ಗ್ರಾಮೀಣ ಅಭಿವೃದ್ಧಿಯಿಂದ ದೇಶದ ಉನ್ನತಿ ಸಾಧ್ಯ

ಹಳಿಯಾಳ: ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕ್ರಾಂತಿಕಾರಿಕ ಸಾಮರ್ಥ್ಯ ಯುವ ಶಕ್ತಿಯಲ್ಲಿದೆ ಎಂದು ಸೆಲ್ಕೋ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಡಾ.ಹರೀಶ ಹಂದೆ ಹೇಳಿದರು.

ಪಟ್ಟಣದ ಕೆ.ಎಲ್.ಎಸ್ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟಿ ಸಂಸ್ಥೆಯ 14ನೇ ವಾರ್ಷಿಕ ವರದಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯುವ ಜನಾಂಗ ಸಾಧನೆಗೈಯಲು ಬ್ಯಾಂಕಿಂಗ್ ಹಾಗೂ ತಂತ್ರಜ್ಞಾನ ವಲಯಗಳು ಸಂಪನ್ಮೂಲ ನೀಡ ಬೇಕು. ಗ್ರಾಮಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಸರ್ಕಾರ ಗಳು ಮಾಹಿತಿ ತಂತ್ರಜ್ಞಾನಕ್ಕೆ ನೀಡುವಷ್ಟೇ ಮಹತ್ವವನ್ನು ಗ್ರಾಮೀಣಾಭಿವೃದ್ಧಿಗೂ ನೀಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಕೌಶಲ ಆಧಾರಿತ ತರಬೇತಿಯ ಮೂಲಕ ಸ್ವಾವಲಂಬಿ ಬದುಕನ್ನು ಸಾಧಿಸುವ ಕಲ್ಪನೆಯನ್ನು ದೇಶಪಾಂಡೆ ರುಡಸೆಟ್ ಸಂಸ್ಥೆಯು ಹದಿಮೂರು ವರ್ಷಗಳ ಹಿಂದೆಯೇ ಪರಿಚಯಿಸಿ ಯಶಸ್ವಿಯಾಗಿದೆ. 21ನೇ ಶತಮಾನ ಗ್ರಾಹಕರ ಶತಮಾನವಾಗಿದೆ, ಇಲ್ಲಿ ಗ್ರಾಹಕರೇ ಪ್ರಭುಗಳಾಗಲಿದ್ದಾರೆ, ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ದಿಸೆಯಲ್ಲಿ ನೂತನ ತರಬೇತಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕೆನರಾ ಬ್ಯಾಂಕ್ ಮಂಗಳೂರು ಡಿಜಿಎಂ ವಿ. ರಾಮಚಂದ್ರ, ಆರ್​ಸೆಟಿ ಆಡಳಿತ ಮಂಡಳಿ ನಿದೇರ್ಶಕರು, ಬೆಂಗಳೂರು ಕೇಂದ್ರ ಕಚೇರಿ ಕೆನರಾ ಬ್ಯಾಂಕ್ ಎ.ಜಿ.ಎಂ. ಬಿ.ಪಾರ್ಶ್ವನಾಥ, ರುಡಸೆಟ್ ಸಂಸ್ಥೆಯ ಗೌವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಪ್ರಸಾದ ದೇಶಪಾಂಡೆ ಮಾತನಾಡಿದರು. ಸಂಸ್ಥೆಯ ನಿದೇರ್ಶಕ ಮಂಡಳಿ ಸದಸ್ಯ ಶ್ಯಾಮ ಕಾಮತ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಅನಂತಯ್ಯ ಆಚಾರ ಉಪಸ್ಥಿತರಿದ್ದರು.

ದತ್ತು ಸ್ವೀಕಾರ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟ್ ಸಂಸ್ಥೆಯು ತಾಲೂಕಿನ ಜನಗಾ ಗ್ರಾಪಂ ವ್ಯಾಪ್ತಿಯ ದೊಡ್ಡಕೊಪ್ಪ, ಬಂಟರಗಾಳಿ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಸಚಿವ ದೇಶಪಾಂಡೆ ಚಾಲನೆ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು, ಸ್ವಸಹಾಯ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ವಾರ್ಷಿಕ ವರದಿ ಮಂಡಿಸಿದರು. ಶ್ರೀಧರ ಬುಳ್ಳಣ್ಣನವರ, ನೆಲ್ಸಿ ಫರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.