ಗ್ರಂಥಾಲಯಗಳ ಗತಿ, ಮುನ್ನೋಟವಿಲ್ಲದ ದುಸ್ಥಿತಿ

ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕಾಗಿದೆ. ಹಳ್ಳಿಯ ರೈತನೊಬ್ಬನಿಗೆ ಅಗತ್ಯವಾಗುವ ಮಾಹಿತಿಗಳು ಗ್ರಂಥಾಲಯಗಳಲ್ಲಿ ಸಿಗುವಂತಾದಲ್ಲಿ ಅವು ಜನಸ್ನೇಹಿಯಾಗಬಹುದು. ಬೇಸಾಯ, ಜಾನುವಾರು, ಆರೋಗ್ಯ, ಸರ್ಕಾರದ ಸವಲತ್ತುಗಳು ಇತ್ಯಾದಿ ಸಂಗತಿಗಳ ಮಾಹಿತಿ ಅಲ್ಲಿ ಸಿಕ್ಕಲ್ಲಿ ಅದರಿಂದ ಜನಶಿಕ್ಷಣವೂ ಆಗುತ್ತದೆ.

 ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’- ಇದು ರೂಢಿಯಲ್ಲಿರುವ ಪ್ರಸಿದ್ಧವಾಕ್ಯ. ನಮ್ಮ ಜನನಾಯಕರು, ಹಿರಿಯರು, ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡವರು ಮತ್ತೆಮತ್ತೆ ವೇದಿಕೆಗಳಲ್ಲಿ, ಅದರಲ್ಲೂ ಶಾಲಾ ಕಾಲೇಜುಗಳ ಅಂಗಳದಲ್ಲಿ ಗಟ್ಟಿದನಿಯಲ್ಲಿ ಹೇಳುವ ಮಾತು. ಇದು ನಿಜವೂ ಹೌದು. ಎಳೆಯ ತಲೆಮಾರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿದಾಗ ಮಾತ್ರ ದೇಶಕ್ಕೆ ಭವಿಷ್ಯ ವುಂಟು. ಹೀಗಾಗಿಯೇ ವಿವೇಕಾನಂದರು ತರುಣ ಜನಾಂಗದ ಸದೃಢ ದೇಹ ಹಾಗೂ ಚುರುಕು ಮನಸ್ಸಿನ ಬಗ್ಗೆ ಹೆಚ್ಚು ಒತ್ತುಕೊಟ್ಟು ಹೇಳುತ್ತಿದ್ದರು. ಮಕ್ಕಳ ದೇಹ ಮತ್ತು ಮನಸ್ಸುಗಳ ಆರೋಗ್ಯವನ್ನು ಕಾಪಾಡುವುದು ಮಕ್ಕಳ ಬಗೆಗಿನ ಮಮತೆ ಮಾತ್ರವಲ್ಲ, ದೇಶ ಕಟ್ಟುವ ಕಾಯಕವೂ ಹೌದು. ಆದ್ದರಿಂದಲೇ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳು ದೇಶದ ಬೆಳವಣಿಗೆಯ ದೃಷ್ಟಿಯಿಂದ ಪ್ರಮುಖ ವಲಯಗಳು. ಬ್ರಿಟಿಷರು ನಮ್ಮನ್ನು ರಾಜಕೀಯವಾಗಿ ಆಕ್ರಮಣ ಮಾಡಿದ್ದು ಸರಿಯೇ! ಆದರೆ ನಮ್ಮ ಮನಸ್ಸುಗಳನ್ನು ಅಧೀನಗೊಳಿಸಿಕೊಂಡದ್ದು ಶಿಕ್ಷಣ ಹಾಗೂ ಆರೋಗ್ಯ ಈ ಎರಡು ವಲಯಗಳ ಮೇಲೆ ಅಧಿಪತ್ಯ ಸ್ಥಾಪಿಸುವುದರ ಮೂಲಕ. ಈಗಲೂ ನಾವು ಅದರಿಂದ ಪಾರಾಗಿ ಸ್ವತಂತ್ರರಾಗಿಲ್ಲ. ನಮ್ಮ ಕಾಲದ ದುರಂತವೆಂದರೆ ಸೇವಾಕ್ಷೇತ್ರಗಳಾಗಬೇಕಿದ್ದ ಇವೆರಡೂ ಉದ್ಯಮವಾಗಿ ರೂಪಾಂತರಗೊಂಡು ವಾಣಿಜ್ಯೀಕರಣಗೊಂಡಿದ್ದು. ಪರಿಣಾಮ ಯಾವುದಕ್ಕೆ ಪ್ರಾಮುಖ್ಯತೆ ಸಿಗಬೇಕೋ ಅದಕ್ಕೆ ಒತ್ತು ಬೀಳದೆ ಆರ್ಥಿಕ ಲಾಭವೇ ಮುಖ್ಯವಾಗಿ ಮನುಷ್ಯನ ಘನತೆಯೇ ಕುಸಿಯುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ.

