ಗ್ರಾಪಂ ಮಟ್ಟದಲ್ಲೂ ಕೆಡಿಪಿ ಸಭೆ

ಲಕ್ಷ್ಮೇಶ್ವರ: ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಇನ್ನು ಮುಂದೆ ಗ್ರಾಪಂ ಮಟ್ಟದಲ್ಲೂ ನಡೆಯಲಿದೆ. ಸರ್ಕಾರ ಅಧಿಕಾರ ವಿಕೇಂದ್ರೀಕರಣದ ಮೂಲಕ ತನ್ನ ಕಾರ್ಯಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ನಿರ್ವಹಣೆಗಾಗಿ ಕೆಡಿಪಿ ಸಭೆಗಳನ್ನು ಗ್ರಾಪಂ ಮಟ್ಟದಲ್ಲಿ ನಡೆಸುವಂತೆ ಆದೇಶಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ

ಗ್ರಾಮ ಸ್ವರಾಜ್ಯ ಮತ್ತು ಪಂಚಾಯತರಾಜ್ ಅಧಿನಿಯಮದ ಅನ್ವಯ ಸರ್ಕಾರ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಕ್ರಿಯಾಯೋಜನೆ ಸಿದ್ಧಪಡಿಸಲು ಜಿಲ್ಲೆ ಮತ್ತು ತಾಲೂಕಿಗೆ ಒಂದೊಂದು ಜಿಲ್ಲಾ ಯೋಜನಾ ಸಮಿತಿ, ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳನ್ನು ಈಗಾಗಲೇ ರಚಿಸಿದೆ.

ಹೊಸ ಆದೇಶದನ್ವಯ ಇನ್ನು ಮುಂದೆ ತ್ರೈಮಾಸಿಕ ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು. ಉಪಾಧ್ಯಕ್ಷರು ಗ್ರಾಪಂನ ಎಲ್ಲಾ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಪಶು ಸಂಗೋಪನೆ ಮತ್ತು ಹೈನುಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಗ್ರಾಮೀಣ ರಸ್ತೆ ಮತ್ತು ಸೇತುವೆ, ಗ್ರಾಮೀಣ ವಿದ್ಯುದ್ದೀಕರಣ, ವಿದ್ಯುತ್ ಶಕ್ತಿ ಮತ್ತು ಇಂಧನ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ, ಪ್ರವಾಸೋದ್ಯಮ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಖಾದಿ ಗ್ರಾಮೋದ್ಯೋಗ, ವಸತಿ, ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಸೇರಿ ಹಲವು ಇಲಾಖೆಗಳ ಗ್ರಾಪಂ ಅಥವಾ ಹೋಬಳಿ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಇದರ ಸದಸ್ಯರನ್ನಾಗಿಸಲು ಅಧಿಕಾರ ನೀಡಲಾಗಿದೆ.

ಕೆಡಿಪಿ ಸಭೆಗಳನ್ನು ತ್ರೖೆಮಾಸಿಕವಾಗಿ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲು ನಿರ್ದೇಶಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಮೊದಲೇ ಹೇಳಿದಂತೆ ಗ್ರಾಪಂ ಅಧ್ಯಕ್ಷರು ವಹಿಸಬೇಕು. ಒಂದೊಮ್ಮೆ ಅಧ್ಯಕ್ಷರು ಗೈರಾದಲ್ಲಿ ಉಪಾಧ್ಯಕ್ಷರು ವಹಿಸಬಹುದು. ಇವರಿಬ್ಬರೂ ಇಲ್ಲದಿದ್ದಾಗ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬಹುದಾಗಿದೆ.

ನಿಜವಾದ ಗ್ರಾಮ ಸ್ವರಾಜ್ ಗ್ರಾಮ ಸರ್ಕಾರ ಎಂಬ ಕಲ್ಪನೆ ಅಕ್ಷರಶಃ ಜಾರಿಗೊಳ್ಳುವಂತೆ ಮಾಡಲು ಉತ್ತಮ ನಿರ್ಧಾರ ಕೈಗೊಂಡು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ತ್ರೈಮಾಸಿಕ ಕೆಡಿಪಿ ಸಭೆಯನ್ನು ಗ್ರಾಪಂ ಮಟ್ಟದಲ್ಲಿ ನಡೆಸಲು ಕೈಗೊಂಡ ಸರ್ಕಾರದ ಕ್ರಮ ಅತ್ಯಂತ ಸ್ವಾಗತಾರ್ಹ.

| ಎಸ್.ಪಿ. ಬಳಿಗಾರ ಜಿಪಂ ಅಧ್ಯಕ್ಷ, ಗದಗ

ಗ್ರಾಪಂ ಮಟ್ಟದಲ್ಲಿ ಕೆಡಿಪಿ ಸಭೆಗಳನ್ನು ನಡೆಸುವುದರಿಂದ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದಂತಾಗುತ್ತದೆ. ಆದರೆ, ಸಭೆಗಳು ಕಾಟಾಚಾರಕ್ಕಾಗದೇ ಪರಿಣಾಮಕಾರಿಯಾಗಬೇಕು.

| ಗಣೇಶ ನಾಯಕ ಅಡರಕಟ್ಟಿ ಗ್ರಾಪಂ ಅಧ್ಯಕ್ಷ

Leave a Reply

Your email address will not be published. Required fields are marked *