ಗ್ರಾಮಾಂತರ ಭಾಗದಲ್ಲಿ ಮಧು ಪ್ರಚಾರ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಬುಧವಾರ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಜಂಟಿ ಚುನಾವಣಾ ಪ್ರಚಾರ ಕೈಗೊಂಡರು.

ಹೊಳಲೂರಿನ ಮಠ ಮತ್ತು ಕುಂಸಿಯ ವೀರಶೈವ ಸಭಾಭವನದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಜಿಲ್ಲೆಯಲ್ಲಿ ಯಾವೊಂದು ಕೆಲಸ ಕಾರ್ಯಗಳು ಸರಿಯಾಗಿ ನಡೆದಿಲ್ಲ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬರೀ ಬಸ್ ನಿಲ್ದಾಣಗಳಿಗೆ ಸೀಮಿತವಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ 15 ವರ್ಷಗಳಿಂದ ಯಡಿಯೂರಪ್ಪ ಮತ್ತು ರಾಘವೇಂದ್ರ ಸಂಸದರಾಗಿದ್ದರೂ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿದಂತೆ ನಾಟಕವಾಡುತ್ತಿದ್ದಾರೆ. ಸ್ಥಳೀಯವಾಗಿ ಮಾಡಿದ ಕೆಲಸಗಳನ್ನು ಹೇಳಿಕೊಳ್ಳದೆ ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ಡಾ. ಶ್ರೀನಿವಾಸ್ ಕರಿಯಣ್ಣ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ರೇಖಾ ಉಮೇಶ್, ರವಿ, ಜಿ.ಡಿ.ಮಂಜುನಾಥ್, ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.