ಅಮೆರಿಕನ್ನರ ನಾಗರಿಕ ಪ್ರಜ್ಞೆ: ಇತ್ತೀಚೆಗಿನ ನನ್ನ ಅಮೆರಿಕ ಪ್ರವಾಸದಲ್ಲಿ ಮೂರು ಮುಖ್ಯ ಸಂಗತಿಗಳು ನನ್ನ ಗಮನ ಸೆಳೆದವು. ಮೊದಲನೆಯದು ಅಲ್ಲಿಯ ನಾಗರಿಕ ಪ್ರಜ್ಞೆ. ಸಾಮಾನ್ಯವಾಗಿ ಅವರು ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದಕ್ಕೆ ಎರಡು ಕಾರಣಗಳಿವೆ. ಒಂದು- ಅದು ಅವರ ಬದುಕಿನ ದಿನನಿತ್ಯದ ಸಹಜ ನಡವಳಿಕೆಯೆಂಬಂತೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸುತ್ತಾರೆ. ಎರಡು- ಹಾಗೆ ನಿಯಮಗಳನ್ನು ಮೀರಿದರೆ ಅದಕ್ಕೆ ತೆರಬೇಕಾದ ಬೆಲೆಯೂ ದುಬಾರಿಯಾಗಿರುತ್ತದೆ. ಎರಡನೆಯದು ಪ್ರಕೃತಿಯನ್ನು ಅದರ ಸಹಜ ಸ್ಥಿತಿಯಲ್ಲಿ ಕಾಪಿಡುವ ಅವರ ದೂರದೃಷ್ಟಿಯ ಯೋಜನೆಗಳು. ಈಗಾಗಲೇ ಅವರ ಪ್ರಕೃತಿಪ್ರೀತಿಯನ್ನು ಇದೇ ಅಂಕಣದಲ್ಲಿ ರ್ಚಚಿಸಿದ್ದೇನೆ. ಮೂರನೆಯದು ಗ್ರಂಥಾಲಯಗಳು. ಈಗ ಗ್ರಂಥಾಲಯಗಳ ಬಗ್ಗೆ ಕೆಲವು ವಿಚಾರಗಳನ್ನು ಗಮನಿಸಬಹುದು.

ಅದೊಂದು ಎಂಟು ಅಂತಸ್ತಿನ ವಿಸ್ತಾರವಾದ ಕಟ್ಟಡ. ಪ್ರತಿ ಅಂತಸ್ತಿನಲ್ಲೂ ಸಾಲಾಗಿ ಜೋಡಿಸಿದ ಪುಸ್ತಕಗಳ ಕಪಾಟುಗಳು; ಎಲ್ಲ ಅಂತಸ್ತುಗಳಲ್ಲೂ ಸುಮಾರು ನೂರು ಜನರು ಕುಳಿತು ಓದಲು ಅನುಕೂಲವಾಗುವಂತೆ ಮೇಜು ಕುರ್ಚಿಗಳ ವ್ಯವಸ್ಥೆ. ಕಂಪ್ಯೂಟರ್ ಬಳಸುವವರಿಗೆ ಅಗತ್ಯ ಅನುಕೂಲ. ಎಲ್ಲ ಅಂತಸ್ತುಗಳಲ್ಲೂ ಶುಚಿಯಾದ ರೆಸ್ಟ್ ರೂಂಗಳು. ಯಾವ ಪುಸ್ತಕ ಎಲ್ಲಿದೆ ಎಂಬ ಬಗ್ಗೆ ಕಂಪ್ಯೂಟರ್​ಗಳಲ್ಲಿ ಮಾಹಿತಿ. ನೀವು ಸುಲಭವಾಗಿ ನಿಮಗೆ ಬೇಕಾದ ಪುಸ್ತಕಗಳನ್ನು ಕಂಪ್ಯೂಟರ್ ಸೂಚಿಸಿದ ಕಪಾಟಿನ ಬಳಿ ಹೋಗಿ ಪಡೆಯಬಹುದು. ಆ ಪುಸ್ತಕ ಖಂಡಿತವಾಗಿಯೂ ಅಲ್ಲಿರುತ್ತದೆ. ನಿಮಗೆ ಬೇಕಾದ ಪುಸ್ತಕ ಆ ಲೈಬ್ರರಿಯಲ್ಲಿ ಇಲ್ಲದಿದ್ದರೆ ಬೇರೆ ಲೈಬ್ರರಿಯಿಂದ ಅದನ್ನು ತರಿಸಿಕೊಡುತ್ತಾರೆ. ಕೆಳ ಅಂತಸ್ತಿನಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗ. ಅಲ್ಲಿ ಅವರಿಗೆ ಆಡಲು ಬೇಕಾದ ಸಲಕರಣೆಗಳು. ಆಟವಾಡಲು ಸಾಕಷ್ಟು ಜಾಗ. ವಿವಿಧ ವಯೋಮಾನದ ಮಕ್ಕಳಿಗೆ ತಕ್ಕಂತೆ ಪುಸ್ತಕಗಳು; ಪಕ್ಕದಲ್ಲಿ ಸುಸಜ್ಜಿತ ಕ್ಯಾಂಟೀನ್. ನೀವು ಕಾಫಿ ಪಡೆದು ಲೈಬ್ರರಿಯ ಒಳಹೋಗಿ ಕಾಫಿ ಕುಡಿಯುತ್ತಲೇ ಪುಸ್ತಕ ಓದಬಹುದು. ಪುಸ್ತಕ ಪಡೆಯಲು, ಹಿಂತಿರುಗಿಸಲು ಸ್ವಯಂಚಾಲಿತ ಯಂತ್ರಗಳು. ಒಂದು ಸಲಕ್ಕೆ ನೀವು ಎಪ್ಪತ್ತು ಪುಸ್ತಕಗಳನ್ನು ಮನೆಗೆ ಒಯ್ಯಬಹುದು. ಜೊತೆಗೆ ಇ-ಪುಸ್ತಕಗಳು, ಕ್ಯಾಸೆಟ್​ಗಳು, ಆಡಿಯೋ ವಿಶ್ಯುಯಲ್​ಗಳು ಈ ಗ್ರಂಥಾಲಯದಲ್ಲಿವೆ. ಇದು ನಾನು ಅಲ್ಲಿ ಭೇಟಿನೀಡಿದ ಮಾರ್ಟಿನ್ ಲೂಥರ್ ಕಿಂಗ್ ಲೈಬ್ರರಿಯ ಚಿತ್ರ. ನಾನು ಅಲ್ಲಿ ಸ್ಟಾನ್​ಫರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು ಇಪ್ಪತ್ತು ಗ್ರಂಥಾಲಯಗಳಿವೆ. ಪ್ರಧಾನ ಗ್ರಂಥಾಲಯವಾದ ‘ಗ್ರೀನ್ ಲೈಬ್ರರಿ’ಯೂ ಸೇರಿದಂತೆ ಎಲ್ಲ ಲೈಬ್ರರಿಗಳಲ್ಲಿ ಒಟ್ಟು 90 ಲಕ್ಷ ಪುಸ್ತಕಗಳಿವೆ. 15 ಲಕ್ಷ ಇ-ಪುಸ್ತಕಗಳಿವೆ. ಪುಸ್ತಕ ಸಂಸ್ಕೃತಿಯನ್ನು ಅಲ್ಲಿ ಪೋಷಿಸುತ್ತಿರುವ ಬಗೆಯಿದು.

ಗ್ರಂಥಾಲಯಗಳ ಸ್ವರೂಪ ಬದಲಿಸಬಹುದು: ನಮ್ಮ ಯಾವ ಲೈಬ್ರರಿಯಲ್ಲಿ ಈ ಬಗೆಯ ಅನುಕೂಲಗಳಿವೆ? ಅವರಿಗೆ ಸಾಧ್ಯವಾದದ್ದು ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಹೊಸ ತಲೆಮಾರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನಾವು ಯಾವ ರೀತಿ ಅವರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇವೆ? ನಮ್ಮ ಸರ್ಕಾರಕ್ಕೆ ಇದರ ಅರಿವಿಲ್ಲವೆಂದಲ್ಲ- ಅದಕ್ಕಾಗಿಯೇ ಸರ್ಕಾರ ಸ್ಥಳೀಯ ತೆರಿಗೆಯ ರೂಪದಲ್ಲಿ ಆರೋಗ್ಯ ಹಾಗೂ ಗ್ರಂಥಾಲಯ ಸೆಸ್ ಎಂದು ಶೇಕಡ 6ರಷ್ಟು ಹಣವನ್ನು ಸಂಗ್ರಹಿಸುತ್ತದೆ. ಆದರೆ ಹೀಗೆ ಸಂಗ್ರಹಿಸಿದ ಹಣ ಎಲ್ಲಿ ಹೋಗುತ್ತದೆ? ಸದ್ಬಳಕೆಯಾದರೆ ನಮ್ಮ ಗ್ರಂಥಾಲಯಗಳ ಸ್ವರೂಪವೇ ಬದಲಾಗಿಬಿಡುತ್ತದೆ.

