ಚಾಮರಾಜನಗರ: ನಗರದ ಮನೆಯೊಂದರದಲ್ಲಿ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಸಿಲುಕಿದ್ದ ತಂದೆ ಮತ್ತು ಮೂವರು ಮಕ್ಕಳು ಪಾರಾಗಿದ್ದಾರೆ. ಬೆಲೆ ಬಾಳುವ ವಸ್ತುಗಳು ಸುಟ್ಟು ಹೋಗಿವೆ.
ನಗರದ ನಾರಾಯಣಸ್ವಾಮಿ ದೇವಸ್ಥಾನದ ಹಿಂಭಾಗ ಇರುವ ನೀಲಮ್ಮ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಟೈಲರ್ ವಿಶ್ವನಾಥ್ ಮನೆಯಲ್ಲಿ ಭಾನುವಾರ ಅವಘಡ ಸಂಭವಿಸಿದೆ. ವಿಶ್ವನಾಥ್ ಮತ್ತು ಮಕ್ಕಳಾದ ರಾಜೇಂದ್ರ, ರೋಹಿಣಿ, ಶಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಭಾನುವಾರ ಬೆಳಗ್ಗೆ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಬೀರು, ಹೊಲಿಗೆ ಯಂತ್ರ, ಬಟ್ಟೆಗಳು ಮತ್ತು ಮನೆಯ ಬಾಗಿಲು ಎಲ್ಲವೂ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಮನೆಯ ಒಳಗೆ ಇದ್ದ ವಿಶ್ವನಾಥ್, ರಾಜೇಂದ್ರ, ರೋಹಿಣಿ, ಶಕ್ತಿ ಸಿಲುಕಿಕೊಂಡಿದ್ದರು. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ತಂದೆ ಮತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
TAGGED:chamarajanagara news