ಗ್ರಾಮೀಣರ ಸ್ವಾವಲಂಬನೆಯಿಂದ ವ್ಯವಸ್ಥೆ ಸುಧಾರಣೆ

ಗದಗ: ಗ್ರಾಮೀಣ ಜನತೆಯ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವ್ಯವಸ್ಥೆಯ ಸಂಪೂರ್ಣ ಅನುಷ್ಠಾನದ ಅವಶ್ಯವಿದೆ ಎಂದು ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಂಸ್ಥೆಗಳ ವೈವಿಧ್ಯತೆ ಕುರಿತು ಬುಧವಾರ ಜರುಗಿದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಜನರು ಸ್ವಾವಲಂಬಿ ಜೀವನ ಸಾಗಿಸಲು ಗುಣಮಟ್ಟದ ಶಿಕ್ಷಣ, ಸೂಕ್ತ ಉದ್ಯೋಗ ಒದಗಿಸಲು ಪ್ರಮುಖ ಪಾತ್ರ ವಹಿಸಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಎಂದರು. ಈ ವ್ಯವಸ್ಥೆಯು ತಳಮಟ್ಟದಿಂದ ಸಂಪೂರ್ಣ ಅನುಷ್ಠಾನಗೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.  ಮಾಜಿ ಸಂಸದ ಹಾಗೂ ಕರ್ನಾಟಕ ಪಂಚಾಯತ್​ರಾಜ್ ಪರಿಷತ್ತಿನ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, ದೇಶವು ಪ್ರಗತಿಯತ್ತ ಸಾಗುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿನ ಅನಕ್ಷರತೆ, ನಿರುದ್ಯೋಗ, ಮೂಲಸೌಕರ್ಯಗಳ ಕೊರತೆ, ಅಪೌಷ್ಟಿಕತೆಯಂತಹ ಸಮಸ್ಯೆಗಳು ನಿವಾರಣೆಗೊಂಡಿಲ್ಲ. ಈ ದಿಸೆಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದಲು ಪಂಚಾಯತ್ ವಿಕೇಂದ್ರೀಕರಣದಿಂದಾಗಿ ಅವಕಾಶ ದೊರಕಿದಂತಾಗಿದೆ ಎಂದು ಹೇಳಿದರು.

ಪ್ರೊ. ಆರ್.ಎಸ್. ದೇಶಪಾಂಡೆ ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ಅವರ ಗ್ರಾಮೀಣ ಪುನರ್ ನಿರ್ಮಾಣ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪಂಚಾಯತ್​ರಾಜ್ ಸಂಸ್ಥೆಗಳ ಬಲವರ್ಧನೆ ಮಾಡುವುದು ಅತಿ ಅವಶ್ಯವಾಗಿದೆ. ಇದರೊಂದಿಗೆ ಗ್ರಾಮೀಣ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲು, ಮಾಹಿತಿ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಗ್ರಾಮೀಣ ಉದ್ಯಮಶೀಲತೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವುದರಿಂದ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಸಂಪದ್ಭರಿತವನ್ನಾಗಿಸಬಹುದು ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ರೂಪಾ ಅಂಗಡಿ, ವಿಶ್ವವಿದ್ಯಾಲಯದ ಕುಲಪತಿ ಬಿ. ತೀಮ್ಮೆಗೌಡ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೇರಳ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ವಿಜಯಾನಂದ, ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಕಮಲ್ ತೊರೈ, ಡಾ. ಮೀನಾಕ್ಷಿ ಸುಂದರಂ, ಧಾರವಾಡ ಕೃಷಿ ವಿವಿ ಮಾಜಿ ಕುಲಪತಿ ಎಸ್.ಎ. ಪಾಟೀಲ, ಜಾರ್ಜ್ ಮ್ಯಾಥಿವ್, ಜಿಪಂ ಸಿಇಒ ಮಂಜುನಾಥ ಚವ್ಹಾಣ ಉಪಸ್ಥಿತರಿದ್ದರು. ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ 350 ಕ್ಕೂ ಹೆಚ್ಚು ತಜ್ಞರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕುಲಸಚಿವ ಡಾ. ಸುರೇಶ ನಾಡಗೌಡರ ಸ್ವಾಗತಿಸಿದರು. ಎಸ್. ಸೌಮ್ಯ ನಿರೂಪಿಸಿ, ವಂದಿಸಿದರು.

 

Leave a Reply

Your email address will not be published. Required fields are marked *