ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಇಲ್ಲ

ಗದಗ: ಗದಗ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಡಿಬಿಒಟಿ ಮೂಲಕ ನೀರನ್ನು ಪೂರೈಸಲಾಗುತ್ತಿದ್ದು, ನೀರಿನ ಸಮಸ್ಯೆ ಇಲ್ಲ. ನರೇಗಾದಲ್ಲಿಯೂ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗುತ್ತಿದ್ದು, ಪ್ರತಿ ಗ್ರಾಪಂನಿಂದ ಕೆಲಸ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ತಾಲೂಕಿನ ಬಿಂಕದಕಟ್ಟಿ ಗ್ರಾಪಂ ಗೋದಾಮಿನಲ್ಲಿ ನಿರ್ಮಾಣ ಮಾಡಿರುವ ಮೇವು ಬ್ಯಾಂಕ್​ಗೆ ಭೇಟಿ ನೀಡಿ, ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಗಾರು ಬೆಳೆ ಹಾನಿ ಇನ್​ಪುಟ್ ಸಬ್ಸಿಡಿ ಹಣ 44,416 ರೈತರ ಖಾತೆಗಳಿಗೆ ಜಮೆಯಾಗಿದೆ. 24,000 ರೈತರಿಗೆ ಬಾಕಿಯಿದ್ದು ಇನ್ನೊಂದು ವಾರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ನರೇಗಾ ಯೋಜನೆಯಡಿ ಕೂಲಿಯನ್ನು ಕೇಂದ್ರ ಸರ್ಕಾರದ ಕೃಷಿ ಇಲಾಖೆಯಿಂದ ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರ ಸಮರ್ಪಕವಾಗಿ ವಿತರಣೆ ಮಾಡದ ಕಾರಣ ರಾಜ್ಯ ಸರ್ಕಾರದ ಖಜಾನೆಯಿಂದ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ…

ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು, ಯಾರು ಸೋಲಬೇಕು ಎನ್ನುವುದನ್ನು ಜನತೆ ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರ್ಕಾರದ ಸಾಧನೆ, ಸಾಮಾಜಿಕ ನ್ಯಾಯ ಹಾಗೂ ರೈತರ ಸಾಲಮನ್ನಾ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರಗಳ ಮೇಲೆ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಹಾಗೂ ವಿಧಾನಸಭೆ ಉಪಚುನಾವಣೆಯ ಕುಂದಗೋಳ, ಚಿಂಚೊಳ್ಳಿ ಎರಡು ಕ್ಷೇತ್ರಗಳಲ್ಲಿ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದರು.

ಮಾಧ್ಯಮವೂ ಒಂದು ಅಸ್ತ್ರ

ಸುದ್ದಿ ವಾಹಿನಿಗಳ ವರದಿಗಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಭರದಲ್ಲಿ ಕೆಲವರು ಏನೇನೋ ಮಾತಾಡಿಬಿಡುತ್ತಾರೆ. ಅದನ್ನೇ ನೀವು ಎರಡೆರಡು ದಿನ ಬಿತ್ತರಿಸುತ್ತೀರಾ. ಅದು ನಿಮ್ಮ ತಪ್ಪಲ್ಲ, ಕರ್ತವ್ಯ. ರಾಜಕಾರಣದಲ್ಲಿ ಯಾರು ಎಷ್ಟು ಮಾತನಾಡಬೇಕು, ಅಷ್ಟೇ ಮಾತನಾಡಬೇಕು. ಅಂದಾಗ ಮಾತ್ರ ಸಮಸ್ಯೆ, ಗೊಂದಲ ನಿರ್ವಣವಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮವೂ ಒಂದು ಶಸ್ತ್ರವಾಗಿದ್ದು, ಬಳಕೆ ಸರಿಯಾಗಬೇಕು. ಯಾವುದಾದರೂ ವ್ಯಕ್ತಿ, ರಾಜಕಾರಣಿಗಳಿಂದ ಲೋಪದೋಷಗಳಾಗಿದ್ದರೆ ಅಂತಹ ಸುದ್ದಿಗಳನ್ನು ಬಿತ್ತರ ಮಾಡಲೇಬೇಕು. ಅನವಶ್ಯಕವಾಗಿ ಏನೂ ಇಲ್ಲದೇ ಜನರನ್ನು ಕೆರಳಿಸುವ ರೀತಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡುವುದು ತಪ್ಪು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.