ಚಂಬೆಬೆಳ್ಳೂರಿಗೆ ಬಂದ ಶಿವ-ಪಾರ್ವತಿ, ಋಷಿ ಮುನಿಗಳು!

ವಿರಾಜಪೇಟೆ: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ವೀಕ್ಷಣೆಗೆಂದು ಚಂಬೆಬೆಳ್ಳೂರಿಗೆ ಆಗಮಿಸಿದ ನಾಗಸಾಧುಗಳು… ಗ್ರಾಮಕ್ಕೆ ಬಂದ ಹುಲಿಗೆ ಗುಂಡು… ಧರೆಗಳಿದ ಶಿವ-ಪಾರ್ವತಿ ಮತ್ತು ಋಷಿಮುನಿಗಳು… ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಲಲನೆಯರು… ದೇವರಿಗೆ ಇಷ್ಟವಾದ ಹುಲ್ಲುಭೂತ… ಮೈಗೆ ಕೆಸರು ಮೆತ್ತಿಕೊಂಡ ಗ್ರಾಮಸ್ಥರು…!

ಇಂತಹ ದೃಶ್ಯಗಳು ಕಂಡುಬಂದಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಂಚೆಬೆಳ್ಳೂರು ಬೇಡು ಹಬ್ಬದಲ್ಲಿ.
‘ಚಂಬೆಬೆಳ್ಳೂರ್ ಬೋಡ್ ನಮ್ಮೆ’ ಎಂದೇ ಹೆಸರಾಗಿರುವ ಹಬ್ಬ ಪ್ರತಿವರ್ಷ ಏಪ್ರಿಲ್ ತಿಂಗಳ 3ನೇ ವಾರದಲ್ಲಿ ನಡೆಯುತ್ತದೆ. ಈ ಹಬ್ಬ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಪಶ್ಚಿಮಾಭಿಮುಖವಾಗಿ ಇರುವ ದೇವಾಲಯ ‘ಪಡ್‌ಞಂರ್ ಮೊಗಬೆಚ್ಚ ಕಾಳಿ’ ಎಂದೇ ಪ್ರಸಿದ್ಧಿಯಾಗಿದೆ. ಈ ಬೇಡು ಹಬ್ಬಕ್ಕೆ ಕೊಡವ ಕ್ಯಾಲೆಂಡರ್ ಪ್ರಕಾರ ಎಡ್‌ಮ್ಯಾರ್ 1 ಏಪ್ರಿಲ್ 13 ರಂದು ಕಟ್ಟು ಬಿದ್ದು, 21ರಂದು ಪಟ್ಟಣಿಯ ನಂತರ ದೇವರ ಕುದುರೆ, 22ರಂದು ರಾತ್ರಿ ದೇವರ ವೇಷ ಧರಿಸುವ ಮೂಲಕ ಚಾಲನೆ ನೀಡಲಾಯಿತು.

ಪ್ರತಿ ಮನೆಯ ತಲಾ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ವಿವಿಧ ರೀತಿಯ ವೇಷ ಧರಿಸಿ, 22 ರಂದು ರಾತ್ರಿಯಿಡೀ ಗ್ರಾಮದ ಮನೆ ಮನೆಗೆ ತೆರಳಿ ಹಿರಿಯರ ಆಶೀರ್ವಾದ ಪಡೆದರು. ಈ ವೇಳೆ ಗಳಿಸಿದ ಹಣವನ್ನು ಮರುದಿನ (23ರಂದು) ಭದ್ರಕಾಳಿ ದೇವಾಲಯಕ್ಕೆ ತೆರಳಿ ಹರಕೆ ಒಪ್ಪಿಸಿದರು.

ಹಿನ್ನೆಲೆ: ಚಂಬೆಬೆಳ್ಳೂರು ಗ್ರಾಮದಲ್ಲಿ ಈ ಹಿಂದೆ 101 ಕುಟುಂಬಗಳು ವಾಸವಾಗಿದ್ದವು. ಆಗ ಈ ಗ್ರಾಮ ಜಿಲ್ಲೆಯಲ್ಲೇ ಅತಿ ದೊಡ್ಡ ಊರೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಾಲ ಉರುಳಿದಂತೆ 30ಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಪ್ರತಿ ಮನೆಗೆ 20 ರಿಂದ 30 ಸಾವಿರ ರೂ. ಖರ್ಚು ತಗಲುತ್ತದೆ. ಈ ಬೇಡು ಹಬ್ಬದಲ್ಲಿ ದೇವರಿಗೆ ಇಷ್ಟವಾದ ದೋಳ್‌ಪಾಟ್, ಹುಲಿವೇಷ, ಹುಲ್ಲುಭೂತ, ಕೆಸರುವೇಷ(ಬಂಡ್‌ಕಳಿ), ಕರಡಿವೇಷ ಧರಿಸಲಾಗುತ್ತದೆ. ಅಲ್ಲದೆ, ಪ್ರಸ್ತುತತೆಗೆ ಅನುಗುಣವಾಗಿ ವಿವಿಧ ವೇಷಭೂಷಣ ಹಾಕಲಾಗುತ್ತದೆ.

ದೇವರ ಕಟ್ಟು ಬಿದ್ದ ನಂತರ ಊರಿನಲ್ಲಿ ಯಾವುದೇ ಪ್ರಾಣಿವಧೆ, ಹಸಿಮರ ಕಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು ನಿಷಿದ್ಧ. ನಂತರ ಈ ನಿಷೇಧ ಮುರಿಯುವ ಸಲುವಾಗಿ ವೇಷಧಾರಿಗಳು ಸೇರಿದಂತೆ ಊರಿನ ಜನರು ದೇವಸ್ಥಾನ ಪ್ರವೇಶಿಸುವಾಗ ಹಸಿಮರ ಕಡಿಯುವ ಪ್ರತೀಕವಾಗಿ ಹಸಿ ಸೊಪ್ಪನ್ನು ದೇವರಿಗೆ ಅರ್ಪಿಸಿದರು.

Leave a Reply

Your email address will not be published. Required fields are marked *