ಗ್ರಾಪಂ ನೌಕರರಿಂದ ಪ್ರತಿಭಟನೆ

ಹೊಳೆಆಲೂರ:ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಾರ್ವಿುಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನವು ಸರ್ಕಾರದಿಂದಲೇ ಪಾವತಿಯಾಗಬೇಕೆಂಬ ಆದೇಶ ಹೊರಡಿಸಿ, ಒಂದು ವರ್ಷ ಕಳೆದರೂ ಸೂಕ್ತವಾಗಿ ಜಾರಿಗೊಳ್ಳದಿರುವುದರಿಂದ ಗ್ರಾ.ಪಂ. ನೌಕರರ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಧರಣಿ ನಡೆಯಿತು.

ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು, ಗಟಾರು, ರಸ್ತೆ ಸ್ವಚ್ಛತೆ, ಕಸ ಗೂಡಿಸುವಿಕೆ ಹಾಗೂ ಇತರ ಕೆಲಸಕ್ಕೆ ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ನೌಕರರ ಬಗೆಗೆ ಸರ್ಕಾರವು ಕಾಳಜಿ ವಹಿಸುತ್ತಿಲ್ಲ. ಕಾರ್ವಿುಕ ಒಕ್ಕೂಟದ ಸುದೀರ್ಘ ಹೋರಾಟದ ನಂತರ ಮಾ. 2018ರಂದು ಸರ್ಕಾರವು ಗ್ರಾ.ಪಂ. ನೌಕರರಿಗೆ ಪ್ರತಿ ತಿಂಗಳು ಇಲಾಖೆಯಿಂದಲೇ ವೇತನ ನೀಡಬೇಕೆಂದು ಆದೇಶ ಮಾಡಿತು. ಆದರೆ, ಆದೇಶ ಜಾರಿಗೊಳಿಸಿ ಒಂದು ವರ್ಷ ಗತಿಸಿದರೂ ಅನುಷ್ಠಾನವಾಗುತ್ತಿಲ್ಲ. ಹೀಗಾಗಿ, ಗ್ರಾಪಂ ನೌಕರರ ಬೇಡಿಕೆಗಳನ್ನು ಸರ್ಕಾರವು ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಸಂಘದ ಉಪಾಧ್ಯಕ್ಷ ಆರ್.ಬಿ. ದೂಡ್ಡಮನಿ, ಕಾರ್ಯದರ್ಶಿ ಯಚ್ಚರಪ್ಪ ಚಲವಾದಿ, ಮೌಲಾರಿ ಚಲವಾದಿ, ವಿಜಯಕುಮಾರ ಗದಗ, ವಿರೂಪಾಕ್ಷಿ ಗಂಟಿ, ಈರಣ್ಣ ಹರ್ತಿ, ಸುರೇಶ ಎಲಿಗಾರ, ಹನುಮಂತ ಹಾದಿಮನಿ, ವಾಸು ಪವಾರ, ಪ್ರಕಾಶ ಆಲೂರ, ನೀಲವ್ವ ಗಂಟಿ, ಮುಡಿಯವ್ವ ಚಲವಾದಿ, ಸುಜಾತ ದೂಡ್ಡಮನಿ, ಶಿವಕ್ಕ ಚವಡಿ, ಗುರುಬಸವ್ವ ಚಲವಾದಿ, ಮುಂಜುಳಾ ಚಲವಾದಿ, ನೀಲವ್ವ ಮೂಲಿಮನಿ, ರೇಖಾ ಆಲೂರ, ಶಿವಾನಂದ ಗಾಣಿಗೇರ, ರವಿ ಪವಾಡಶಟ್ಟಿ, ಪರಶುರಾಮ ಚಲವಾದಿ, ಬಸವರಾಜ ಕಲ್ಲಮ್ಮನ್ನವರ ಭಾಗವಹಿಸಿದ್ದರು.