Friday, 16th November 2018  

Vijayavani

Breaking News

ಚಂದನವನ ತಾರೆಯರ ಚೌತಿ ಸಡಗರ

Thursday, 13.09.2018, 2:05 AM       No Comments

ಬೇರೆಲ್ಲ ಹಬ್ಬಕ್ಕಿಂತಲೂ ಗಣೇಶ ಚತುರ್ಥಿ ತುಂಬ ಭಿನ್ನ. ಅವರವರ ಮನೆಯಲ್ಲಿ ಪೂಜೆ, ಅಡುಗೆ, ನೈವೇದ್ಯ ಮಾಡಿ ಸಂಭ್ರಮಿಸುವುದರ ಜತೆಯಲ್ಲೇ ಗಲ್ಲಿ ಗಣಪನನ್ನು ಕಣ್ತುಂಬಿಕೊಳ್ಳುವುದು ಈ ಹಬ್ಬದ ವಿಶೇಷ. ಬಗೆಬಗೆಯ ಗಾತ್ರದ ವಿನಾಯಕನ ವಿಗ್ರಹಗಳೇ ಎಲ್ಲರ ಮನ ಸೆಳೆಯುತ್ತವೆ. ಸೆಲೆಬ್ರಿಟಿಗಳಿಗೂ ಇದು ಅಚ್ಚುಮೆಚ್ಚಿನ ಹಬ್ಬ. ಈಗ ಶೂಟಿಂಗ್ ಸಲುವಾಗಿ ಕೆಲವು ತಾರೆಯರು ಸಂಭ್ರಮವನ್ನು ಮಿಸ್ ಮಾಡಿಕೊಂಡಿದ್ದರೂ ಅವರ ನೆನಪಿನ ಬುತ್ತಿಯಲ್ಲಿ ಗಣೇಶೋತ್ಸವ ಕುರಿತ ಹಲವು ಸಂಗತಿಗಳು ಹಸಿರಾಗಿವೆ. ಅದೆಲ್ಲದರ ಕುರಿತು ‘ನಮಸ್ತೆ ಬೆಂಗಳೂರು’ ಜತೆ ಮಾತನಾಡಿದ್ದಾರೆ ಸ್ಯಾಂಡಲ್​ವುಡ್ ನಟಿಯರು.

ಮದುವೆ ಬಳಿಕ ಮೊದಲ ಚತುರ್ಥಿ

ಕಳೆದ ವರ್ಷ ಇದೇ ಹೊತ್ತಿಗೆ ನನ್ನ ಮತ್ತು ಪವನ್ ಒಡೆಯರ್ ಮದುವೆ ಮಾತುಕತೆ ನಡೆಯುತ್ತಿತ್ತು. ಈ ವರ್ಷದ ಗಣೇಶ ಚತುರ್ಥಿ ವೇಳೆಗೆ ಮದುವೆ ಮುಗಿದಿದೆ. ಹೀಗಾಗಿ ಮದುವೆಯಾದ ನಂತರ ನಮಗೆ ಇದು ಮೊದಲ ಗಣೇಶ ಚತುರ್ಥಿ. ಆದ್ದರಿಂದ ಈ ಹಬ್ಬಕ್ಕೆ ಖುಷಿ, ಸಂಭ್ರಮ ಡಬಲ್ ಆಗಿದೆ. ಸ್ವರ್ಣಗೌರಿ ವ್ರತದ ದಿನ ಉಪವಾಸ ಮಾಡುತ್ತೇವೆ. ಪವನ್ ಮನೆಯಲ್ಲಿ ಹಬ್ಬ ಹೇಗಿರುತ್ತೆ ಅನ್ನುವುದು ನನಗೆ ತಿಳಿದಿಲ್ಲ. ಆದರೆ ನನ್ನ ತವರುಮನೆಯಲ್ಲಿ ಮಾಡುವ ಉತ್ತರಕರ್ನಾಟಕದ ವಿಶೇಷ ತಿನಿಸುಗಳಾದ ಒಬ್ಬಟ್ಟು, ಮೋದಕವನ್ನು ಗಂಡನ ಮನೆಯಲ್ಲಿ ಮಾಡಲಿದ್ದೇನೆ. ಮಣ್ಣಿನ ಗಣಪತಿ ಕೂರಿಸಿ, ಬೆಂಗಳೂರಿನಲ್ಲಿಯೇ ಹಬ್ಬ ಆಚರಣೆ ಮಾಡುತ್ತಿದ್ದೇವೆ. ತವರುಮನೆಯಲ್ಲಿ ಬೆಳಗ್ಗೆ ಗಣಪತಿ ತಂದು ಪೂಜಿಸಿ ಸಂಜೆಯೇ ವಿಸರ್ಜನೆ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ನೀರು ಕಡಿಮೆಯಿದ್ದಾಗ ನಾವೇ ಒಂದುಕಡೆ ನೀರು ಸಂಗ್ರಹಿಸಿ ಎಲ್ಲರ ಮನೆಯ ಗಣಪತಿಯನ್ನು ತಂದು ಅಲ್ಲಿಯೇ ವಿಸರ್ಜನೆ ಮಾಡಲಾಗುತ್ತಿತ್ತು. ಇದರಿಂದಾಗಿ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಎಷ್ಟೇ ಕೆಲಸವಿದ್ದರೂ ಈ ವರ್ಷದ ಗಣೇಶ ಚತುರ್ಥಿಯನ್ನು ಮಿಸ್ ಮಾಡಿಕೊಳ್ಳಲೇ ಬಾರದೆಂದು ಮೊದಲೇ ನಿರ್ಧರಿಸಿದ್ದೆ. ಈ ವರ್ಷ ಹಬ್ಬಕ್ಕೆ ನಾನು ತವರುಮನೆಯಲ್ಲಿಲ್ಲ. ಹೀಗಾಗಿ ಹಬ್ಬ ಮುಗಿದ ಮೇಲೆ ಅಲ್ಲಿ ಹೋಗಿ ಬರಬೇಕು. ಅಲ್ಲಿಯೂ ಕೆಲವು ಶಾಸ್ತ್ರಗಳಿವೆ.

