನೆಗೆ ಕರೆಸಿ ಸಭೆ ನಡೆಸಿದ್ದಾರೆ. ಯಾವುದೇ ಚುನಾಯಿತ ಪ್ರತಿನಿಧಿಯಲ್ಲದ, ಯಾವುದೇ ಸಾಂವಿಧಾನಾತ್ಮಕ ಹುದ್ದೆ ಹೊಂದಿಲ್ಲದ ರಾಜಣ್ಣ ತಮ್ಮ ಮನೆಗೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವ ಮೂಲಕ ತಾಲೂಕಿನಲ್ಲಿ ಅಧಿಕಾರ ಚಲಾಯಿಸುತ್ತಿರುವವರು ಯಾರು ಎಂಬ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.

ದೂರವಾಣಿ ಕರೆಗೆ ಬಂದರು: ನಗರದ ಅಂಚೆ ಕಚೇರಿ ರಸ್ತೆಯಲ್ಲಿ ಮಿತಿಮೀರಿದ ಬೀದಿಬದಿ ವ್ಯಾಪಾರ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಇದರ ವಿರುದ್ಧ ಕೆಲ

ಬೀದಿಬದಿ ವ್ಯಾಪಾರಿಗಳು ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ ಮೊರೆ ಹೋಗಿದ್ದರು. ಮನೆಗೆ ಬೀದಿಬದಿ ವ್ಯಾಪಾರಿಗಳನ್ನು ಕರೆಸಿಕೊಂಡ ರಾಜಣ್ಣ, ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಬರುವಂತೆ ತಿಳಿಸಿದರು. ತಕ್ಷಣ ಅಧಿಕಾರಿಗಳು ರಾಜಣ್ಣ ಮನೆಗೆ ದೌಡಾಯಿಸುವ ಮೂಲಕ ಸಿಎಂ ಸ್ವಕ್ಷೇತ್ರದ ಆಡಳಿತದಲ್ಲಿ ಜೆಡಿಎಸ್ ಮುಖಂಡರು ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಗೊಳಿಸಿದರು.

ಮನೆಯಲ್ಲಿ ಸಭೆ ಯಾಕೆ?: ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಪರಿಹರಿಸಬೇಕು ಎಂದಾದಲ್ಲಿ ನಗರಸಭೆ ಕಚೇರಿಯಲ್ಲಾಗಲಿ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಾಗಲಿ ಇಲ್ಲವೇ ಪ್ರವಾಸಿ ಮಂದಿರದಲ್ಲಾಗಲಿ ಸಭೆ ನಡೆಸಿ ರ್ಚಚಿಸಬಹುದಿತ್ತು. ಆದರೆ, ತಮ್ಮ ಮನೆಗೇ ತಾಲೂಕಿನ ಪ್ರಮುಖ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ರಾಜಣ್ಣ ಗುರಿಯಾಗಿದ್ದಾರೆ.

ಮುಖ್ಯಮಂತ್ರಿ ಬರೋಲ್ಲ..!: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಿಂದ ಗೆಲುವು ಸಾಧಿಸಿದ ನಂತರ ಕ್ಷೇತ್ರಕ್ಕೆ ಬಂದಿದ್ದು ಒಮ್ಮೆ ಮಾತ್ರ. ಇನ್ನೊಮ್ಮೆ ಕಾರ್ಯಕ್ರಮ ನಿಗದಿಯಾಗಿದ್ದರೂ ಮಂಡ್ಯದಲ್ಲಿ ನಡೆದ ಬಸ್ ಅವಘಡದ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಯಿತು. ಇನ್ನು ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚಾಗಿ ಒಡನಾಟ ಇಟ್ಟುಕೊಂಡಿರುವ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರೇ ಚನ್ನಪಟ್ಟಣದಲ್ಲಿ ಕೇವಲ ಗುದ್ದಲಿಪೂಜೆ, ಉದ್ಘಾಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಮುಖಂಡರೇ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಜೆಡಿಎಸ್ ಮುಖಂಡರ ಮಾತು ಕೇಳಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.