ಸರ್ಕಾರ ಸಂಗ್ರಹಿಸುವ ಆರೋಗ್ಯ ಸೆಸ್ ನೇರವಾಗಿ ಆ ಇಲಾಖೆಗೆ ಹೋಗುತ್ತದೆ. ಆ ಇಲಾಖೆಯೇ ಆ ಹಣದ ನಿರ್ವಹಣೆ ಮಾಡುತ್ತದೆ. ಆದರೆ ಗ್ರಂಥಾಲಯ ಸೆಸ್ ಆ ಇಲಾಖೆಗೆ ನೇರವಾಗಿ ಬರುವುದಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಹೋಗುತ್ತದೆ. ಅಲ್ಲಿಂದ ಆ ಹಣ ಇಲಾಖೆಗೆ ಬರುವುದೇ ಇಲ್ಲ. ನಮ್ಮ ಜನಪ್ರತಿನಿಧಿಗಳ ಆದ್ಯತೆಗಳೇ ಬೇರೆ. ಹೀಗೆ ಸಂಗ್ರಹವಾಗಿರುವ ಗ್ರಂಥಾಲಯ ಸೆಸ್ ಸುಮಾರು 480 ಕೋಟಿ ರೂಪಾಯಿಗಳು ಎಂದು ಒಂದು ಅಂದಾಜು. ಇಷ್ಟು ಹಣ ಗ್ರಂಥಾಲಯ ಇಲಾಖೆಗೆ ವರ್ಗಾವಣೆಗೊಂಡರೆ ಏನೆಲ್ಲ ಅನುಕೂಲ ಕಲ್ಪಿಸಬಹುದು ಯೋಚಿಸಿ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಸ್ತಕಪ್ರಿಯರು. ಬಹುಶಃ ಈ ಸಂಗತಿ ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಬಂದಿದ್ದರೆ ತಕ್ಷಣ ಅವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದರೆಂದೇ ನನ್ನ ತಿಳಿವಳಿಕೆ. ಈಗಲೂ ಈ ಲೇಖನದ ಮೂಲಕ ಅವರಲ್ಲಿ ನನ್ನ ಮನವಿಯೆಂದರೆ ಆರೋಗ್ಯ ಸೆಸ್ ರೀತಿಯಲ್ಲಿಯೇ ಗ್ರಂಥಾಲಯ ಸೆಸ್ ಸಹ ನೇರವಾಗಿ ಆ ಇಲಾಖೆಗೆ ಹೋಗಲಿ. ಅದಕ್ಕೆಂದೇ ಮೀಸಲಾದ ಹಣ ಬೇರೆ ಉದ್ದೇಶಗಳಿಗೆ ಬಳಕೆಯಾಗುವುದು ಬೇಡ. ಈಗ ಈ ಇಲಾಖೆಗೆ ಬರಬೇಕಾದ 480 ಕೋಟಿ ರೂ. ಹಣವನ್ನು ತಕ್ಷಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಿ. ಹಾಗೆ ನೋಡಿದರೆ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ‘ಮನೆಗೊಂದು ಶೌಚಾಲಯ, ಊರಿಗೊಂದು ಗ್ರಂಥಾಲಯ’ ಎಂದು ಘೊಷಿಸಿದ್ದರು. ಈ ಪರಿಕಲ್ಪನೆಯೇ ಆರೋಗ್ಯಕರ ಸಮಾಜವನ್ನು ನಿರ್ವಿುಸುವ ಆಶಯವುಳ್ಳಂಥದ್ದು. ಸಮಾಜವಾದಿ ಚಿಂತನೆಯ ಪಟೇಲರು ಲೋಹಿಯಾರಿಂದ ಪ್ರೇರಿತರಾಗಿ ಈ ಬಗೆಯಲ್ಲಿ ಯೋಚಿಸುತ್ತಿದ್ದರು. ಸಿದ್ದರಾಮಯ್ಯನವರಿಗೂ ಈ ಹಿನ್ನೆಲೆಯಿದೆ. 