ಘಟ್ಟದ ಮೇಲಿನ ತಾಲೂಕುಗಳಲ್ಲಿ ಗಾಳಿ-ಮಳೆ; ಸಿಡಿಲು ಬಡಿದು ರೈತ ಸಾವು

ಹಳಿಯಾಳ/ದಾಂಡೇಲಿ/ಶಿರಸಿ/ಮುಂಡಗೋಡ: ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಶನಿವಾರ ಸಂಜೆ ಭರ್ಜರಿ ಗಾಳಿಯೊಂದಿಗೆ ಮಳೆಯಾಗಿದೆ.

ಹಳಿಯಾಳ ತಾಲೂಕಿನ ನೀರಲಗಾ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನರಸಪ್ಪ ಜೈವಂತ ಕದಂ (55) ಸಾವಿಗೀಡಾಗಿದ್ದಾರೆ. ಅಲ್ಲದೆ, ಚೇತನಕಟ್ಟಾ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವಿಗೀಡಾಗಿದೆ. ಅಡಕೆಹೊಸೂರು ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಆಶ್ರಯ ಮನೆಗಳ ಛಾವಣಿ ಗಾಳಿಗೆ ಹಾರಿ ಹಾನಿ ಸಂಭವಿಸಿದೆ. ತೇರಗಾಂವ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ಸಿದ್ಧಪಡಿಸಲಾದ ಟೆಂಟ್ ಗಾಳಿಗೆ ಹಾರಿ ಹಾನಿ ಸಂಭವಿಸಿದೆ. ಪಟ್ಟಣದಲ್ಲಿ ಹಲವಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಶಿರಸಿ ತಾಲೂಕಿನಲ್ಲಿ ಸಂಜೆ 6.30ರ ವೇಳೆ ಭರ್ಜರಿ ಗಾಳಿ ಬೀಸಿದ ಕಾರಣ ಹಲವೆಡೆ ರಸ್ತೆಯ ಮೇಲೆ ಮರ ಬಿದ್ದು ಸಂಚಾರ ವ್ಯತ್ಯಯಗೊಂಡಿದೆ. ದಾಂಡೇಲಿಯಲ್ಲಿ ಗಾಳಿಯ ಕಾರಣದಿಂದ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಹಾನಿ ಸಂಭವಿಸಿದೆ. ಪಟೇಲ ಸರ್ಕಲ್ ಹತ್ತಿರ ನಿಂತ ಬೊಲೆರೊ ವಾಹನದ ಮೇಲೆ ಮರವೊಂದು ಬಿದ್ದಿದೆ.

ಕೋಳಿ ಫಾಮರ್್​ಗೆ ಹಾನಿ :ಮುಂಡಗೋಡ ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಹಜರತ್ ಅಲಿ ಎಂಬುವರಿಗೆ ಸೇರಿದ ಕೋಳಿ ಫಾಮ್ರ್ ಗಾಳಿ-ಮಳೆಗೆ ಶೆಡ್ ಕುಸಿದು ಬಿದ್ದು ಸುಮಾರು 5000 ಕೋಳಿಗಳು ಮೃತಪಟ್ಟು ಲಕ್ಷಾಂತರ ರೂ. ಹಾನಿಯಾಗಿದೆ. ‘ಸುಮಾರು ಮೂರು ವರ್ಷಗಳಿಂದ ಕಷ್ಟಪಟ್ಟು ಕೋಳಿಗಳ ಸಾಕಾಣಿಕೆ ಮಾಡಿದ್ದೆ. ಇದಕ್ಕಾಗಿ ಬ್ಯಾಂಕ್​ಗಳಿಂದ ಹಾಗೂ ಇನ್ನಿತರ ಮೂಲಗಳಿಂದ ಸಾಲ ಮಾಡಿದ್ದೆ’ ಎಂದು ಹಜರತ್ ಅಲಿ ಅಳಲನ್ನು ತೋಡಿಕೊಂಡರು. ಇದೇ ಗ್ರಾಮದ ರಾಮಣ್ಣ ಲಾಲಪ್ಪ ಲಮಾಣಿ ಎಂಬ ರೈತನ 4 ಎಕರೆ ಬೆಳೆದ ಮಾವು ಅಡಕೆ ಹಾಗೂ ಬಾಳೆ ಸಂಪೂರ್ಣ ನೆಲಕಚ್ಚಿದೆ. ಗ್ರಾಮದ ಉಮವ್ವಾ ಲಮಾಣಿ, ಪೂರಪ್ಪ ಲಮಾಣಿ, ತುಕ್ಕಪ್ಪಾ ಲಮಾಣಿ ಇವರ ಮನೆಗಳು ಸೇರಿದ ಸುಮಾರು 50ಕ್ಕೂ ಅಧಿಕ ಮನೆಗಳ ಮೇಲ್ಛಾವಣಿಗಳ ಹೆಂಚು, ತಗಡಿನ ಶೀಟುಗಳು ಹಾರಿ ಹೋಗಿವೆ. ಹುನಗುಂದ ಗ್ರಾಮದ ಗುರುಸಿದ್ದಯ್ಯ ಕಂಬಿ ಎಂಬುವವರ ಹೋರಿ ಸಿಡಿಲಿಗೆ ಬಲಿಯಾಗಿದೆ. ಫಕೀರಪ್ಪ ಬಿಸನಳ್ಳಿ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ತಾಲೂಕಿನಲ್ಲಿ 32ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

Leave a Reply

Your email address will not be published. Required fields are marked *