ಅಧಿಕಾರಿಗಳಿಗೆ ಭಯ?: ರಾಮನಗರ – ಚನ್ನಪಟ್ಟಣದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಶಾಸಕರ ಹಿಂಬಾಲಕರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರಿಲ್ಲದರಿದ್ದರೂ ವೇದಿಕೆ ಏರಿ ಕೂರುವ ಪರಿಹಾಠ ಹೆಚ್ಚುತ್ತಿದೆ. ಕಾರ್ಯಕ್ರಮ ಆಯೋಜಿಸುವ ಅಧಿಕಾರಿಗಳು ಭಯದಿಂದ, ಇಲ್ಲವೇ ಮುಲಾಜಿಗೆ ಒಳಗಾಗಿ ಯಾರನ್ನೂ ವೇದಿಕೆಯಿಂದ ಕೆಳಗಿಳಿಸುವ ಧೈರ್ಯ ಮಾಡುವುದಿಲ್ಲ. ಇದೀಗ ಚನ್ನಪಟ್ಟಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಮುಖಂಡ ರಾಜಣ್ಣ ತಮ್ಮ ನಿವಾಸದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಬೀದಿಬದಿ ವ್ಯಾಪಾರಿಗಳನ್ನು ಕೂರಿಸಿ ಕೊಂಡಿದ್ದಾರೆ ಎಂಬ ಮಾಹಿತಿ ಇರಲಿಲ್ಲ, ವಾರ್ಡ್​ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದೆ. ಈ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿದ ರಾಜಣ್ಣ ಮನೆಗೆ ಬರುವಂತೆ ತಿಳಿಸಿದರು. ಯಾವುದೋ ಸಮಸ್ಯೆ ಇರಬಹುದು ಹೋದಾಗ ಅಲ್ಲಿ ಬೀದಿಬದಿ ವ್ಯಾಪಾರ ಯಥಾಸ್ಥಿತಿಯಲ್ಲಿರಬೇಕು ಎಂದು ತಾಕೀತು ಮಾಡಿದರು. ಆದರೆ, ನಿರಾಕರಿಸಿ ಬಂದಿದ್ದೇನೆ.

| ಸಿ. ಪುಟ್ಟಸ್ವಾಮಿ ಪೌರಾಯುಕ್ತ

ಬೀದಿಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದಷ್ಟೇ ನನ್ನ ಕಾಳಜಿ. ಆದರೆ. ಅವರು ನನ್ನ ಬಳಿ ಬರದೆ ರಾಜಣ್ಣ ಮನೆಯಲ್ಲಿದ್ದರು. ಸ್ಥಳ ಯಾವುದಾದರೇನು, ಸಮಸ್ಯೆ ಪರಿಹರಿಸುವುದಷ್ಟೇ ಉದ್ದೇಶವಾಗಿತ್ತು.

| ಯೋಗಾನಂದ್ ತಹಸೀಲ್ದಾರ್

ನಗರಸಭೆ ಸಿಬ್ಬಂದಿ ಜತೆ ಅಂಚೆ ಕಚೇರಿ ರಸ್ತೆಯಲ್ಲಿ ತೆರವು ಕಾರ್ಯಾಚರಣೆಯಲ್ಲಿ ನಿರತನಾಗಿದ್ದೆ. ಕಾರ್ಯಾಚರಣೆ ಮುಗಿಸಿ ಹೋಗುತ್ತಿರುವಾಗ ರಾಜಣ್ಣ ಮನೆ ಮುಂದೆ ಜನ ಸೇರಿದ್ದರು, ಏನೆಂದು ನೋಡಲು ಹೋಗಿದ್ದೆ ಅಷ್ಟೆ.

| ಶಿವಕುಮಾರ್ ಸಂಚಾರ ಠಾಣೆ ಪಿಎಸ್​ಐ

ಬೀದಿಬದಿ ವ್ಯಾಪಾರಿಗಳು ಸಮಸ್ಯೆ ಪರಿಹರಿಸಿ ಎಂದು ಮನೆಗೆ ಬಂದು ಒತ್ತಡ ಹಾಕುತ್ತಿದ್ದರು. ಹಾಗಾಗಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದೆ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಆಗಮಿಸಿದ್ದರು.

| ರಾಂಪುರ ರಾಜಣ್ಣ ನಗರ ಜೆಡಿಎಸ್ ಅಧ್ಯಕ್ಷ