ಗ್ರಾಮೀಣ ಪ್ರತಿಭೆಗೆ ಅಗ್ರ ಸ್ಥಾನ

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜ್​ನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ವಿನೋದ ನಾಯಕ ಶೇ. 97.05 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.

ಕಕ್ಕೂರ ತಾಂಡಾದ ಬಡ ಕಟುಂಬದಲ್ಲಿ ಜನಿಸಿದ ವಿನೋದ ಕಾಲೇಜ್​ನ ರಜೆ ದಿನಗಳಲ್ಲಿ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದನು. ಆತನ ತಂದೆ ಪರಸಪ್ಪ, ತಾಯಿ ಶಾರದಾ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸ್ವಂತ ಜಮೀನು ಇಲ್ಲದ ಪರಸಪ್ಪ ಮತ್ತು ಶಾರದಾ ಅವರು ಕೂಲಿ ಕೆಲಸ ಮಾಡಿಕೊಂಡು ಮಗನಿಗೆ ಶಿಕ್ಷಣ ನೀಡುತ್ತಿದ್ದಾರೆ.

ಪರಸಪ್ಪ ಮತ್ತು ಶಾರದ ದಂಪತಿಗೆ ಇಬ್ಬರು ಪುತ್ರರಿದ್ದು, ವಿನೋದನ ಅಣ್ಣ ರಾಘವೇಂದ್ರ ಗದಗ ಜೆಟಿ ಕಾಲೇಜ್​ನಲ್ಲಿ ಬಿಸಿಎ ಕೋರ್ಸ್ ಅಭ್ಯಾಸ ಮಾಡುತ್ತಿದ್ದಾನೆ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಗುರಿ ಹೊಂದಿರುವ ತಂದೆ-ತಾಯಿ ಪ್ರತಿನಿತ್ಯ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ಒಂದು ಹಸು ಸಾಕಿದ್ದು, ಅದರಿಂದ ಬರುವ ಹಾಲು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ನಮ್ಮ ಮಗ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಸಾಧನೆ ಮಾಡಿದ್ದಾನೆ ಎನ್ನುವುದು ಕೇಳಿ ನಮಗೆ ಸಂತಸವಾಗಿದೆ. ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಮಗನಿಗೆ ಓದಿಸಿದ್ದು ಸಾರ್ಥಕ ಎನ್ನುವಂತಾಗಿದೆ. ವಿನೋದ ಎಲ್ಲಿವರೆಗೂ ಓದುತ್ತೇನೆ ಎನ್ನುತ್ತಾನೋ ಅಲ್ಲಿವರೆಗೂ ಏನೇ ಕಷ್ಟ ಬಂದರೂ ಓದಿಸುತ್ತೇವೆ.

| ಪರಸಪ್ಪ, ಶಾರದಾ, ವಿನೋದನ ತಂದೆ-ತಾಯಿ

ನಮ್ಮ ತಂದೆ-ತಾಯಿ ಕಷ್ಟಪಟ್ಟು ಕೂಲಿ ಕೆಲಸ ಮಾಡಿ ನನಗೆ ಶಿಕ್ಷಣ ನೀಡಿದ್ದಾರೆ. ರಜೆ ದಿನದಲ್ಲಿ ನಾನು ಗೌಂಡಿ ಕೆಲಸಕ್ಕೆ ಹೋಗುತ್ತಿದ್ದೇನು. ಮುಂದೆ ಬಿಎ ಪದವಿ ಪಡೆದು ಕೆಎಎಸ್ ಮತ್ತು ಐಎಎಸ್ ಪರೀಕ್ಷೆ ಬರೆದು ಅಧಿಕಾರಿಯಾಗಬೇಕು ಎನ್ನುವ ಗುರಿ ಹೊಂದಿದ್ದೇನೆ.

| ವಿನೋದ, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