ಗ್ರಾಹಕರಿಗೆ ಎಫ್​ಎಸಿ ಹೊರೆ!

ಕಾರವಾರ: ಹೆಸ್ಕಾಂ ಅಧಿಕಾರಿಗಳ ತಪ್ಪಿನಿಂದ ಕಂಪನಿಗೆ ಆಗುವ ನಷ್ಟಗಳನ್ನು ಗ್ರಾಹಕರ ಮೇಲೆ ಹೊರಿಸಲಾಗುತ್ತಿದೆ ಎಂದು ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಹಕರ ಸಂವಾದ ಸಭೆಯಲ್ಲಿ ವಿದ್ಯುತ್ ಖರ್ಚು ಮಾಡಿದ ಶುಲ್ಕದ ಜತೆಗೆ ಫ್ಯೂಯಲ್ ಎಡ್ಜಸ್ಟ್​ಮೆಂಟ್ ಚಾರ್ಜಸ್(ಎಫ್​ಎಸಿ)ಎಂದು ಬಿಲ್​ನಲ್ಲಿ ಸೇರಿಸಲಾಗುತ್ತಿದೆ. ಪ್ರತಿ ಯುನಿಟ್​ಗೆ 17 ಪೈಸೆ ಹೆಚ್ಚುವರಿ ವೆಚ್ಚ ಸೇರಿಸಲಾಗುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಪ್ರತಿ ಯುನಿಟ್​ಗೆ 4 ಪೈಸೆ ಎಫ್​ಎಸಿ ಇತ್ತು. ಅದನ್ನು 7 ಪೈಸೆಗೆ ಹೆಚ್ಚಿಸಲಾಯಿತು. ಈಗ 17 ಪೈಸೆಗೆ ಏರಿಸಲಾಗಿದೆ. ಹೆಸ್ಕಾಂನ ಇಂಧನದ ಖರ್ಚು ವೆಚ್ಚಗಳನ್ನು ಗ್ರಾಹಕರ ಮೇಲೇಕೆ ಹೊರಿಸುತ್ತೀರೇ ಎಂದು ಗ್ರಾಹಕ ಶಿವರಾಮ ಗಾಂವಕರ್ ಪ್ರಶ್ನಿಸಿದರು. ಅದಕ್ಕೆ ದನಿಗೂಡಿಸಿದ ತಾಪಂ ಸದಸ್ಯ ಮಾರುತಿ ನಾಯ್ಕ, ಯುನಿಟ್ ಮೇಲೆ ಹೆಚ್ಚುವರಿ ಶುಲ್ಕ, ಮೀಟರ್ ಶುಲ್ಕ ಮುಂತಾದವನ್ನು ಯಾವುದೇ ಮಾಹಿತಿ ನೀಡದೇ ಬಿಲ್ ಮೂಲಕ ಗ್ರಾಹಕರಿಂದ ವಸೂಲಿ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ಪ್ರಕಾಶ ನಾಯ್ಕ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್​ಸಿ)ಯಿಂದಲೇ ಎಫ್​ಎಸಿ ಬೆಲೆ ನಿಗದಿಯಾಗುತ್ತದೆ. ಇಂಧನ ಇಲಾಖೆಯ ಸೂಚನೆಯಂತೆ ಪ್ರತಿ ಯುನಿಟ್ ಮೇಲೆ ಎಷ್ಟು ಎಫ್​ಎಸಿ ವಿಧಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗುತ್ತದೆ. ಅದರ ಪ್ರಕಾರ ನಾವು ಬಿಲ್​ನಲ್ಲಿ ಎಫ್​ಎಸಿ ಆಕರಿಸುವುದು ಅನಿವಾರ್ಯ ಎಂದರು.

ಸಿದ್ಧಾರ್ಥ ನಾಯ್ಕ ರವೀಂದ್ರ ಗಾಂವಕರ್, ಶಾಂತಾರಾಮ ಗಾಂವಕರ್ ಮಾತನಾಡಿ, ಹೊಸ ಮೀಟರ್ ಅಳವಡಿಕೆಯ ನಂತರ ಬಿಲ್ ಹೆಚ್ಚು ಬರುತ್ತಿದೆ. ಮತ್ತು ಮೀಟರ್ ರೀಡಿಂಗ್ ಮಾಡುವವರು ಮನೆಯ ಬಾಗಿಲು ತೆರೆದಿದ್ದರೂ ಡೋರ್ ಲಾಕ್ ಎಂದು ಪರಿಗಣಿಸಿ ಅಂದಾಜು ಮಾಪನ ಬರೆದು ಬಿಲ್ ನೀಡುತ್ತಾರೆ. ಕೇಳಿದರೆ ಕಚೇರಿಯ ಕಂಪ್ಯೂಟರ್ ಸರಿಯಾಗಿಲ್ಲ ಎನ್ನುತ್ತಾರೆ. ಕಚೇರಿಯ ತಪ್ಪುಗಳಿಗೆ ಗ್ರಾಹಕರನ್ನು ಹೊಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಇಇ, ಮೀಟರ್ ಪರಿಶೀಲನೆ ನಡೆಸಲಾಗುವುದು. ಆದರೆ, ಒಂದೇ ಮನೆಯ ಮೀಟರ್ ಪರಿಶೀಲನೆ ನಡೆಸುವುದಿದ್ದಲ್ಲಿ 250 ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದರು.

ವಿದ್ಯುತ್ ಕಡಿತಕ್ಕೆ ಅಸಮಾಧಾನ: ನಗರಸಭೆ ಸದಸ್ಯ ಪ್ರೇಮಾನಂದ ಗುನಗಾ, ತಾಪಂ ಸದಸ್ಯ ಮಾರುತಿ ನಾಯ್ಕ . ಎಂ.ಎ.ಗಾಂವಕರ್, ದೇವರಾಜ ನಾರ್ವೆಕರ್ ಮಾತನಾಡಿ, ತಾಲೂಕಿನಲ್ಲಿ ವಿದ್ಯುತ್ ಕಡಿತ ಹೆಚ್ಚುತ್ತಿದೆ. ಅಧಿಕಾರಿಗಳು ಫೋನಿಗೂ ಸ್ಪಂದಿಸುವುದಿಲ್ಲ . ಇದರಿಂದ ಅಂಗಡಿಗಳ ವ್ಯಾಪಾರ ಹಾಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಹೆಸ್ಕಾಂ ಅಧಿಕಾರಿಗಳು, ವಿಭಾಗದಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದರು. ಹಿರೇಶಿಟ್ಟಾದಲ್ಲಿ ಟೊಂಗೆ ಕಟಾವು ಮಾಡದ ಬಗ್ಗೆ ಕೃಷ್ಣ ಕೊಚ್ರೇಕರ್ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಜಮೀನಿನಲ್ಲಿ ಅನುಮತಿ ಪಡೆಯದೇ ಕಂಬ ಅಳವಡಿಸಿದ ಬಗ್ಗೆ ಕೆ.ವಿ.ನಾಗೆಕರ್ ಆಕ್ಷೇಪಿಸಿದರು.

Leave a Reply

Your email address will not be published. Required fields are marked *