ಚತುಷ್ಪಥ ಕಾಮಗಾರಿ, ತಂಡ್ರಕುಳಿಗೆ ಹೆಮ್ಮಾರಿ

ಶಂಕರ ಶರ್ಮಾ ಕುಮಟಾ

ತಾಲೂಕಿನ ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿ ಗ್ರಾಮಕ್ಕೆ ರಾ. ಹೆ. 66 (17)ರ ಚತುಷ್ಪಥ ಕಾಮಗಾರಿಯು ಶಾಪವಾಗಿ ಪರಿಣಮಿಸಿದೆ. ತಂಡ್ರಕುಳಿಯ ಜನತೆ ಹಗಲು, ರಾತ್ರಿ ಭಯದಲ್ಲೇ ಜೀವ ಹಿಡಿದುಕೊಂಡು ಅಪಾಯದೊಟ್ಟಿಗೆ ಬದುಕುವಂತಾಗಿದೆ.

ಶುಕ್ರವಾರ ಬಂಡೆ ಒಡೆಯಲು ಜಿಲಿಟಿನ್ ಸ್ಫೋಟ ಮಾಡಿದ್ದು, ಇದು ಇಲ್ಲಿಯ ಜನರ ಪಾಲಿಗೆ ಹೆದರಿದವರ ಮೇಲೆ ಹಾವು ಎಸೆದಂತಾಗಿದೆ. ದೊಡ್ಡ ಶಿಲೆಯ ತುಂಡುಗಳು ಬಿದ್ದು ಶಾಲೆ, ಮನೆ ಹಾಗೂ ಅಂಗನ ವಾಡಿಗಳು ಜಖಂ ಗೊಂಡಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಈವರೆಗೂ ಮುಗಿದಿಲ್ಲ. ಎರಡೂವರೆ ವರ್ಷಗಳಿಂದ ಬಂಡೆಗಳ ಸ್ಫೋಟ ನಿರಂತರವಾಗಿದೆ. ಗುಡ್ಡದಲ್ಲಿ ಬಂಡೆ ತೆರವು ಆದ ಬಳಿಕವೇ ರಸ್ತೆ ಕಾರ್ಯ ನಡೆಯಲಿದೆ. ಕಾಮಗಾರಿ ಯಾವಾಗ ಮುಗಿಯುತ್ತದೆಂದು ಜನ ಕಾಯುತ್ತಿದ್ದಾರೆ.

ಗುಡ್ಡ ಕುಸಿತ: ಐಆರ್​ಬಿ ಅಧಿಕಾರಿಗಳು ಚತುಷ್ಪಥ ರಸ್ತೆ ನಿರ್ವಣಕ್ಕಾಗಿ ಅವೈಜ್ಞಾನಿಕವಾಗಿ ಗುಡ್ಡ ಕಡಿದಿದ್ದಾರೆ. ಜೂನ್ 11, 2017ರಂದು ಜಿಲಿಟಿನ್ ಸ್ಫೋಟ ನಡೆಸಿದ್ದರಿಂದ ತಂಡ್ರಕುಳಿ ಗ್ರಾಮದ ಮೇಲೆ ಗುಡ್ಡ ಕುಸಿದು ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಒಂದಷ್ಟು ಪರಿಹಾರವೇನೋ ಬಂತು. ಆದರೆ, ತಂಡ್ರಕುಳಿಯಲ್ಲಿ ಜನಜೀವನ ಸುರಕ್ಷಿತವಲ್ಲ ಎಂಬುದು ಸ್ಪಷ್ಟವಾದರೂ ಅವರಿಗೆ ಪರ್ಯಾಯ ಜಾಗ ಕಲ್ಪಿಸುವ ಗೋಜಿಗೆ ಜಿಲ್ಲಾಡಳಿತ ಮುಂದಾಗಲಿಲ್ಲ.

