ಗ್ರಾಮದೇವಿ ದೇಗುಲದಲ್ಲಿ ಉರುಳು ಸೇವೆ

ಯಲ್ಲಾಪುರ: ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸವೋಚ್ಚ ನ್ಯಾಯಾಲಯದಲ್ಲಿ ಅರಣ್ಯವಾಸಿಗಳ ಪರವಾಗಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಹಾಗೂ ಸವೋಚ್ಚ ನ್ಯಾಯಾಲಯದ ತೀರ್ಪು ಅರಣ್ಯವಾಸಿಗಳ ಪರವಾಗಿ ಬರಲೆಂದು ಪ್ರಾರ್ಥಿಸಿ ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ವತಿಯಿಂದ ಪಟ್ಟಣದಲ್ಲಿ ರ‍್ಯಾಲಿ ಹಾಗೂ ಉರುಳುಸೇವೆ ನಡೆಸಲಾಯಿತು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಅರಣ್ಯ ಅತಿಕ್ರಮಣದಾರರು ಹೋರಾಟ ವೇದಿಕೆಯ ಅಧ್ಯಕ್ಷ ಎ. ರವೀಂದ್ರನಾಥ ನಾಯ್ಕ ನೇತೃತ್ವದಲ್ಲಿ ಪಟ್ಟಣದ ವೆಂಕಟ್ರಮಣ ಮಠದಿಂದ ಗ್ರಾಮದೇವಿ ದೇವಸ್ಥಾನದವರೆಗೆ ರ‍್ಯಾಲಿ ನಡೆಸಿದರು. ನಂತರ ಗ್ರಾಮದೇವಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಆವಾರದಲ್ಲಿ ಉರುಳುಸೇವೆ ಸಲ್ಲಿಸಿದರು.

ಇದಕ್ಕೂ ಮುನ್ನ ವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಎ. ರವೀಂದ್ರ ನಾಯ್ಕ, ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ತೋರದೇ ಇರುವ ಜನಪ್ರತಿನಿಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಕಳೆದ 25 ವರ್ಷಗಳಿಂದ ಹೋರಾಟದಲ್ಲಿ ತೊಡಗಿದ್ದು, ಯಾವುದೇ ಆರೋಪಗಳಿಗೆ ತಲೆಕೆಡಿಸಿಕೊಂಡಿಲ್ಲ. ಚುನಾವಣೆಯಲ್ಲಿ ಸೋತರೂ ಕ್ಷೇತ್ರವನ್ನು ಬಿಟ್ಟು ಹೋಗದೇ, ಕುಗ್ಗದೇ ಹೋರಾಟದಲ್ಲಿ ತೊಡಗಿದ್ದೇನೆ. ಕೊನೆಯ ಉಸಿರಿರುವವರೆಗೂ ಹೋರಾಟ ನಡೆಸುವುದು, ಅತಿಕ್ರಮಣದಾರರಿಗೆ ನ್ಯಾಯ ಕೊಡಿಸುವುದು ನನ್ನ ಗುರಿ ಎಂದರು.

ಸ್ಥಳೀಯ ಪ್ರಮುಖರಾದ ಭೀಮಶಿ ವಾಲ್ಮೀಕಿ, ಮಂಜುನಾಥ ಶಾಸ್ತ್ರಿ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಬಂದ ಅತಿಕ್ರಮಣದಾರರು ಭಾಗವಹಿಸಿದ್ದರು.

ಇಲ್ಲಿನ ಶಾಸಕರು ಹಾಗೂ ಸಂಸದರು ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಡಿಸುವ ಬಗೆಗೆ ಪ್ರಯತ್ನಿಸುತ್ತಿಲ್ಲ. ಕ್ಷೇತ್ರದಲ್ಲಿ ಅತಿಕ್ರಮಣದಾರರ ಸಮಸ್ಯೆ, ಮಳೆಹಾನಿ, ರಸ್ತೆ ಅವ್ಯವಸ್ಥೆಯಂತಹ ಗಂಭೀರ ಸಮಸ್ಯೆಗಳಿದ್ದರೂ, ಶಾಸಕರು ಖುರ್ಚಿ ಆಸೆಗಾಗಿ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ. ಎ. ರವೀಂದ್ರನಾಥ ನಾಯ್ಕ, ಅತಿಕ್ರಮಣದಾರರ ಹೋರಾಟ ವೇದಿಕೆಯ ಅಧ್ಯಕ್ಷ

ರೆಸಾರ್ಟ್ ರಾಜಕಾರಣ: ಕ್ಷೇತ್ರದ ಅಭಿವೃದ್ಧಿ ಕುರಿತು ಚುನಾವಣೆಯಲ್ಲಿ ನೂರಾರು ಆಶ್ವಾಸನೆ ನೀಡಿದ್ದ ಶಿವರಾಮ ಹೆಬ್ಬಾರ್ ಅವರು ಈಗ ಅಧಿಕಾರದ ಆಸೆಗಾಗಿ ಮುಂಬೈಗೆ ಹೋಗಿ ರೆಸಾರ್ಟ್ ರಾಜಕಾರಣ ನಡೆಸುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು

Leave a Reply

Your email address will not be published. Required fields are marked *