ಗ್ರಾಮಗಳಲ್ಲಿ ಸಾಹಿತ್ಯ ರುಚಿ ಹಂಚಲು ಯರಝರ್ವಿಯಲ್ಲಿ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸವದತ್ತಿ: ಗ್ರಾಮಗಳಲ್ಲಿ ಸಾಹಿತ್ಯದ ರುಚಿಯನ್ನು ಹಚ್ಚುವ ಉದ್ದೇಶದಿಂದ 6ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ತಾಲೂಕಿನ ಯರಝರ್ವಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಇತ್ತೀಚಿಗೆ ಯುವಕರಲ್ಲಿ ಸಾಹಿತ್ಯಾಸಕ್ತಿ ಕಾಣೆಯಾಗುತ್ತಿದೆ. ಇಂತಹ ಯುವಕರಿಗೆ ಸಾಹಿತ್ಯದ ಸೊಗಡನ್ನು ಪರಿಚಯಿಸಿ, ಯುವ ಸಾಹಿತಿಗಳ ಪಡೆ ನಿರ್ಮಿಸಲು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗುತ್ತಿದೆ ಎಂದು ಸಾಹಿತಿ ಡಾ. ವೈ.ಎಂ. ಯಾಕೊಳ್ಳಿ ಗುರ್ಲಹೊಸುರಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿ.ಬಿ. ದೊಡಗೌಡರ ಮಾತನಾಡಿ, ಯರಝರ್ವಿ ಗ್ರಾಮದ ಡಾ. ಎಸ್.ಎಸ್. ಅಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಶಾಸಕ ಆನಂದ ಮಾಮನಿ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಜಿ.ಪಂ. ಸದಸ್ಯೆ ವಿದ್ಯಾರಾಣಿ ಸೊನ್ನದ ಲೇಖನಗಳನ್ನು ಬಿಡುಗಡೆ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತವ್ವ ಮಾ ಜಕಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ನಾಡ ಧ್ವಜಾರೋಹಣ, ರಾಮಲಿಂಗಪ್ಪ ಎಚ್. ಹೂಗಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಮೇ 31ರ ಮಧ್ಯಾಹ್ನ 12 ಘಂಟೆಗೆ ನಡೆಯಲಿರುವ ಕವಿಗೋಷ್ಠಿಯಲ್ಲಿ ಧಾರವಾಡದ ಕವಿವ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆ ವಹಿಸುವರು. ಶಿವಪ್ರಸಾದ ಹುಲಿಪ್ಪನವರಮಠ ಆಶಯ ನುಡಿ ನೀಡಲಿದ್ದಾರೆ. ಮಧ್ಯಾಹ್ನ 2 ಘಂಟೆಗೆ ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಬರಹ ವಿಚಾರಗೋಷ್ಠಿ ನಡೆಯಲಿದೆ. ರಾಯಭಾಗದ ಹಿರಿಯ ಸಾಹಿತಿ ಡಾ. ವೈ.ಬಿ. ಹಿಮ್ಮಡಿ, ಕಲ್ಲೋಳಿಯ ಸಾಹಿತಿ ಡಾ. ಸುರೇಶ ಹನಗಂಡಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 4 ಘಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯವಹಿಸುವರು ಎಂದರು.

ಮುಖ್ಯಅತಿಥಿಗಳಾಗಿ ಜಗದೀಶ ಶಿಂತ್ರಿ, ಗ್ರೇಡ್‌-2 ತಹಸೀಲ್ದಾರ್ ಎಂ.ಎನ್​. ಮಠದ, ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ಖ್ಯಾತ ಸಾಹಿತಿ ಹೂಲಿಶೇಖರ, ಖ್ಯಾತ ಕಾದಂಬರಿಕಾರ ಸುಬ್ರಾವ ಕುಲಕರ್ಣಿ, ಡಾ, ಎಸ್.ಎಸ್. ಜಕಬಾಳ, ಪಿಡಿ ಎ.ಎಂ. ಪೂಜಾರ ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು. ಡಾ. ಈರಣ್ಣ ಬಿ ಹಿರೇಮಠ, ಚಂದ್ರಶೇಖರ ಕಾರಜೋಳ, ಶಂಕರ ವನ್ನೂರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *