ಗ್ರಾಮೀಣ ಭಾಗದಲ್ಲಿ ಕಾಣದ ಉತ್ಸಾಹ

ಕೆ.ಎನ್.ರಾಘವೇಂದ್ರ ಮಂಡ್ಯ
ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಜಿಲ್ಲೆಯಲ್ಲಿ ಲೋಕಸಭೆ ಉಪಚುನಾವಣೆ ಬಗ್ಗೆ ಮತದಾರರು ಅಷ್ಟೇನೂ ಉತ್ಸಾಹ ತೋರಲಿಲ್ಲ.
ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಜಿದ್ದಾಜಿದ್ದಿ ಕಂಡುಬರುತ್ತಿತ್ತು. ಅದರಲ್ಲೂ ಮತಗಟ್ಟೆ ಸಮೀಪ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಯುದ್ಧದಂತೆ ಪೈಪೋಟಿ ನಡೆಸುತ್ತಿದ್ದರು. ಆದರೆ, ಈ ಚುನಾವಣೆಯಲ್ಲಿ ಅಂತಹ ಯಾವುದೇ ದೃಶ್ಯ ಕಂಡುಬರಲಿಲ್ಲ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿರುವುದು.

ಪ್ರಾರಂಭದಿಂದಲೂ ನಿರಾಸಕ್ತಿ: ಉಪಚುನಾವಣೆ ಘೋಷಣೆಯಾದ ದಿನದಿಂದಲೂ ಜಿಲ್ಲೆಯ ಜನರಲ್ಲಿ ಅಷ್ಟೇನೂ ಉತ್ಸಾಹ, ಕುತೂಹಲ ಕಂಡುಬರಲಿಲ್ಲ. ಕೇವಲ ನಾಲ್ಕು ತಿಂಗಳ ಅವಧಿಗೆ ಚುನಾವಣೆಯ ಅವಶ್ಯಕತೆ ಇತ್ತಾ ಎನ್ನುವ ಅಭಿಪ್ರಾಯಗಳು ಕೇಳಿಬಂದಿದ್ದವು. ಇದಕ್ಕೆ ಕೆಲ ಜನಪ್ರತಿನಿಧಿಗಳೂ ದನಿಗೂಡಿಸಿದ್ದರು. ಪ್ರಚಾರದಲ್ಲೂ ಅಷ್ಟೊಂದು ಅಬ್ಬರ ಕಂಡುಬಂದಿರಲಿಲ್ಲ.

ಇತ್ತ ಜಿಲ್ಲಾಡಳಿತ ಕಡ್ಡಾಯ ಮತದಾನ ಮಾಡುವಂತೆ ಪ್ರಚಾರ ಮಾಡಿದರೂ ಅಷ್ಟೊಂದು ಪ್ರಭಾವ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಮಾಹಿತಿಯೇ ಹಲವರಿಗೆ ತಿಳಿದಿರಲಿಲ್ಲ. ಇದರ ಮುಂದುವರಿದ ಭಾಗದಂತೆ ಮತದಾನದ ದಿನವಾದ ಶನಿವಾರವೂ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಲು ಮತದಾರರು ನಿರಾಸಕ್ತಿ ತೋರಿದರು.

ಅಬ್ಬರ, ಗದ್ದಲವಿಲ್ಲ: ಪ್ರತಿ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡುತ್ತಿತ್ತು. ಆದರೂ, ಅಲ್ಲಲ್ಲಿ ಗಲಾಟೆ, ಗದ್ದಲ ನಡೆಯುತ್ತಿತ್ತು. ಆದರೆ, ಈ ಬಾರಿ ಬಹುತೇಕ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಆಗೊಬ್ಬರು, ಈಗೊಬ್ಬರು ಎಂಬಂತೆ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರಿಂದಾಗಿ ಮತಗಟ್ಟೆಗಳು ಬಳಿ ಬಿಕೋ ಎನ್ನುತ್ತಿದ್ದವು.

ಇನ್ನು ಮತದಾನದ ದಿನ ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಆದರೆ, ಈ ಚುನಾವಣೆಯಲ್ಲಿ ಮತಗಟ್ಟೆ ಸಮೀಪ ಅಂತಹ ಪರಿಸ್ಥಿತಿ ಇರಲಿಲ್ಲ. ಮತದಾನಕ್ಕೆ ಬರುವವರಿಗೆ ಗುರುತಿನ ಸಂಖ್ಯೆ ಬರೆದುಕೊಡುವವರೂ ಇಲ್ಲದಂತಾಗಿತ್ತು.

ಕರ್ತವ್ಯನಿರತ ಮತದಾರರು: ಮಾಮೂಲಿಯಂತೆ ಮತದಾನದ ದಿನವೂ ಜನರು ತಮ್ಮ ದೈನಂದಿನ ಕೆಲಸಗಳಲ್ಲಿ ನಿರತರಾಗಿದ್ದರು. ಕೆಲವರು ಹೊಲ, ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಕುರಿ, ಆಡು, ಜಾನುವಾರುಗಳನ್ನು ಜಮೀನಿಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು. ಒಂದಿಷ್ಟು ಜನರಷ್ಟೇ ಚುನಾವಣೆ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು.

ಮತದಾನದ ಹಕ್ಕು ಹೊಂದಿದ್ದು, ಕೆಲಸಕ್ಕೆಂದು ಹೊರಗಡೆ ಹೋಗಿರುವವರನ್ನು ಮತದಾನದ ದಿನ ಕರೆಸುವ ಸಂಸ್ಕೃತಿ ಹಿಂದಿನಿಂದಲೂ ಇದೆ. ಆದರೆ, ಅದ್ಯಾಕೋ ಈ ಬಾರಿ ಅಂತಹ ಉತ್ಸಾಹವನ್ನು ಮುಖಂಡರು ತೋರಲಿಲ್ಲ.

ಪ್ರಚಾರಕ್ಕೂ ಬರಲಿಲ್ಲ ಸಾರ್…: ಗ್ರಾಮೀಣ ಭಾಗದಲ್ಲಿ ಚುನಾವಣಾ ಕಾವು ಇಲ್ಲದಿರುವ ಬಗ್ಗೆ ಮಳವಳ್ಳಿ ತಾಲೂಕಿನ ಗ್ರಾಮವೊಂದರ ಮತದಾರ ಪುಟ್ಟಸ್ವಾಮಿ ಎಂಬುವರನ್ನು ಪ್ರಶ್ನಿಸಿದರೆ, ‘ಎಲ್ಲಿ ಸಾರ್, ಚುನಾವಣೆ ಇದೆ ಎಂಬುದೇ ಬಹುತೇಕರಿಗೆ ಗೊತ್ತಿಲ್ಲ. ಇನ್ನು ನಮ್ಮ ಕಡೆ ನಾಯಕರು ಬಂದು ಪ್ರಚಾರವನ್ನೂ ಮಾಡಲಿಲ್ಲ. ಈ ಕಾರಣದಿಂದ ಕೆಲವರು ಮತದಾನ ಮಾಡಲು ಬರಲಿಲ್ಲ. ಆದರೆ, ನನ್ನ ಹಕ್ಕನ್ನು ಚಲಾಯಿಸಬೇಕೆಂಬ ಉದ್ದೇಶದಿಂದ ಮತದಾನ ಮಾಡಿದ್ದೇನೆ’ ಎಂದರು.