2012ನೇ ಸಾಲಿನಿಂದ ಪುಸ್ತಕಗಳನ್ನು ಖರೀದಿಸಿಲ್ಲವೆಂದರೆ ಈ ವರ್ಷಗಳಲ್ಲಿ ಪ್ರಕಟವಾದ ಮುಖ್ಯ ಪುಸ್ತಕಗಳು ನಮ್ಮ ಓದುಗರಿಗೆ ತಲುಪಬೇಡವೇ? ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಜ್ಞಾನವಿಸ್ತಾರಕ್ಕೆ ಇರುವ ಮಾರ್ಗವೆಂದರೆ ಅತ್ಯುತ್ತಮ ಪುಸ್ತಕಗಳ ಒಡನಾಟ. ಎಲ್ಲರೂ ಎಲ್ಲ ಪುಸ್ತಕಗಳನ್ನು ಕೊಂಡು ಓದುವುದು ಎಂತಹ ಸಮಾಜದಲ್ಲಿಯೂ ಅಸಾಧ್ಯ. ಅದಕ್ಕೆಂದೇ ಗ್ರಂಥಾಲಯಗಳಿರುವುದು. ಆದರೆ ಅವುಗಳ ಮೂಲ ಉದ್ದೇಶವೇ ಮರೆಯಾಗಿಬಿಟ್ಟರೇ?

ನಮ್ಮ ಮುಖ್ಯಮಂತ್ರಿಗಳು ತಮ್ಮೆಲ್ಲ ಒತ್ತಡಗಳ ನಡುವೆಯೂ ಈ ಬಗ್ಗೆ ಗಮನಹರಿಸಿ ಗ್ರಂಥಾಲಯ ಅಧಿನಿಯಮಕ್ಕೆ ತಿದ್ದುಪಡಿ ತಂದು ಗ್ರಂಥಾಲಯ ಸೆಸ್ ನೇರವಾಗಿ ಆ ಇಲಾಖೆಗೆ ಸಂದಾಯವಾಗುವಂತೆ ಮಾಡಿದರೆ ಅದು ಅವರು ಸಮಾಜಕ್ಕೆ ಕೊಡುವ ಅತ್ಯುತ್ತಮ ಕೊಡುಗೆಯಾಗುತ್ತದೆ.

ವೈಜ್ಞಾನಿಕ ಮಾರ್ಗದರ್ಶಿ ಸೂತ್ರಗಳು ಬೇಕು: ಗ್ರಂಥಾಲಯವೆಂದರೆ ಅದು ಪುಸ್ತಕಗಳ ಸಂಗ್ರಹತಾಣ ಮಾತ್ರವಲ್ಲ. ನಮ್ಮ ಗ್ರಂಥಾಲಯ ವಿಜ್ಞಾನಿಗಳಿಗೆ ಇದು ತಿಳಿಯದ ಸಂಗತಿಯೇನಲ್ಲ. ಆದರೆ ನಮ್ಮ ಗ್ರಂಥಾಲಯಗಳನ್ನು ಗಮನಿಸಿದರೆ ಈ ಬಗ್ಗೆ ಕೊಂಚ ಅನುಮಾನ ಮೂಡುತ್ತದೆ. ಒಂದು ಗ್ರಂಥಾಲಯವೆಂದರೆ ಏನಿಲ್ಲವೆಂದರೂ ನಮ್ಮ ಭಾಷೆಯ ಅತ್ಯುತ್ತಮ ಲೇಖಕರ ಎಲ್ಲ ಪುಸ್ತಕಗಳೂ ಸಿಗುವಂತಿರಬೇಕು. ನಿಜ, ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಳ್ಳಲು ಉನ್ನತ ಹಂತದ ಸಮಿತಿಯೊಂದನ್ನು ಸರ್ಕಾರ ಸದುದ್ದೇಶದಿಂದಲೇ ನೇಮಿಸುತ್ತದೆ. ಆದರೆ ನಾಲ್ಕಾರು ವರ್ಷಗಳಲ್ಲಿ ಪ್ರಕಟವಾದ ಸಾವಿರಾರು ಪುಸ್ತಕಗಳನ್ನು ಈ ಸಮಿತಿ ಹೇಗೆ ಪರಿಶೀಲಿಸುತ್ತದೆ? ಅವುಗಳನ್ನೆಲ್ಲ ಓದಿ ಆಯ್ಕೆಮಾಡಲು ಸಾಧ್ಯವೇ? ಅಲ್ಲದೆ ಪುಸ್ತಕ ಪ್ರಕಟಿಸಿದವರಿಗೆ ಗ್ರಂಥಾಲಯ ಕೊಳ್ಳುವಿಕೆ ವ್ಯವಹಾರದ ಸಂಗತಿಯೂ ಹೌದು. ಹೀಗಾಗಿ ಅನಗತ್ಯ ಪುಸ್ತಕಗಳ ರಾಶಿ ಗ್ರಂಥಾಲಯವನ್ನು ತುಂಬಿಕೊಳ್ಳುತ್ತದೆ. ಎಲ್ಲ ಗ್ರಂಥಾಲಯಗಳಿಗೂ ವೈಜ್ಞಾನಿಕವಾಗಿ ಕೆಲವು ಮಾರ್ಗದರ್ಶಕ ಸೂತ್ರಗಳನ್ನು ಸಿದ್ಧಪಡಿಸಿದರೆ ಆಗ ಈ ಸಮಸ್ಯೆಗೆ ಪರಿಹಾರ ಸಿಗಬಹುದು. ಉದಾಹರಣೆಗೆ ಆ ವರ್ಷ ಪ್ರಕಟವಾದ ಅತ್ಯುತ್ತಮ ಪುಸ್ತಕಗಳ ಒಂದು ಪಟ್ಟಿಯನ್ನು ಆ ಕ್ಷೇತ್ರದ ಪರಿಣತರಿಂದ ಪಡೆಯಬಹುದು. ಕೆಲವೊಮ್ಮೆ ನಮ್ಮ ಪತ್ರಿಕೆಗಳಲ್ಲಿ ಕೆಲವು ಉತ್ತಮ ಪುಸ್ತಕಗಳ ಬಗ್ಗೆ ಪ್ರಸ್ತಾಪವಾಗುತ್ತದೆ. ಅದನ್ನು ನಿರಂತರ ಗಮನಿಸುತ್ತಾ ಆ ಪುಸ್ತಕಗಳು ಗ್ರಂಥಾಲಯದಲ್ಲಿ ದೊರಕುವಂತೆ ಮಾಡಬೇಕು. ನಮ್ಮ ಮುಖ್ಯ ಲೇಖಕರ ಯಾದಿ ತಯಾರಿಸಿ ಅವರ ಪುಸ್ತಕ ಪ್ರಕಟವಾಗಿದ್ದರೆ ಆ ಪುಸ್ತಕ ಗ್ರಂಥಾಲಯಕ್ಕೆ ಸೇರುವಂತೆ ವ್ಯವಸ್ಥೆ ಮಾಡಬಹುದು. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಸಂಸ್ಕೃತಿ ಇಲಾಖೆ, ಉನ್ನತ ಅಧ್ಯಯನ ಕೇಂದ್ರಗಳು ಅತ್ಯುತ್ತಮ ಪುಸ್ತಕಗಳನ್ನು ಕಡಿಮೆ ಬೆಲೆಯಲ್ಲಿ ಅನುದಾನದ ನೆರವಿನಿಂದ ಪ್ರಕಟಮಾಡುತ್ತವೆ. ಅವೆಲ್ಲವನ್ನೂ ನೇರವಾಗಿ ಕೊಳ್ಳುವ ವ್ಯವಸ್ಥೆಯಿರಬೇಕು. ನನಗೆ ತಿಳಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಬೇರೆ ಬೇರೆ ಭಾಷೆಯ ಶ್ರೇಷ್ಠ ಲೇಖಕರ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸುತ್ತದೆ. ಅವುಗಳೆಲ್ಲವೂ ನಮ್ಮ ಗ್ರಂಥಾಲಯದಲ್ಲಿ ದೊರೆಯಬಾರದೇ? ಅವರು ಪುಸ್ತಕ ಕೊಳ್ಳಿ ಎಂದು ಅರ್ಜಿ ಹಾಕಿಕೊಳ್ಳುವುದಿಲ್ಲ, ಇವರು ಕೊಳ್ಳುವುದಿಲ್ಲ. ನಷ್ಟ ಯಾರಿಗೆ? ಸಾಮಾನ್ಯ ಆಸಕ್ತ ಓದುಗರಿಗೆ.

