ಗ್ರಾಮಸ್ಥರ ಆತಂಕ ಹೆಚ್ಚಿಸಿದ ಗಜಪಡೆ

ಚನ್ನಪಟ್ಟಣ: ತಾಲೂಕಿನ ಸುಳ್ಳೇರಿ ಕೆರೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಗುಂಪು ಗ್ರಾಮಸ್ಥರಲ್ಲಿ ಅಚ್ಚರಿ ಮತ್ತು ಆತಂಕ ಮೂಡಿಸಿವೆ. ಆನೆಗಳನ್ನು ಕಂಡು ಗಾಬರಿಗೊಂಡ ರೈತ ಓಡುವಾಗ ಬಿದ್ದು ಗಾಯಗೊಂಡಿದ್ದಾನೆ.

ಸೋಮವಾರ ರಾತ್ರಿ ಕಾವೇರಿ ವನ್ಯಜೀವಿ ವಲಯದಿಂದ ಕೋಡಂಬಹಳ್ಳಿ ಮಾರ್ಗವಾಗಿ ಸಾಗಿ ಬಂದ 9 ಆನೆಗಳ ಪೈಕಿ 7 ಆನೆಗಳ ಗುಂಪು ಮಂಗಳವಾರ ಬೆಳಗ್ಗೆ ಸುಳ್ಳೇರಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಬೀಡುಬಿಟ್ಟಿದೆ. ಗುಂಪಿನಿಂದ ತಪ್ಪಿಸಿಕೊಂಡ ಮತ್ತೆರಡು ಆನೆಗಳ ಪೈಕಿ ಒಂದು ಅಕ್ಕೂರು ಕೆರೆಯಲ್ಲಿ, ಮತ್ತೊಂದು ಸೋಮನಾಥಪುರ ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟಿವೆೆ.

ಕಬ್ಬಾಳು ಬೆಟ್ಟದಿಂದ ತಾಲೂಕಿನ ಕೋಡಂಬಹಳ್ಳಿ ಮೂಲಕ ಬಂದಿರುವ ಕಾಡಾನೆಗಳು ತಾಲೂಕಿನ ಸೋಮನಾಥಪುರ, ಅಕ್ಕೂರು ಹೊಸಳ್ಳಿ, ಮಳೂರುಪಟ್ಟಣ, ಸುಳ್ಳೇರಿ ಗ್ರಾಮದ ರೈತರ ಬೆಳೆಗೆ ಹಾನಿ ಮಾಡಿವೆ. ಮಾರ್ಗದುದ್ದಕ್ಕೂ ಸಿಕ್ಕ ಜಮೀನಿನಲ್ಲಿ ಬೆಳೆದಿದ್ದ ಮಾವು, ಬಾಳೆ, ಫರಂಗಿ, ಜೋಳ ಸೇರಿ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿದೆ.

ಆತಂಕಗೊಂಡ ಜನತೆ: ಸುಳ್ಳೇರಿ ಕೆರೆಯಲ್ಲಿ ಕಾಡಾನೆಗಳ ಹಿಂಡು ಜಲಕ್ರೀಡೆಯಲ್ಲಿ ತೊಡಗಿದ್ದನ್ನು ಕಂಡು ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಆನೆಗಳನ್ನು ನೋಡಲು ಜನರ ಗುಂಪು ಕೆರೆ ಏರಿಯಲ್ಲಿ ಜಮಾಯಿಸಿತ್ತು. ಕಾಡಾನೆಗಳು ಜಮೀನಿಗೆ ನುಗ್ಗುವ ಆತಂಕದಲ್ಲಿ ರೈತರಿದ್ದರೆ, ಕೆಲಮಂದಿ ಮಕ್ಕಳನ್ನು ಕರೆತಂದು ಆನೆಗಳನ್ನು ತೋರಿಸಿ ರಂಜನೆ ಪಡೆಯುತ್ತಿದ್ದುದು ಕಂಡು ಬಂದಿತು.

ರೈತನಿಗೆ ಗಾಯ: ಸೋಮನಾಥಪುರದ ಬಳಿ ತೋಟದಲ್ಲಿ ಹೊಲ ಉಳುಮೆ ಮಾಡುತ್ತಿದ್ದ ಸಾದರಹಳ್ಳಿಯ ರೈತ ವೀರಭದ್ರಯ್ಯ ಆನೆ ಬಂದಿದ್ದನ್ನು ಕಂಡು ಅಪಾಯದಿಂದ ರಕ್ಷಸಿಕೊಳ್ಳಲು ಓಡುತ್ತಿದ್ದ ವೇಳೆ ಬಿದ್ದು ಗಾಯಗೊಂಡಿದ್ದಾನೆ. ಈತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಂಗಳವಾರ ರಾತ್ರಿ ಕಾರ್ಯåಚರಣೆ: ಸುಳ್ಳೇರಿ ಕೆರೆಯಲ್ಲಿರುವ ಕಾಡಾನೆಗಳ ಹಿಂಡನ್ನು ಮತ್ತೆ ಕಾಡಿಗೆ ಅಟ್ಟುವ ಕಾರ್ಯåಚರಣೆ ಮಂಗಳವಾರ ರಾತ್ರಿ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆಗಳು ಬಂದ ದಾರಿಯಲ್ಲೇ ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದತೆ ಮಾಡಿಕೊಂಡಿರುವುದಾಗಿ ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *