ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಟ್ಟಿಹಳ್ಳಿ: ಗ್ರಾಮೀಣ ಭಾಗದ ಜನರಿಗೆ ತುಂಗಭದ್ರಾ ನದಿ ನೀರು ಸರಬರಾಜು ಮಾಡಲು ಸರ್ಕಾರವು ತಾಲೂಕಿನಲ್ಲಿ ಸ್ಥಾಪಿಸಿದ 2 ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದಾಗಿದ್ದು, ಜನರಿಗೆ ಅಶುದ್ಧ ನೀರೇ ಗತಿಯಾಗಿದೆ.

ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ನೀರು ಶುದ್ಧೀಕರಣಕ್ಕೆ ಬೈರನಪಾದ ಬಳಿ ಮತ್ತು ಕಡೂರ ಗ್ರಾಮದ ಬಳಿ ಎರಡು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಆದರೆ, ನೀರು ಶುದ್ಧೀಕರಣವಾಗದೆ ಜನರು ಕಲುಷಿತ ನೀರನ್ನೇ ಸೇವಿಸಬೇಕಾಗಿದೆ.

ತಾಲೂಕಿನ ಬೈರನಪಾದದ ಘಟಕಕ್ಕೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ, ಮಾನಕನಹಳ್ಳಿ, ಕುಪೇಲೂರ, ನಿಟ್ಟೂರ, ಅಂತರವಳ್ಳಿ, ಕೋಟಿಹಾಳ ಮತ್ತು ಬಿಲ್ಲಹಳ್ಳಿ ಸೇರಿ 7 ಗ್ರಾಪಂಗಳ ಮತ್ತು ರಟ್ಟಿಹಳ್ಳಿ ತಾಲೂಕಿನ ಹಳ್ಳೂರ, ಹಿರೇಕಬ್ಬಾರ, ನಾಗವಂದ, ತಡಕನಹಳ್ಳಿ, ಮೇದೂರ, ಕುಡುಪಲಿ ಮತ್ತು ನೇಶ್ವಿ ಸೇರಿ ಒಟ್ಟು 7 ಗ್ರಾಪಂಗಳ ವ್ಯಾಪ್ತಿಯ 46 ಗ್ರಾಮಗಳು ಬಹುಗ್ರಾಮ ನದಿ ನೀರು ಯೋಜನೆಯ ವ್ಯಾಪ್ತಿಗೆ ಸೇರುತ್ತವೆ. ಅಲ್ಲದೆ, ಕಡೂರ ಬಳಿ ಇರುವ ಮತ್ತೊಂದು ಶುದ್ಧೀಕರಣ ಘಟಕಕ್ಕೆ ರಟ್ಟಿಹಳ್ಳಿ, ಕಡೂರ, ಕಣವಿಸಿದ್ಧಗೇರಿ ಮತ್ತು ಹಿರೇಮೊರಬ ಸೇರಿ 4 ಗ್ರಾಪಂ ವ್ಯಾಪ್ತಿಯ 13 ಗ್ರಾಮಗಳು ಒಳಪಡುತ್ತವೆ.

ನೀರು ಶುದ್ಧೀಕರಿಸಲು ಕನಿಷ್ಠ 3 ತಿಂಗಳಿಗೊಮ್ಮೆ ಮರಳು ಬದಲಾಯಿಸಬೇಕು. ಕ್ಲೋರಿನ್ ಮತ್ತು ಆಲಂ ರಾಸಾಯನಿಕ ಬಳಸಬೇಕು. ಆದರೆ, ಇಲ್ಲಿ ವರ್ಷಗಳೇ ಕಳೆದರೂ ಮರಳು ಬದಲಾವಣೆ ಮಾಡಲಾಗುತ್ತಿಲ್ಲ. ರಾಸಾಯನಿಕ ಬಳಕೆ ಮಾಡುತ್ತಿಲ್ಲ. ಇದರಿಂದ ಯಂತ್ರೋಪಕರಣ ಕೆಟ್ಟು ಹೋಗಿವೆ. ಇಲ್ಲಿ ಗುತ್ತಿಗೆದಾರರ ನಿರ್ಲಕ್ಷ ಎದ್ದು ಕಾಣುತ್ತದೆ. ವಿಷಯ ಗೊತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಎರಡು ಘಟಕಗಳಲ್ಲಿ ಒಟ್ಟು 35 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಇವರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಇದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಇಲ್ಲಿನ ಸಿಬ್ಬಂದಿಯನ್ನು ಗುತ್ತಿಗೆದಾರರು ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸುಮಾರು ದಿನಗಳಿಂದ ಮನೆಗಳಿಗೆ ನದಿಯ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೆ, ಅವರು 2-3 ದಿವಸಗಳಲ್ಲಿ ದುರಸ್ತಿ ಕಾರ್ಯ ಕೈಗೊಂಡು ಶುದ್ಧ ನೀರು ಪೂರೈಸಲಾಗುವುದು ಎಂದು ಕೇವಲ ಭರವಸೆ ನೀಡುತ್ತಿದ್ದಾರೆ. ಈ ಎರಡೂ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದರಿಂದ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ಎರಡೂ ಘಟಕಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.
| ಸಿದ್ದನಗೌಡ ಗುಬ್ಬಿಯವರ, ಸಿದ್ದಪ್ಪ ಪುರದಕೇರಿ, ಭೀಮಪ್ಪ ಮೇದೂರ, ಗ್ರಾಮಸ್ಥರು

ಕಳೆದ ಕೆಲವು ದಿನಗಳ ಹಿಂದೆ ಬೈರನಪಾದ ಘಟಕಕ್ಕೆ ಭೇಟಿ ನೀಡಲಾಗಿತ್ತು. ಅಲ್ಲಿರುವ ಕೆಲ ಸಮಸ್ಯೆ ಹೋಗಲಾಡಿಸಲು ತಿಳಿಸಲಾಗಿತ್ತು. ಮತ್ತೊಮ್ಮೆ ಭೇಟಿ ನೀಡಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.
| ರಮೇಶಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಹಾಯಕ ಇಂಜಿನಿಯರ್