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿದ್ದಾಗ ಕಾರ್ಯಕಾರಿ ಸಮಿತಿಯಲ್ಲಿ ಒಂದು ಸಲಹೆ ನೀಡಿದ್ದೆ. ಒಂದು ವರ್ಷ ಸಾಹಿತ್ಯ ಸಮ್ಮೇಳನ ನಿಲ್ಲಿಸಿ, ಆ ಹಣದಲ್ಲಿ ಒಂದು ಪರಾಮರ್ಶನ ಗ್ರಂಥಾಲಯ ಸ್ಥಾಪಿಸೋಣ. ಕನ್ನಡದ ಮುಖ್ಯ ಪುಸ್ತಕಗಳೆಲ್ಲ ಅಲ್ಲಿ ಸಿಗುವಂತಿರಬೇಕು. ಅವುಗಳನ್ನು ವಿತರಿಸಬಾರದು. ಅಲ್ಲಿಯೇ ಕುಳಿತು ಓದಲು ಅವಕಾಶ ಕಲ್ಪಿಸಬೇಕು. ಆಗ ಅಧ್ಯಯನ ಮಾಡುವವರಿಗೆ ಅನುಕೂಲ ಒದಗಿಸಿದಂತಾಗುತ್ತದೆ. ಆದರೆ ನನ್ನ ಸಲಹೆಗೆ ಅಲ್ಲಿ ಒತ್ತಾಸೆ ಸಿಗಲಿಲ್ಲ. ಎಲ್ಲರಿಗೂ ಉತ್ಸವ ಬೇಕೆ ಹೊರತು ಅಧ್ಯಯನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯ ಕಲ್ಪಿಸುವತ್ತ ಗಮನವಿಲ್ಲ. ಈಗಲೂ ಕನ್ನಡದ ಎಲ್ಲ ಮುಖ್ಯ ಪುಸ್ತಕಗಳು ದೊರೆಯುವಂತಹ ಒಂದು ಗ್ರಂಥಾಲಯ ರಾಜ್ಯದಲ್ಲಿಲ್ಲ. ನಮ್ಮಲ್ಲಿ ಸುಮಾರು 5,777 ಗ್ರಾಮ ಪಂಚಾಯಿತಿಗಳಿವೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಒಂದು ಗ್ರಂಥಾಲಯವಿರಬೇಕೆಂದು ಕಡ್ಡಾಯ ಮಾಡಿ ಗ್ರಂಥಾಲಯಕ್ಕೆ ಬೇಕಾದ ಮೂಲಭೂತ ಅಗತ್ಯಗಳಾದ ಸುಸಜ್ಜಿತ ಕಟ್ಟಡ, ಕಪಾಟುಗಳು, ಅಗತ್ಯ ಗ್ರಂಥಗಳು, ಎಲ್ಲ ಪತ್ರಿಕೆಗಳು ಇವುಗಳನ್ನು ಕಲ್ಪಿಸಿಕೊಟ್ಟರೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವೇ ಬದಲಾಗಬಹುದು. ಗ್ರಂಥಾಲಯಗಳು ಈಗ ಮಾಹಿತಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕಾಗಿದೆ. ಹಳ್ಳಿಯ ರೈತನೊಬ್ಬನಿಗೆ ಅಗತ್ಯ ಮಾಹಿತಿಗಳನ್ನು ಇಂತಹ ಗ್ರಂಥಾಲಯಗಳಲ್ಲಿ ಸಿಗುವಂತೆ ಅದರ ಸ್ವರೂಪವನ್ನು ರೂಪಿಸಿದರೆ ನಮ್ಮ ಗ್ರಂಥಾಲಯಗಳು ಜನಸ್ನೇಹಿಯಾಗಬಹುದು. ಬೇಸಾಯ, ಜಾನುವಾರು, ಆರೋಗ್ಯ, ಸರ್ಕಾರದ ಸವಲತ್ತುಗಳು ಇತ್ಯಾದಿ ಸಂಗತಿಗಳ ಬಗ್ಗೆ ಅಲ್ಲಿ ಮಾಹಿತಿ ಸಿಗುವಂತಾದರೆ ಅದರಿಂದ ಜನಶಿಕ್ಷಣವೂ ಆಗುತ್ತದೆ, ಸಾಮಾಜಿಕವಾಗಿ ರೈತರ ಸ್ಥಿತಿಯೂ ಸುಧಾರಿಸುತ್ತದೆ. ಹೊರಟ್ಟಿಯವರು ಶಿಕ್ಷಣ ಸಚಿವರಾಗಿದ್ದಾಗ ಇಂಥದೊಂದು ಪ್ರಸ್ತಾಪವಿದ್ದಂತೆ ನನಗೆ ನೆನಪು.