| ಅಪೇಕ್ಷಾ ಪುರೋಹಿತ್


ಮುಂಬೈ ಗಣಪನ ನೆನಪು

ಮುಂಬೈನಲ್ಲಿ ಇದು ದೊಡ್ಡ ಹಬ್ಬ. ನಾನು ಅಲ್ಲಿದ್ದಾಗ ತುಂಬ ಎಂಜಾಯ್ ಮಾಡುತ್ತಿದ್ದೆ. ದೊಡ್ಡದಾಗಿ ಪೆಂಡಾಲ್ ಹಾಕುತ್ತಾರೆ. ಎಲ್ಲರ ಮನೆಯಲ್ಲೂ ಗಣಪತಿ ಕೂರಿಸುತ್ತಾರೆ. ವಿಶೇಷ ಎಂದರೆ, ವರ್ಷದಿಂದ ವರ್ಷಕ್ಕೆ ತರುವ ಗಣೇಶ ಮೂರ್ತಿಯ ಗಾತ್ರ ದೊಡ್ಡದಾಗಬೇಕು ಎಂಬುದು ನಿಯಮ. ಕಳೆದ ವರ್ಷದಷ್ಟೇ ಗಾತ್ರದ ಗಣಪನನ್ನು ಕೂರಿಸಿದರೂ ಪರವಾಗಿಲ್ಲ. ಆದರೆ ಯಾವುದೇ ಕಾರಣಕ್ಕೂ ಕಳೆದ ವರ್ಷಕ್ಕಿಂತ ಚಿಕ್ಕ ಮೂರ್ತಿಯನ್ನು ತರುವಂತಿಲ್ಲ. ಅದರ ಜತೆಗೆ ವಿಶೇಷ ಅಡುಗೆ ಮಾಡುತ್ತಾರೆ. ಹಲವು ಪೆಂಡಾಲ್​ಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಿದ್ದೆವು. ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಇನ್ನೂ ಭಿನ್ನವಾಗಿ ಈ ಹಬ್ಬ ಆಚರಿಸುತ್ತಾರೆ. ಎಲ್ಲ ಬಗೆಯ ಸಂಸ್ಕೃತಿ ಕೂಡ ನನಗಿಷ್ಟ. ಈ ವರ್ಷ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಲುವಾಗಿ ಹಬ್ಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

| ಶಾನ್ವಿ ಶ್ರೀವಾಸ್ತವ


ಒಗ್ಗಟ್ಟಿನ ಪಾಠ ಕಲಿಸುವ ಗಣೇಶ

ಮಂಗಳೂರಿನಲ್ಲಿ ತುಂಬ ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಆದರೂ ಎಲ್ಲರ ಮನೆಯಲ್ಲಿ ಗಣಪತಿ ಕೂರಿಸಲಾಗುವುದಿಲ್ಲ. ಕಾಳುಗಳ ಪಲ್ಯ, 5 ಬಗೆಯ ಭಕ್ಷ್ಯ, ಸಿಹಿ ತಿಂಡಿ ಮಾಡುತ್ತೇವೆ. ದೇವಸ್ಥಾನಕ್ಕೆ ಹೊಸ ಅಕ್ಕಿಯನ್ನು ತೆಗೆದುಕೊಂಡು ಹೋಗಿ, ಪೂಜೆ ಮಾಡಿ ಅದರ ಅನ್ನವನ್ನೇ ಊಟ ಮಾಡುತ್ತೇವೆ. ದೇವಸ್ಥಾನದಲ್ಲಿ ಪೈರು, ಕುರೆಳ್ಳು ನೀಡುತ್ತಾರೆ. ಚಿಕ್ಕವರಿದ್ದಾಗ ನಮ್ಮ ಏರಿಯಾದಲ್ಲಿ ಎಲ್ಲರೂ ಸೇರಿ ಗಣಪತಿ ಕೂರಿಸುತ್ತಿದ್ದೆವು. 21 ಗಣಪತಿ ನೋಡುವ ಪದ್ಧತಿ ಇತ್ತು. ಎಲ್ಲೆಲ್ಲೋ ಹೋಗಿ ಗಣೇಶ ಮೂರ್ತಿ ನೋಡಿ ಅಕ್ಷತೆ ಹಾಕಿ ಬರುತ್ತಿದ್ದೆವು. ಇತ್ತೀಚಿನ ಮಕ್ಕಳಲ್ಲಿ ಗಣಪತಿ ನೋಡುವುದು, ಗಣಪತಿ ಕೂರಿಸುವ ಪದ್ಧತಿ, ಆಚರಣೆ ಕಡಿಮೆ ಆಗುತ್ತ ಬಂದಿದೆ. ಎಲ್ಲರೂ ಸೇರಿ ಗಣಪತಿ ಹಬ್ಬ ಮಾಡಿದಾಗ ಸಿಗುವ ಖುಷಿ, ಸಂಭ್ರಮವೇ ಬೇರೆ. ಇದರಿಂದಾಗಿ ಮಕ್ಕಳಲ್ಲಿ ಒಗ್ಗಟ್ಟು ಬೆಳೆಯುವುದು. ಮಕ್ಕಳು ಅವರಾಗಿಯೇ ಗಣಪತಿ ಕೂರಿಸುವುದು, ಪೂಜಿಸುವುದನ್ನು ರೂಢಿಸಿಕೊಂಡರೆ ಅವರಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ತಿಳಿಯುತ್ತವೆ. ಜತೆ ಜತೆಯಲ್ಲಿ ನಮ್ಮ ಪರಂಪರೆಯ ಪರಿಚಯ ಅವರಿಗಾಗುತ್ತದೆ.

| ಅನುಶ್ರೀ


ಮೂರ್ತಿ ನೋಡುವ ಸಂಭ್ರಮ

ಗೌರಿ-ಗಣೇಶ ಹಬ್ಬ ಎಂದರೆ ನನಗೆ ತುಂಬ ಇಷ್ಟ. ನಮ್ಮ ಮನೆಗಿಂತ ನಮ್ಮ ಚಿಕ್ಕಪ್ಪನ ಮನೆಯಲ್ಲಿ ಹಬ್ಬದ ಸಡಗರ ಜಾಸ್ತಿ ಇರುತ್ತದೆ. ಅವರು ಕಾರ್ಕಳದಲ್ಲಿ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದರು. ಉಡುಪಿ ಜಿಲ್ಲೆಯಲ್ಲೇ ಅವರು ಬಹಳ ಪ್ರಸಿದ್ಧರಾಗಿದ್ದರು. ದೊಡ್ಡ ದೊಡ್ಡ ಗಣಪತಿ ಮೂರ್ತಿಗಳನ್ನು ಮಾಡುತ್ತಿದ್ದರು. ನಾವೆಲ್ಲ ಚಿಕ್ಕವರಿದ್ದಾಗ ಅವರು ಮೂರ್ತಿಗಳನ್ನು ಮಾಡುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆವು. ಗಣಪತಿ ಹಬ್ಬ ಎಂದ ಕೂಡಲೇ ಇದೆಲ್ಲ ನನಗೆ ನೆನಪಾಗುತ್ತಿದೆ.

