ಗ್ರಂಥಾಲಯ ಕರ ಪಾವತಿಸಿ

ಕೋಲಾರ: ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ 3.31 ಕೋಟಿ ರೂ. ಗ್ರಂಥಾಲಯ ಕರವನ್ನು ಪಾವತಿಸುವಂತೆ ಡಿಸಿ ಜೆ. ಮಂಜುನಾಥ್ ನಗರಸಭೆ ಪೌರಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 63ನೇ ಸಭೆಯಲ್ಲಿ ಮಾತನಾಡಿ, ಕೋಟ್ಯಂತರ ರೂ. ಸೆಸ್ ಬಾಕಿ ಉಳಿಸಿಕೊಂಡರೆ ಗ್ರಂಥಾಲಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾದರೂ ಹೇಗೆ? ಶೀಘ್ರ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದರು.

ಹಿಂದಿನ ಡಿಸಿ ಡಿ.ಕೆ.ರವಿ ಅವಧಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಯುತ್ತಿದ್ದ ರೀತಿಯಲ್ಲೇ ವಿವಿಧ ಇಲಾಖೆಗಳು ಮತ್ತು ಕೈಗಾರಿಕೆಗಳ ಸಮುದಾಯ ಅಭಿವೃದ್ಧಿ ನಿಧಿ ಬಳಸಿಕೊಂಡು ತರಬೇತಿ ಆರಂಭಿಸಬೇಕು ಹಾಗೂ ಮನೆ ಬಾಗಿಲಿಗೆ ಗ್ರಂಥಾಲಯ ಪುಸ್ತಕ ತಲುಪಿಸುವ, ಓದುಗರ ಸಂಖ್ಯೆ ಹೆಚ್ಚಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಲಹೆ ನೀಡಿದರು.

ಕೋಲಾರ ನಗರಸಭೆಯಿಂದ ಬಾಕಿ ಇರುವ 7. 49 ಲಕ್ಷ ರೂ.ಗಳನ್ನು ವಾರದೊಳಗೆ ಪಾವತಿಸುವುದಾಗಿ ಲೆಕ್ಕಾಧಿಕಾರಿ ಗೀತಾ ತಿಳಿಸಿದರೆ, ಪ್ರತಿ ತಿಂಗಳು 1ರಿಂದ 2 ಲಕ್ಷ ರೂ. ನಂತೆ ಪಾವತಿಸಿ ಬಾಕಿ ಚುಕ್ತಾ ಮಾಡುವುದಾಗಿ ಬಂಗಾರಪೇಟೆ, ಮುಳಬಾಗಿಲು ಸ್ಥಳೀಯ ಸಂಸ್ಥೆ ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸುಸಜ್ಜಿತ ಹೊಸ ಕಟ್ಟಡ, ಡಿಜಿಟಲ್ ಗ್ರಂಥಾಲಯ, ಖಾಲಿ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ವಿುಸಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ, ಕೋಲಾರದ ಜಯನಗರ ಸಮುದಾಯ ಮಕ್ಕಳ ಗ್ರಂಥಾಲಯಕ್ಕೆ ಕಟ್ಟಡ, ಮಾಲೂರಿನ ಲಕ್ಕೂರು ಗ್ರಾಪಂ ಗ್ರಂಥಾಲಯದಲ್ಲಿ ಜಿಪಂ ಅನುದಾನದಿಂದ ಕಟ್ಟಡ ನಿರ್ವಿುಸಲು ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಆಯವ್ಯಯ ಮಂಡಿಸಲಾಗಿ 10.92 ಲಕ್ಷ ರೂಪಾಯಿಗಳ ಪ್ರಾರಂಭಿಕ ಶಿಲ್ಕು, 1.32 ಕೋಟಿ ರೂ.ಗಳ ಆಯವ್ಯಯ ಸೇರಿ ಒಟ್ಟು 1.43 ಕೋಟಿ ರೂ.ಗಳ ಆದಾಯ ಮತ್ತು 1.15 ಕೋಟಿ ರೂ. ಹೋಗಿ 28.17 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದೆ.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಉಪ ನಿರ್ದೇಶಕ ದಿವಾಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ. ರಂಗಸ್ವಾಮಿ ಹಾಜರಿದ್ದರು.

Leave a Reply

Your email address will not be published. Required fields are marked *