ಗ್ರಾಮದ ಎಲ್ಲರ ಜನ್ಮ ದಿನಾಂಕವೂ ಜ.1!

ಕುಟುಂಬ ಎಲ್ಲ ಸದಸ್ಯರ ಜನ್ಮ ದಿನಾಂಕ ಒಂದೇ ಆಗಿರುವುದು ಅಸಾಧ್ಯ. ಆದರೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲರ ಜನ್ಮ ದಿನಾಂಕವೂ ಜನವರಿ 1! ಹೀಗಾಗಿ ಕಂಜಾಸಾ ಹೆಸರಿನ ಗ್ರಾಮ ಈಗ ಸುದ್ದಿಯಲ್ಲಿದೆ.

ಉತ್ತರಪ್ರದೇಶದಲ್ಲಿ ಮಕ್ಕಳ ಗಣತಿಗೆ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿತ್ತು. ಹೀಗಾಗಿ ಪ್ರಾಥಮಿಕ ಶಾಲೆ ಶಿಕ್ಷಕರು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಹಾಗೂ ಅದರ ವಿವರ ಪಡೆಯಲು ಆರಂಭಿಸಿದ್ದರು. ಇದೇ ವೇಳೆ ಅಲಹಾಬಾದ್​ನ ಗುರ್ಪರದ ಕಂಜಾಸಾ ಗ್ರಾಮಕ್ಕೂ ಶಿಕ್ಷಕರು ಭೇಟಿ ನೀಡಿದ್ದರು. ಮೊದಲು, ಒಂದೆರಡು ಕುಟುಂಬದ ಮಕ್ಕಳ ಜನ್ಮ ದಿನಾಂಕ ಒಂದೇ ರೀತಿ ಇರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದರು. ಆದರೆ ಮಕ್ಕಳು, ಯುವಕ-ಯುವತಿಯರು, ಪುರುಷರು, ಮಹಿಳೆಯರು, ಅಜ್ಜ-ಅಜ್ಜಿಯರು… ಸಹಿತ ಗ್ರಾಮದ 10 ಸಾವಿರ ನಿವಾಸಿಗಳ ಜನ್ಮ ದಿನಾಂಕವೂ ಜನವರಿ 1 ಎಂದು ನಮೂದಾಗಿತ್ತು. ಇದನ್ನು ತಿಳಿದ ಶಿಕ್ಷಕರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈಗ ಪ್ರಕರಣದ ಕುರಿತು ಪರಿಶೀಲನೆ ನಡೆಯುತ್ತಿದೆ.

ಆಧಾರ್ ಸಂಖ್ಯೆ ಪಡೆದುಕೊಳ್ಳಲು ಹೆಚ್ಚು ಹೊತ್ತು ಸರತಿಯಲ್ಲಿ ನಿಲ್ಲಬೇಕು. ಇದರಿಂದ ನಿತ್ಯದ ಕೂಲಿ ಹಾಳಾಗುತ್ತದೆ ಎಂದು ಭಾವಿಸಿದ ಅಲ್ಲಿನ ನಿವಾಸಿಗಳು ವಾಮಮಾರ್ಗದಲ್ಲಿ ಆಧಾರ್ ಪಡೆದಿದ್ದರು. ಈ ವೇಳೆ ಎಲ್ಲ ಗ್ರಾಮಸ್ಥರ ಜನ್ಮ ದಿನಾಂಕ ಜನವರಿ 1 ಎಂದು ನಮೂದಾಗಿದೆ. ಆದರೆ ಗ್ರಾಮಸ್ಥರಿಗೆ ಮಾತ್ರ ಈ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ಈ ಕುರಿತು ಮಾತನಾಡಿದ ಗ್ರಾಮದ ಮುಖ್ಯಸ್ಥ ರಾಮ್ ದುಲಾರಿ, ದೋಷ ಸರಿ ಪಡಿಸಿ, ಹೊಸ ಕಾರ್ಡ್ ಕೊಡಿಸಲು ಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *