ಘಟಪ್ರಭಾ: 4.2 ಕೋಟಿ ವೆಚ್ಚದಲ್ಲಿ ಘಟಪ್ರಭಾ ರೈಲ್ವೆ ನಿಲ್ದಾಣ ಅಭಿವೃದ್ಧಿ

ಘಟಪ್ರಭಾ: 80 ವರ್ಷಗಳ ಹಳೆಯ ಹಾಗೂ ಉತ್ತರ ಕರ್ನಾಟಕ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಘಟಪ್ರಭಾ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ 4.2 ಕೋಟಿ ವೆಚ್ಚದ ಕಾಮಗಾರಿಗೆ ಲೋಕಸಭೆ ಸದಸ್ಯ ಸುರೇಶ ಅಂಗಡಿ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ಪಾದಚಾರಿ ಮೇಲ್ಸೇತುವೆ ಹಾಗೂ ಹೊಸ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದರು, ಮಹತ್ವಾಕಾಂಕ್ಷಿ ಲೋಂಡಾ-ಮಿರಜ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, 2021 ರ ವೇಳೆಗೆ ಪೂರ್ಣಗೊಳ್ಳಲಿದೆ. ಘಟಪ್ರಭಾ ನಿಲ್ದಾಣ ಸ್ವಚ್ಛತೆಯಲ್ಲಿ ತುಂಬ ಹಿಂದುಳಿದಿದೆ. ಪಟ್ಟಣ ಪಂಚಾಯಿತಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ರೈಲ್ವೆ ನಿಲ್ದಾಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಯೋಜನೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಒಳಮಾರ್ಗದ ರಸ್ತೆ ಹಾಗೂ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು. ತರಕಾರಿ ಸಾಗಣೆ ಹಾಗೂ ದಾಸ್ತಾನು ಕೈಗೊಳ್ಳಲು ಕೋಲ್ಡ್ ಸ್ಟೋರೇಜ್ ಮತ್ತು ಗೋಕಾಕ ರೋಡಿನಲ್ಲಿ ಸಕ್ಕರೆ ದಾಸ್ತಾನು ಮಾಡಲು ಒಂದು ಗುಡ್‌ಶೆಡ್ ನಿರ್ಮಾಣ ಮಾಡಲಾಗುವುದು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಕಾರ್ಮಿಕರು ಮತ್ತು ಹಮಾಲರಿಗೆ ಹೆಚ್ಚಿನ ಲಾಭ ದೊರಕುವಂತೆ ಮಾಡುತ್ತೇವೆ ಮತ್ತು ನಿಲ್ದಾಣದಲ್ಲಿ ಒಂದು ಉತ್ತಮ ಕ್ಯಾಂಟೀನ್ ಮಾಡುತ್ತೇವೆ ಎಂದು ಹೇಳಿದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಮಾತನಾಡಿ, ಈ ನಿಲ್ದಾಣವು ಎನ್.ಎಸ್.ಜಿ 5ರ ವರ್ಗಕ್ಕೆ ಸೇರಿದೆ. ಪ್ರತಿನಿತ್ಯ 4.5 ಸಾವಿರ ಜನರು ನಿಲ್ದಾಣವನ್ನು ಒಳಸುತ್ತಾರೆ ಹಾಗೂ ಪ್ರತಿನಿತ್ಯ 2ಲಕ್ಷಕ್ಕೂ ಹೆಚ್ಚು ಆದಾಯ ಸಂಗ್ರಹವಾಗುತ್ತದೆ. ಘಟಪ್ರಭಾ ಸುತ್ತ-ಮುತ್ತ ಫಲವತ್ತಾದ ಪ್ರದೇಶ ಇರುವ ಕಾರಣ ಆಹಾರ ಧಾನ್ಯ ಹಾಗೂ ವ್ಯವಸಾಯೋತ್ಪನ್ನಗಳ ಮಾರುಕಟ್ಟೆಗೂ ಅನುಕೂಲವಾಗಿದೆ. ಉತ್ತರ ಕರ್ನಾಟಕವಲ್ಲದೆ ಮಹಾರಾಷ್ಟ್ರ,ಗೋವಾ ಹಾಗೂ ಇನ್ನಿತರ ರಾಜ್ಯಗಳಿಗೂ ಸಗಟು ತರಕಾರಿ ಮತ್ತು ಆಹಾರ ಧಾನ್ಯಗಳು ಸಾಗಣೆಯಾಗುತ್ತವೆ.

