ಗ್ರೀಸ್​ನಲ್ಲಿ 2ನೇ ವಿಶ್ವಯುದ್ಧದ ಬಾಂಬ್ ನಿಷ್ಕ್ರಿಯಕ್ಕೆ 70,000 ಜನರ ಸ್ಥಳಾಂತರ

ಥೆಸ್ಸಾಲೊನಿಕಿ,ಗ್ರೀಸ್: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗ್ರೀಸ್​ನಲ್ಲಿ ಹಾಕಲಾಗಿದ್ದ ಬಾಂಬ್ ಒಂದು ಸಿಡಿಯದೆ ಉಳಿದುಕೊಂಡಿದ್ದು, ಅದನ್ನು ನಿಷ್ಕ್ರಿಯಗೊಳಿಸುವುದಕ್ಕಾಗಿ ಅಲ್ಲಿನ ಆಡಳಿತ 70,000 ಜನರ ಸುರಕ್ಷಿತ ಸ್ಥಳಾಂತರಕ್ಕೆ ಮುಂದಾಗಿದೆ. ಕಳೆದ ವಾರ ರಸ್ತೆ ನಿರ್ಮಾಣ ಕಾಮಗಾರಿ ನಡೆಸುವ ಸಂದರ್ಭ ಭೂಮಿಯಲ್ಲಿ ಹುದುಗಿದ್ದ ಬಾಂಬ್ ಪತ್ತೆಯಾಗಿತ್ತು. 250 ಕಿಲೋ ಸ್ಪೋಟಕಗಳನ್ನು ಈ ಬಾಂಬ್ ಒಳಗೊಂಡಿದೆ. ಇದು ಎಸಗಬಹುದಾದ ಹಾನಿ ಪ್ರಮಾಣ ಅಂದಾಜಿಸಿ ಅದು ಪತ್ತೆಯಾದ ಸ್ಥಳದಿಂದ 1.9 ಕಿ.ಮೀ. ಪರಿಧಿಯ ನಿವಾಸಿಗಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಸ್ಥಳೀಯಾಡಳಿತ ಮುಂದಾಗಿದೆ. ಈಗಾಗಲೇ, ಆ ಪ್ರದೇಶದಲ್ಲಿದ್ದ 300ಕ್ಕೂ ಅಧಿಕ ವಿಕಲಾಂಗರನ್ನು ಮತ್ತು ರೋಗಿಗಳನ್ನು ಶನಿವಾರ ಸ್ಥಳಾಂತರಿಸಲಾಗಿದೆ.

ಗ್ರೀಸ್​ನ ಆಡಳಿತ ವಿವಿಧ ಮಾಧ್ಯಮಗಳ ಮೂಲಕ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದು, ಕಡ್ಡಾಯವಾಗಿ ಕೂಡಲೇ ತಮ್ಮ ವಾಸಸ್ಥಳ ತೆರವುಗೊಳಿಸಿ ಹೋಗುವಂತೆ ಸೂಚನೆ ನೀಡಿದೆ. ಈವರೆಗೆ ಈ ಪ್ರದೇಶದಲ್ಲಿ ಬೃಹತ್ ಗಾತ್ರದ ಬಾಂಬ್ ಪತ್ತೆಯಾಗಿರಲಿಲ್ಲ, ಯಾವ ದೇಶದವರು, ಯಾವಾಗ ಬಾಂಬ್ ಹಾಕಿದ್ದು ಎನ್ನುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲನೆ ನಡೆದಿದೆ ಎಂದಿದ್ದಾರೆ ಅಧಿಕಾರಿಗಳು. ಈ ಬೃಹತ್ ಬಾಂಬನ್ನು ಸೇನೆಯ ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಲಿದೆ. ಗ್ರೀಸ್ ಮಾತ್ರವಲ್ಲದೆ ಬ್ರಿಟನ್, ಜರ್ಮನಿಯಲ್ಲೂ ಇತ್ತೀಚೆಗೆ ಎರಡನೇ ಮಹಾಯುದ್ಧದ ಸಂದರ್ಭದ ಬಾಂಬ್​ಗಳು ಪತ್ತೆಯಾಗಿದ್ದವು.
-ಏಜೆನ್ಸೀಸ್

 

Leave a Reply

Your email address will not be published. Required fields are marked *