ಈಡೇರದ ಸ್ಥಳಾಂತರ: ಅಘನಾಶಿನಿ ನದಿ ಹಾಗೂ ರಾ.ಹೆ. ಗುಡ್ಡದ ನಡುವಿನ 50ರಿಂದ 100 ಮೀ. ಅಗಲವಾದ ಪ್ರದೇಶದಲ್ಲಿ ಜನವಸತಿ ವ್ಯಾಪಿಸಿರುವ ತಂಡ್ರಕುಳಿಯಲ್ಲಿ 52 ಕುಟುಂಬಗಳಿದ್ದು, 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗುಡ್ಡ ಕುಸಿತದ ನಂತರ ಈ ಗ್ರಾಮದ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿತು. ಮಳೆಗಾಲದ ನಾಲ್ಕು ತಿಂಗಳಿಗೆ ಸೀಮಿತವಾಗಿ ಸ್ಥಳಾಂತರಗೊಳ್ಳುವ ನಿರ್ಣಯ ದಂತೆ ತಂಡ್ರಕುಳಿಯ ಗ್ರಾಮದ ಜನರಿಗೆ ತಲಾ 10,000 ರೂ. ಹಣ ಸಹಾಯದ ಭರವಸೆ ನೀಡಲಾಗಿತ್ತು. ಆದರೆ, ಯಾರೊಬ್ಬರಿಗೂ ಮೊದಲ ತಿಂಗಳ ಹಣ ಸಂದಾಯವಾಗದ ಕಾರಣ ಎಲ್ಲರೂ ಮತ್ತೆ ತಂಡ್ರಕುಳಿಗೆ ಬಂದು ನೆಲೆಸುವಂತಾಯಿತು.

ಶಾಪವಾದ ಕಾಮಗಾರಿ: ಚತುಷ್ಪಥ ಕಾಮಗಾರಿಯು ತಂಡ್ರಕುಳಿ ಗ್ರಾಮ್ಕಕೆ ಹಲವು ಬಗೆಯ ಸಮಸ್ಯೆಗಳನ್ನು ತಂದೊಡ್ಡಿದೆ. ತಂಡ್ರಕುಳಿಯ ಜೀವಜಲ ಪೂರೈಕೆ ಪೈಪ್​ವಾರ್ಗಗಳು ಸರಿಯಾಗಿ ಜೋಡಣೆಯಾಗಿಲ್ಲ. ಬಂಡೆ ಒಡೆಯುವಾಗ ಹಲವು ಬಾರಿ ಮನೆಗಳ ಮೇಲೆ ಕಲ್ಲು ಬಿದ್ದು ಹಾನಿಯಾದರೂ ಒಮ್ಮೆಯೂ ಪರಿಹಾರ ಕೊಟ್ಟಿಲ್ಲ. ಗುಡ್ಡ ಕುಸಿತದಲ್ಲಿ ಅಮೂಲ್ಯ ಪ್ರಾಣ ಕಳೆದುಕೊಂಡ ಕುಟುಂಬಗಳ ಕಣ್ಣೀರು ಇನ್ನೂ ಆರಿಲ್ಲ. ಬೇರೆಡೆ ಸ್ಥಳಾಂತರಗೊಳ್ಳುವ ನಿಟ್ಟಿನಲ್ಲಿ ತಂಡ್ರಕುಳಿ ಜನತೆಗೆ ಸುರಕ್ಷಿತ ಜಾಗದಲ್ಲಿ ಶಾಶ್ವತ ನಿವೇಶನ ಒದಗಿಸುವ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ.

ಸಕ್ಷಮ ಪ್ರಾಧಿಕಾರದಿಂದ ನೋಟಿಸ್: ಶುಕ್ರವಾರದ ಬಂಡೆ ಸ್ಪೋಟದ ಘಟನೆಯ ಬಗ್ಗೆ ಅದೇ ದಿನ ಐಆರ್​ಬಿಯ ಮಾಡರ್ನ್ ರೋಡ್ ಮೇಕರ್ಸ್ ಕಂಪನಿಗೆ ರಾ. ಹೆ. 66 ಸಕ್ಷಮ ಪ್ರಾಧಿಕಾರದ ಆಯುಕ್ತೆ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ನೋಟಿಸ್ ನೀಡಿ ಎಚ್ಚರಿಸಿದ್ದಾರೆ. ಸ್ಪೋಟದಿಂದ ತಂಡ್ರಕುಳಿಯಲ್ಲಿ ಶಾಲೆ ಹಾಗೂ ಸ್ಥಳೀಯರ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈವರೆಗಿನ ಇಂತಹ ಪ್ರಕರಣಗಳಲ್ಲಿ ಹಾನಿಗೊಳಗಾದವರಿಗೆ ಪರಿಹಾರ ಕೊಟ್ಟಿಲ್ಲ. ಇನ್ನೊಮ್ಮೆ ಇಂತಹ ಘಟನೆ ನಡೆದಲ್ಲಿ ಐಆರ್​ಬಿಯ ಮಾಡರ್ನ್ ರೋಡ್ ಮೇಕರ್ಸ್ ಕಂಪನಿಯನ್ನೇ ಹೊಣೆಗಾರನನ್ನಾಗಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

