ಗ್ಲೋಬಲ್ ಸಿರಿಜ್ ಟ್ರಕ್ ಮಾರುಕಟ್ಟೆಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರಯಾಣಿಕರ ಹಾಗೂ ಸರಕು ಸಾಗಣೆ ಮೋಟಾರು ವಾಹನಗಳ ತಯಾರಿಕೆಯಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಎಸ್ಎಂಎಲ್ ಇಸ್ರೋ (ಮೊದಲಿನ ಜ್ವರಾಜ್ ಮಜಡಾ) ಗ್ಲೋಬಲ್ ಸಿರಿಜ್ (ಜಾಗತಿಕ ಸರಣಿ)ನ ಹೈಟೆಕ್ ಸರಕು ಸಾಗಣೆ ಟ್ರಕ್ನ್ನು ಕಲಬುರಗಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಂಪನಿಯ ಕರ್ನಾಟಕ ಮಾರುಕಟ್ಟೆ ಮುಖ್ಯ ಅಧಿಕಾರಿ ಆರ್.ಭಾಸ್ಕರ್ ಹಾಗೂ ಪ್ರಮುಖ ವಿತರಕರಾದ ಶ್ರೀ ನಿಷ್ಠಿ ಅಟೋಮೋಟಿವ್ಸ್ ವ್ಯವಸ್ಥಾಪಕ ನಿರ್ದೇಶಕ ದೊಡ್ಡಪ್ಪ ನಿಷ್ಠಿ ಬಿಡುಗಡೆ ಮಾಡಿದರು.

ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಸಮಾರಂಭದಲ್ಲಿ ಎಸ್ಎಂಎಲ್ ಇಸ್ರೊ ಹೊಸ ಜಿಎಸ್ ವಿವಿಧ ಶ್ರೇಣಿಯ ಟ್ರಕ್ಗಳನ್ನು ಜನಸೇವೆಗೆ ಸಮರ್ಪಿಸಿ, ಮೊದಲ ಗ್ರಾಹಕರಿಗೆ ಬೀಗದ ಕೈಯನ್ನು ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಮಾರುಕಟ್ಟೆ ಅಧಿಕಾರಿ ಭಾಸ್ಕರ್, ಟ್ರಕ್ಗಳಲ್ಲಿಯೇ ಅತ್ಯಂತ ಐಷಾರಾಮಿ ಮತ್ತು ಚಾಲಕರಿಗೆ ಚಾಲನೆ ಕಾಲಕ್ಕೆ ಹಿತಾನುಭವ ನೀಡುವ ಏರ್ಕೂಲರ್ ಹೊಂದಿರುವ ಮತ್ತು ದುರಸ್ತಿ ತುರ್ತು ವೇಳೆಯಲ್ಲಿ ಚಾಲಕ, ಮಾಲೀಕ ಹಾಗೂ ಕಂಪನಿಗೆ ಏಕಕಾಲಕ್ಕೆ ಸಂದೇಶ ರವಾನಿಸುವ ಸಾರಥಿ ಆ್ಯಫ್ ಅಳವಡಿಸಿರುವ ಮೊದಲ ಟ್ರಕ್ ಇದಾಗಿದೆ ಎಂದು ತಿಳಿಸಿದರು.

3.50 ಟನ್ದಿಂದ 8.50 ಟನ್ ಸಾಮಥ್ರ್ಯದ ಸರಕು ಸಾಗಿಸುವ ಸಾಮಥ್ರ್ಯ ಹೊಂದಿದ ವಿವಿಧ ಮಾದರಿಯ ಟ್ರಕ್ಗಳು ಐದು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ 13 ಲಕ್ಷ ರೂ.ಗಳಿಂದ 18 ಲಕ್ಷ ರೂ.ಗಳವರೆಗೆ ಇದೆ. ಮೂರು ವರ್ಷ ವಾರಂಟಿ ಹೊಂದಿದ ಏಕೈಕ ಟ್ರಕ್ ಇದಾಗಿದೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡಿಜಿಟಲ್ ಮ್ಯಾಪಿಂಗ್ ಹಾಗೂ ಇಡಿ ಮಾಹಿತಿಗಳನ್ನು ಚಾಲಕರು ಡಿಜಿಟಿಲಿಕರಣದಲ್ಲಿಯೇ ನೋಡಬಹುದಾಗ ಸಲಕರಣೆಗಳನ್ನು ಅಳವಡಿಸಲಾಗಿದೆ. ಚಾಲಕರಿಗೆ ಕಂಪನಿಯಿಂದ 5 ಲಕ್ಷ ರೂ.ವರೆಗೆ ವಿಮೆ ಇರಲಿದೆ. ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗೆ ನಿಷ್ಠಿ ಮುಖ್ಯ ವಿತರಕರಾಗಿದ್ದಾರೆ ಎಂದು ಭಾಸ್ಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿತರಕರಾದ ಶ್ರೀ ನಿಷ್ಠಿ ಅಟೋಮೋಟಿವ್ಸ್ ವ್ಯವಸ್ಥಾಪಕ ನಿರ್ದೇಶಕ ದೊಡ್ಡಪ್ಪ ನಿಷ್ಠಿ, ಎಸ್ಎಂಎಲ್ ಇಸ್ರೊ ಉತ್ತರ ಕರ್ನಾಟಕ ಮಾರುಕಟ್ಟೆ ಸಹಾಯಕ ಅಧಿಕಾರಿ ಉಲ್ಲಾಸ, ಕಲಬುರಗಿ ಶೋ ರೂಂ ಸರ್ವಿಸ್ ವಿಭಾಗ ಮುಖ್ಯಸ್ಥ ಆನಂದ ಎಸ್, ಸಿದ್ದು ಮೊದಲಾದವರಿದ್ದರು.