| ಮಾನ್ವಿತಾ ಹರೀಶ್


ಹಬ್ಬಕ್ಕೆ ಅಡುಗೆಯೇ ಹೈಲೈಟ್

ಮನೆಯಲ್ಲಿ ನಾವು ಇರೋದು ಮೂರು ಜನ. ಅಪ್ಪ, ಅಮ್ಮ ಮತ್ತು ನಾನು.ಯಾವುದೇ ಹಬ್ಬ ಬಂದರೂ ಅದ್ದೂರಿಯಾಗಿಯೇ ನಮ್ಮ ಮನೆಯಲ್ಲಿ ಆಚರಿಸುತ್ತೇವೆ. ಗಣೇಶ ಹಬ್ಬ ಬಂದರಂತೂ ಸಂಭ್ರಮ ಡಬಲ್ ಆಗುತ್ತದೆ. ಯಾಕೆಂದರೆ ಆಚರಣೆಯ ಪೂರ್ತಿ ಉಸ್ತುವಾರಿ ನನ್ನದೇ. ಒಂದಲ್ಲ ಎರಡಲ್ಲ ಬರೋಬ್ಬರಿ 10ಕ್ಕೂ ಹೆಚ್ಚು ಬಗೆಬಗೆಯ ಖಾದ್ಯಗಳನ್ನು ನಾನೇ ಮಾಡುತ್ತೇನೆ. ಮಾವಿನಕಾಯಿ ಚಿತ್ರಾನ್ನ, ಕಡುಬು, ಪಾಯಸ, ಬಜ್ಜಿ, ನಾಲ್ಕೈದು ಥರದ ಕೋಸಂಬರಿ, ಪಲ್ಯ, ಮೊಸರನ್ನ ಹೀಗೆ ದೊಡ್ಡ ಪಟ್ಟಿಯೇ ಇರುತ್ತದೆ. ನಾನು ಚಿಕ್ಕವಳಿದ್ದಾಗ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಹಠ ಹಿಡಿದು ಪುಟಾಣಿ ಗಣೇಶ ಮೂರ್ತಿ ತರಿಸಿಕೊಂಡಿದ್ದೆ. ನನ್ನ ಗೊಂಬೆಗಳೊಂದಿಗೆ ಇಟ್ಟುಕೊಂಡು ಪೂಜೆ ಮಾಡುತ್ತಿದ್ದೆ. ಆಮೇಲೆ ಗೊತ್ತಾಯಿತು, ಒಂದು ಮನೆಯಲ್ಲಿ ಒಂದೇ ಗಣೇಶ ಇಡಬೇಕು ಎಂಬುದು. ಅಂದಿನಿಂದ ಮತ್ಯಾವತ್ತೂ ಪ್ರತ್ಯೇಕ ಮೂರ್ತಿಗೆ ಪೂಜೆ ಮಾಡಿಲ್ಲ.

|ಸುಕೃತಾ ದೇಶಪಾಂಡೆ


ಗಲ್ಲಿ ಗಣೇಶನನ್ನು ಎಣಿಸುವುದೇ ದೊಡ್ಡ ಕೆಲಸ

ಗಣೇಶ ಹಬ್ಬ ಅಂದರೆ ನನಗೆ ಮೊದಲು ನೆನಪಾಗುವುದು ಗಲ್ಲಿ ಗಣೇಶ. ಎಸ್​ಎಸ್​ಎಲ್​ಸಿ ಓದುತ್ತಿರುವಾಗ ನಾನು ಮತ್ತು ನಮ್ಮ ಸ್ನೇಹಿತೆಯರ ಗ್ಯಾಂಗ್ ಒಂದೆಡೆ ಸೇರಿ ಗಲ್ಲಿ ಗಣೇಶನನ್ನು ನೋಡಲು ಹೋಗುತ್ತಿದ್ದೆವು. ಬರೀ ಗಣೇಶನನ್ನು ನೋಡುವುದಷ್ಟೇ ಅಲ್ಲ. ಎಲ್ಲ ಮುಗಿದ ಬಳಿಕ ಎಷ್ಟು ಗಣಪತಿಯನ್ನು ನೋಡಿದೆವು ಎಂಬುದನ್ನು ಲೆಕ್ಕ ಹಾಕುತ್ತಿದ್ದೆವು. ನಮ್ಮ ಮನೆಯಲ್ಲಿ ಅತೀ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿ. ಬೆಳಗ್ಗೆ 4 ಗಂಟೆಯಿಂದಲೇ ಪೂಜೆ ಶುರುವಾದರೆ, ಎರಡು ಗಂಟೆ ಕಾಲ ನಡೆಯುತ್ತದೆ. ನೈವೇದ್ಯಕ್ಕಾಗಿ ಅಡುಗೆಯೂ ಸಿದ್ಧಗೊಂಡಿರುತ್ತದೆ. ಅಪ್ಪ ಬೇರೆ ಮನೆಗಳಿಗೂ ಪೂಜೆಗೆ ಹೋಗಬೇಕಾಗುತ್ತದೆ. ಹಾಗಾಗಿ ಮೊದಲು ನಮ್ಮ ಮನೆ ಗಣೇಶನಿಗೆ ಪೂಜೆ ಮುಗಿಸಿರಬೇಕು. ಅಡುಗೆ ಉಸ್ತುವಾರಿ ಅಮ್ಮ ನೋಡಿಕೊಂಡರೆ, ಅವರಿಗೆ ಸಹಾಯಕಳಾಗಿ ನಾನಿರುತ್ತೇನೆ.

| ಸ್ವಾತಿ ಶರ್ಮಾ

Leave a Reply

Your email address will not be published. Required fields are marked *

Back To Top