ಹೊಸ ನಿಲ್ದಾಣದಿಂದ ಕಾರು, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ಇರುವ ಸರ್ಕ್ಯುಲೇಟಿಂಗ್ ವ್ಯವಸ್ಥೆ, ಎರಡು ಆರಕ್ಷಣೆರಹಿತ ಟಿಕೆಟ್ ಕೌಂಟರ್, ವಿಚಾರಣಾ ಕೌಂಟರ್, ಹವಾನಿಯಂತ್ರಣ ನಿರೀಕ್ಷಣೆ ಕೊಠಡಿ, ಮಹಿಳೆಯರ ಮತ್ತು ಪುರುಷರ ನಿಯಂತ್ರಣ ಕೊಠಡಿ, ವಿ.ಐ.ಪಿ.ಲಾಂಜ್, ವಿಶ್ರಾಂತಿ ಕೊಠಡಿಗಳು, ಫುಡ್ ಪ್ಲಾಜಾ ಹಾಗೂ 540 ಉದ್ದದ ಉನ್ನತ ಎತ್ತರದ 2ನೇ ಪ್ಲಾಟ್ ಫಾರಂ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಹುಬ್ಬಳಿ ರೈಲ್ವೆ ವಿಭಾಗದ ವ್ಯವಸ್ಥಾಪಕ ರಾಜೇಶ್ ಮೋಹನ , ಮುಖ್ಯ ಇಂಜಿನೀಯರಾದ ಪ್ರೇಮ ನಾರಾಯಣ ಹಾಗೂ ಉಪಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ಸಾರ್ವಜನಿಕ ಅಧಿಕಾರಿ ಇ.ವಿಜಯ, ಅಶೋಕ ಪೂಜಾರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುಜಾತ ಪೂಜೇರಿ, ತಾ.ಪ.ಅಧ್ಯಕ್ಷೆ ಸುನಂದಾ ಕರದೇಸಾಯಿ ಹಾಜರಿದ್ದರು.

ಮಾಜಿ ಜಿ.ಪಂ ಅಧ್ಯಕ್ಷ ಈರಣ್ಣ ಕಡಾಡಿ, ಸುರೇಶ ಪಾಟೀಲ, ಸುರೇಶ ಕಾಡದವರ, ರಾಮಣ್ಣ ಹುಕ್ಕೇರಿ,. ಲಕ್ಷ್ಮಣ ತಪಸಿ, ಪ್ರವೀಣ ಚುನಮುರಿ, ಅಪ್ಪಯಪ್ಪಾ ಬಡಕುಂದ್ರಿ, ಭೀಮಪ್ಪಾ ಅಟ್ಟಿಮಿಟ್ಟಿ, ರಾಮಣ್ಣಾ ಹುಕ್ಕೇರಿ, ರಾಜು ಕತ್ತಿ, ಅರವಿಂದ ಬಡಕುಂದ್ರಿ, ಚಿದಾನಂದ ದೇಮಶೆಟ್ಟಿ, ಮಾರುತಿ ವಿಜಯನಗರ, ಉಮೇಶ ನಿರ್ವಾಣಿ, ಈರುಪಾಕ್ಷಿ ಯಲಿಗಾರ, ನಾಗಲಿಂಗ ಪೋತದಾರ, ಪ್ರಮೋದ ಜೋಶಿ ಶೇಖರ ರಜಪೂತ ಹಾಗೂ ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ವಿವಿಧ ಸಂಘಟನೆಗಳು ಹಾಗೂ ಶಾಲೆ ಮಕ್ಕಳು ಸಂಸದ ಸುರೇಶ ಅಂಗಡಿ ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು. ಅನೀಶ ಹೆಗಡೆ ನಿರೂಪಿಸಿ, ವಂದಿಸಿದರು.