ಅಪಾಯ ಇನ್ನೂ ಇದೆ: ತಂಡ್ರಕುಳಿಯಲ್ಲಿ ಮತ್ತೆ ಗುಡ್ಡ ಕುಸಿಯದಂತೆ ಧರೆಗೆ ಕಬ್ಬಿಣದ ರಾಡ್, ಬಲೆ, ಪೈಪ್​ಗಳನ್ನು ಹಾಕಿ ಕಾಂಕ್ರೀಟ್ ಆಚ್ಚಾದನೆ ಮಾಡಲಾಗಿದೆ. ಆದರೆ, ಧರೆಯ ಕೆಳಗಡೆ ನಿರಂತರವಾಗಿ ಬಂಡೆಗಳನ್ನು ಸ್ಪೋಟಿಸಿ ಭೂಮಿಯಲ್ಲಿ ಭಾರಿ ಕಂಪನ ಸೃಷ್ಟಿಸುತ್ತಿರುವುದರಿಂದ ಮಣ್ಣಿನ ಗುಡ್ಡಕ್ಕೆ ಹಾಕಿದ ಕಾಂಕ್ರೀಟ್ ಮಳೆಗಾಲದಲ್ಲಿ ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಉದ್ಬವಿಸಿದೆ.

ತಂಡ್ರಕುಳಿಯ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಹೆದ್ದಾರಿ ಕಾಮಗಾರಿಯಲ್ಲಿ ಮಳೆಗಾಲದ ಮುಂಜಾಗ್ರತೆಗಾಗಿ ಈಗಾಗಲೇ ಎಲ್ಲೆಡೆ ಕ್ರಮ ಕೈಗೊಳ್ಳಲಾಗಿದೆ. ಗುಡ್ಡ ಕುಸಿತದ ಅಪಾಯವನ್ನು ಗುರುತಿಸಲಾದ ಎಲ್ಲೆಡೆಗಳಲ್ಲಿ ಸೂಕ್ತ ಸುರಕ್ಷತಾ ಕಾಮಗಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಮತ್ತಿತರ ವಿಚಾರಗಳ ಬಗ್ಗೆ ರಾ.ಹೆ. ಪ್ರಾಧಿಕಾರದವರನ್ನು ಕರೆಸಿ ಸಮಾಲೋಚಿಸುತ್ತೇನೆ. | ದಿನಕರ ಶೆಟ್ಟಿ ಶಾಸಕ

ಚತುಷ್ಪಥ ಕಾಮಗಾರಿಗೆ ನಮ್ಮ ಬದುಕನ್ನೇ ಕೊಟ್ಟಿದ್ದೇವೆ. ಎಷ್ಟೇ ತೊಂದರೆಯಾದರೂ ಸಹಿಸಿಕೊಂಡಿದ್ದೇವೆ. ಮಾಹಿತಿ ನೀಡದೇ ಬಂಡೆ ಸ್ಪೋಟಿಸುತ್ತಾರೆ. ಇದರಿಂದ ನಮಗಾದ ಯಾವ ಹಾನಿಗೂ ಪರಿಹಾರ ಕೊಟ್ಟಿಲ್ಲ. ಎಲ್ಲರೂ ತಂಡ್ರಕುಳಿಯನ್ನು ಬದಿಗೊತ್ತಿದ್ದಾರೆ. | ಗಣಪಯ್ಯ ನಾಗು ಅಂಬಿಗ ತಂಡ್ರಕುಳಿ

Leave a Reply

Your email address will not be published. Required fields are marked *