ನಮ್ಮ ಗಡಿಪ್ರಾಂತ್ಯಗಳಲ್ಲಿಯೂ ಸುಸಜ್ಜಿತ ಗ್ರಂಥಾಲಯಗಳನ್ನು ಸ್ಥಾಪಿಸುವುದರ ಮೂಲಕ ಅಲ್ಲಿಯೂ ಕನ್ನಡ ಪರಿಸರವೊಂದನ್ನು ನಿರ್ಮಾಣ ಮಾಡಬಹುದು. ಗ್ರಂಥಾಲಯಗಳು ಪುಸ್ತಕ ಸಂಗ್ರಹ ಗೋಡೌನ್​ಗಳಲ್ಲ, ಅವು ಸಂಸ್ಕೃತಿ ಪ್ರಸರಣ ಕೇಂದ್ರಗಳೆಂಬ ಪರಿಕಲ್ಪನೆ ಬಳಕೆಗೆ ಬಂದರೆ ಸಾಮಾಜಿಕವಾಗಿ ಅದರ ಪರಿಣಾಮ ಇತ್ಯಾತ್ಮಕವಾಗಿರುತ್ತದೆ. ಅನೇಕ ಸಲ ರಾಜಕೀಯವಾಗಿ ಸಾಧಿಸಲಾಗದ್ದನ್ನು ಸಾಂಸ್ಕೃತಿಕ ನೆಲೆಯಲ್ಲಿ ಸಾಧಿಸಬಹುದು. ಭಾವೈಕ್ಯತೆಯ ಪರಿಕಲ್ಪನೆ ಸಾಕಾರಗೊಳ್ಳುವುದು ಈ ದಿಕ್ಕಿನಲ್ಲಿ ನಾವು ಕ್ರಿಯಾಶೀಲರಾಗಲು ಸಾಧ್ಯವಾದಾಗ.

ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಕೊಳ್ಳುವಾಗಲೂ ಎಂದೋ ನಿಗದಿಪಡಿಸಿದ ದರನಿಯಮಗಳೇ ಇಂದಿಗೂ ಜಾರಿಯಲ್ಲಿವೆ. 2010ರಲ್ಲಿ ಈ ನಿಯಮ ರೂಪುಗೊಂಡದ್ದು. ಇಂದಿಗೂ ಅದು ಪರಿಷ್ಕರಣೆಗೊಂಡಿಲ್ಲ. ಇದರಿಂದಾಗಿ ನಮ್ಮ ಗ್ರಂಥಾಲಯದ ವ್ಯವಸ್ಥೆ ಕಾಲಕಾಲಕ್ಕೆ ಸಮಕಾಲೀನ ಅಗತ್ಯಗಳಿಗೆ ತನ್ನನ್ನು ಸಜ್ಜುಗೊಳಿಸಿಕೊಳ್ಳದೆ ಸ್ಥಗಿತಗೊಂಡಿದೆಯೇ ಎಂಬ ಅನುಮಾನ ಮೂಡುತ್ತದೆ. ಮತ್ತೊಂದು ಮುಖ್ಯ ಸಂಗತಿ- ನಮ್ಮ ಗ್ರಂಥಾಲಯಗಳು ಸಮೀಪದ ಶಾಲಾ ಕಾಲೇಜುಗಳ ಜೊತೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ತಮ್ಮ ಓದುಗ ವಲಯವನ್ನು ವಿಸ್ತರಿಸಿಕೊಳ್ಳಬಹುದು. ಹೊಸ ತಲೆಮಾರಿನಲ್ಲಿ ಪುಸ್ತಕ ಸಂಸ್ಕೃತಿಯನ್ನು ರೂಢಿಸಬಹುದು. ಹೀಗೆ ಸಾಧ್ಯತೆಗಳು ಅನೇಕ ಇವೆ. ಸ್ವಲ್ಪ ಆಸಕ್ತಿ ವಹಿಸಿದರೆ ಗ್ರಂಥಾಲಯ ಚಳುವಳಿಯೊಂದನ್ನು ರೂಪಿಸಬಹುದು. ಅದು ಪ್ರಗತಿಪರ ಸಾಮಾಜಿಕ ಚಳುವಳಿಗೂ ಕಾರಣವಾಗಬಲ್ಲುದು. ಆದರೆ ಗ್ರಂಥಾಲಯಗಳಿಗೆ ಸಂಬಂಧಿಸಿದ ಜಡಮನಸ್ಸುಗಳನ್ನು ಕ್ರಿಯಾಶೀಲಗೊಳಿಸುವುದು ಹೇಗೆ?

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *