ಗ್ರಾಮದೇವತೆ ಹಬ್ಬ ಆಚರಿಸಿದ ಹೆಮ್ಮೆತ್ತಾಳು ಗ್ರಾಮಸ್ಥರು

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿಹೋಗಿದ್ದ ಹೆಮ್ಮೆತ್ತಾಳು ಗ್ರಾಮಸ್ಥರು ಮಂಗಳವಾರ ಗ್ರಾಮದೇವತೆ ಹಬ್ಬ ಆಚರಿಸಿದರು.

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಬಹುತೇಕ ಪ್ರದೇಶ ಕೊಚ್ಚಿಹೋಗಿತ್ತು. ಅದರೆ, ಗ್ರಾಮದೇವತೆ ಚಾಮುಂಡೇಶ್ವರಿ ದೇಗುಲಕ್ಕೆ ಯಾವುದೇ ಹಾನಿಯಾಗಿರಲಿಲ್ಲ.

ಮಂಗಳವಾರ ಗ್ರಾಮಸ್ಥರೆಲ್ಲ ಸೇರಿ ದೇವಿಯ ಅರಾಧನೆ ಮಾಡಿದರು. ಮುಂದೆಂದೂ ಈ ರೀತಿಯ ವಿಕೋಪ ಉಂಟಾಗದಂತೆ ಪ್ರಾರ್ಥಿಸಿದರು. ದೇಗುಲ ಆವರಣದಲ್ಲಿರುವ ಗುಳಿಗಪ್ಪ ಹಾಗೂ ನಾಗದೇವರಿಗೆ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿತು. ದೇವಳದ ಪೂಜಾರಿ ಪಿ.ಪಿ.ಗಂಗಾಧರ ಪೂಜಾ ಕಾರ್ಯ ನೆರವೇರಿಸಿದರು.

ಸನ್ಮಾನ: ಪ್ರಕೃತಿ ವಿಕೋಪ ಸಂದರ್ಭ ಭೂಕುಸಿತಕ್ಕೆ ಸಿಲುಕಿ ಅಳಿದುಳಿದ ಮನೆಯೊಳಗೆ ಜೀವನ್ಮರಣ ಸ್ಥಿತಿಯಲ್ಲಿದ್ದ ಚಂದೂ-ಗೋಪಾಲ ದಂಪತಿಯನ್ನು ರಕ್ಷಿಸುವಲ್ಲಿ ಜೀವದ ಹಂಗು ತೊರೆದು ಶ್ರಮಿಸಿದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಅವರನ್ನು ಗೌರವಿಸಲಾಯಿತು. ಕಿಶೋರ್ ಅವರ ಧೈರ್ಯ ಹಾಗೂ ಪ್ರಯತ್ನವನ್ನು ಗ್ರಾಮಸ್ಥರು ಶ್ಲಾಘಿಸಿದರು. ಈ ವೇಳೆ ತನ್ನ ಅನುಭವ ಹಂಚಿಕೊಂಡ ಕಿಶೋರ್, ಎಲ್ಲರೂ ಒಂದಾಗಿರೋಣ, ಮುಂದೆಂದೂ ಇಂತಹ ಘಟನೆ ಮರುಕಳಿಸದಿರಲಿ ಎಂದು ಆಶಿಸಿದರು.

ದೇವಾಲಯ ಸಮಿತಿ ಅಧ್ಯಕ್ಷ ಚಂದೂಗೋಪಾಲ, ಮಾಜಿ ಅಧ್ಯಕ್ಷರಾದ ಕೊಡಿಯಡ್ಕ ಕೃಷ್ಣಪ್ಪ, ಬಿ.ಎಸ್.ರುಕ್ಮಯ್ಯ, ಪಿ.ಪಿ.ಗಂಗಾಧರ, ಗ್ರಾಮಸ್ಥ-ಪತ್ರಕರ್ತ ಕುಡೆಕಲ್ ಸಂತೋಷ್ ಇತರರು ಪಾಲ್ಗೊಂಡಿದ್ದರು.